ಗುಂಡ್ಲುಪೇಟೆಯ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.
ಚಾಮರಾಜನಗರ (ಜ.25): ನಾನೂ ಎಲ್ಲರಂತೆ ಕಾಲೇಜಿನಲ್ಲಿ ಕಾಂಪೌಂಡ್ ಮೇಲೆ ಕುಳಿತು ಕಾಲ ಕಳೆದವನು. ಅಕಸ್ಮಾತ್ ಯಾರಾದರೂ ಆ ವಯಸ್ಸಿನಲ್ಲಿ ಗಲಾಟೆ ಮಾಡಿಲ್ಲ, ಕಾಂಪೌಂಡ್ ಮೇಲೆ ಕುಳಿತಿಲ್ಲ ಎಂದರೆ ಅವರಲ್ಲಿ ಏನೋ ವ್ಯತ್ಯಾಸ ಇದೆ ಎಂದೇ ಅರ್ಥ. ಯಾಕೆಂದರೆ ಆ ವಯಸ್ಸಿನಲ್ಲಿ ಅದೆಲ್ಲವನ್ನೂ ಮಾಡುವುದು ಸಹಜ ಮತ್ತು ಮಾಡಬೇಕಾದ ಕೆಲಸಗಳೇ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ತಮ್ಮ ಹಳೆಯ ಶಾಲಾ-ಕಾಲೇಜು ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಖಾಸಗಿ ಶಾಲೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಬಿಎಲ್ ಸಂತೋಷ್ ಅವರು,ತಮ್ಮ ಹಳೆಯ ಶಾಲಾ-ಕಾಲೇಜು ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು. ವೇದಿಕೆಯ ಮೇಲೆ ಗಂಭೀರ ರಾಜಕಾರಣ ಬಿಟ್ಟು, ವಿದ್ಯಾರ್ಥಿ ಜೀವನದ ತುಂಟಾಟಗಳನ್ನು ಹಂಚಿಕೊಂಡರು.
ಮಾಸ್ಟರ್ ಭಯಕ್ಕೆ ಕ್ಲಾಸಿಗೆ ಓಡುತ್ತಿದ್ದ ದಿನಗಳು
ತಮ್ಮ ಕಾಲೇಜು ದಿನಗಳ ನೆನಪನ್ನು ಹಂಚಿಕೊಂಡ ಬಿ.ಎಲ್. ಸಂತೋಷ್, 'ನಮ್ಮ ಕಾಲೇಜಿನ ಹತ್ತಿರ ದೂರದಲ್ಲಿ ಒಂದು ಜನತಾ ಹೋಟೆಲ್ ಇತ್ತು. ಅಲ್ಲಿ ನಾವೆಲ್ಲಾ ಕಾಂಪೌಂಡ್ ಮೇಲೆ ಕುಳಿತಿರುತ್ತಿದ್ದೆವು. ಆದರೆ ನಮ್ಮ ಶಂಕರನ್ ಮಾಸ್ಟರ್ ಜನತಾ ಹೋಟೆಲ್ ಹತ್ತಿರ ಬರುತ್ತಿದ್ದಂತೆ, ತಡಮಾಡದೆ ಕಾಂಪೌಂಡ್ ಇಳಿದು ಓಡಿ ಹೋಗಿ ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತಿದ್ದೆವು ಎಂದು ತಮ್ಮ ಕಾಲೇಜು ದಿನಗಳ ಶಿಸ್ತು ಮತ್ತು ಭಯದ ಕ್ಷಣಗಳನ್ನು ನೆನಪಿಸಿಕೊಂಡರು.
ನೆಚ್ಚಿನ ಶಿಕ್ಷಕರನ್ನು ಸ್ಮರಿಸಿದ ಸಂಘಟನಾ ಚತುರ
ತಮ್ಮ ವ್ಯಕ್ತಿತ್ವ ರೂಪಿಸಿದ ಗುರುಗಳನ್ನು ನೆನೆದ ಅವರು, ಶಾಲಾ ದಿನಗಳ ರಾಧಾಮಣಿ ಟೀಚರ್ ಇಂದಿಗೂ ನೆನಪಾಗುತ್ತಾರೆ ಹಾಗೂ ಕಾಲೇಜು ದಿನಗಳ ಗಣಿತದ ಶಂಕರನ್ ಮಾಸ್ಟರ್ ಅಚ್ಚಳಿಯದ ನೆನಪಾಗಿ ಉಳಿದಿದ್ದಾರೆ ಎಂದರು. ಶಿಕ್ಷಣದ ಜೊತೆಗೆ ವಿದ್ಯಾರ್ಥಿ ಜೀವನದ ಈ ಸುಂದರ ಕ್ಷಣಗಳೇ ಜೀವನದ ಅತಿ ದೊಡ್ಡ ಆಸ್ತಿ ಎಂದು ಅವರು ಅಭಿಪ್ರಾಯಪಟ್ಟರು.


