Asianet Suvarna News Asianet Suvarna News

ಬೆಂಗ್ಳೂರಿನ ಮೋದಿ ಶೋಗೆ ಭರ್ಜರಿ ಸಿದ್ಧತೆ: 3 ಲಕ್ಷ ಜನ ಭಾಗಿ ನಿರೀಕ್ಷೆ

108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ‘ಪ್ರಗತಿಯ ಪ್ರತಿಮೆ’ಯನ್ನು ಅನಾವರಣ ಮಾಡಲಿರುವ ಪ್ರಧಾನಿ ಮೋದಿ

BJP Preparation for the PM Narendra Modi Show in Bengaluru grg
Author
First Published Oct 28, 2022, 6:09 AM IST

ಬೆಂಗಳೂರ(ಅ.28):  ಬರುವ ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಒಟ್ಟು ನಾಲ್ಕು ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳುವ ಅವರು ಮೊದಲಿಗೆ ಅಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ‘ಪ್ರಗತಿಯ ಪ್ರತಿಮೆ’ಯನ್ನು ಅನಾವರಣ ಮಾಡಲಿದ್ದಾರೆ.

ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸುಮಾರು 5 ಸಾವಿರ ಕೋಟಿ ರು. ವೆಚ್ಚದಲ್ಲಿ ಈ ಟರ್ಮಿನಲ್‌ ಅನ್ನು ನಿರ್ಮಾಣ ಮಾಡಲಾಗಿದೆ. ವರ್ಷಕ್ಕೆ 2.5 ಕೋಟಿ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವನ್ನು ಇದು ಹೊಂದಿದೆ. ಉದ್ಯಾನವನದ ವಿನ್ಯಾಸವನ್ನು ಈ ಟರ್ಮಿನಲ್‌ ಹೊಂದಿದ್ದು ರಾಮಾಯಣ, ಮಹಾಭಾರತ ಕಾಲದ ಸಸ್ಯಗಳನ್ನು ಗುರುತಿಸಿ ನೆಡಲಾಗಿದೆ. ನೀರಿನ ಮರುಬಳಕೆ, ವಿದ್ಯುತ್‌ ಬಳಕೆಯಲ್ಲಿ ಸುಸ್ಥಿರತೆಯನ್ನು ಹೊಂದಿರುವ ಟರ್ಮಿನಲ್‌ ಇದಾಗಿದೆ.

ಪ್ರಧಾನಿ ಸ್ವಾಗತಕ್ಕಾಗಿ ಹಾಕಿದ್ದ ರಸ್ತೇಲಿ ಗುಂಡಿ: ಪಿಎಂ ಆಫೀಸ್‌ ಮಾಹಿತಿ ಕೇಳಿದ್ರೂ BBMP ಉದಾಸೀನ

ಇದೇ ವೇಳೆ ಅವರು ವಿಮಾನ ನಿಲ್ದಾಣದ ಆವರಣದಲ್ಲಿ ಬೆಂಗಳೂರು ಟೆಕ್‌ ಸಮ್ಮಿಟ್‌ ಕುರಿತಂತೆ ಕೈಗಾರಿಕೋದ್ಯಮಿಗಳ ಜತೆ ಒಂದು ಗಂಟೆ ಸಂವಾದ ನಡೆಸಲಿದ್ದಾರೆ. ಅಲ್ಲದೆ, ಭಾರತದ 5ನೇ ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ಗೆ ಚಾಲನೆ ನೀಡಲಿದ್ದಾರೆ. ಈ ರೈಲು ಮೈಸೂರು- ಬೆಂಗಳೂರು- ಚೆನ್ನೈ ಮಾರ್ಗದಲ್ಲಿ ಸಂಚರಿಸಲಿದೆ.

ನಂತರ ವಿಮಾನ ನಿಲ್ದಾಣದ ಆವರಣದ ಸಮೀಪದಲ್ಲಿ ಬೃಹತ್‌ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಲಿದ್ದಾರೆ. ಈ ಸಮಾವೇಶಕ್ಕೆ ಸುಮಾರು ಮೂರು ಲಕ್ಷ ಜನರು ಸೇರುವ ಸಾಧ್ಯತೆಯಿದೆ. ಇದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ನಾಯಕರು ಭರದ ಸಿದ್ಧತೆ ನಡೆಸಿದ್ದಾರೆ.

'ಆದಿ ಅನಂತ ಶಿವ...' ಕೇದಾರನಾಥದ ಶಿವಸ್ಥಳದಲ್ಲಿ ಮೋದಿ!

ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ದೀಪಾವಳಿ ಹಬ್ಬದ ದಿನ ಸಚಿವರೊಂದಿಗೆ ಸಭೆ ನಡೆಸಿ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಹಳೆ ಮೈಸೂರು ಭಾಗದ ಮಹತ್ವದ ಕಾರ್ಯಕ್ರಮ ಇದಾಗಿರುವುದರಿಂದ ಸಾರ್ವಜನಿಕ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಯಾವ್ಯಾವ ಕಾರ‍್ಯಕ್ರಮ?

1. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆ
2. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2ನೇ ಟರ್ಮಿನಲ್‌ ಲೋಕಾರ್ಪಣೆ
3. ಬೆಂಗಳೂರು ಟೆಕ್‌ ಸಮಿತ್‌ ಬಗ್ಗೆ ಕೈಗಾರಿಕೋದ್ಯಮಿಗಳ ಜೊತೆ ಸಂವಾದ
4. ಮೈಸೂರು-ಬೆಂಗಳೂರು-ಚೆನ್ನೈ ಮಧ್ಯೆ ವಂದೇ ಭಾರತ್‌ ರೈಲಿಗೆ ಚಾಲನೆ
5. ಬೆಂಗಳೂರಿನಲ್ಲಿ ಬೃಹತ್‌ ಸಾರ್ವಜನಿಕ ಸಮಾರಂಭದಲ್ಲಿ ಮೋದಿ ಭಾಷಣ
 

Follow Us:
Download App:
  • android
  • ios