'ಸಂವಿಧಾನ ಬದಲಿಸಿದ್ದು ಯಾರು?': ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಜನ್ಮ ಜಾಲಾಡಿದ ಬಿಎಲ್ ಸಂತೋಷ್!
ಡಾ. ಅಂಬೇಡ್ಕರ್ ಅವರ ಹೆಸರನ್ನು ಕೇವಲ ಭಾಷಣಕ್ಕೆ ಮಾತ್ರ ಬಳಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಾಗ್ದಾಳಿ ನಡೆಸಿದ್ದಾರೆ. ಅಂಬೇಡ್ಕರ್ ಅವರನ್ನು ಬದುಕಿದ್ದಾಗಲೂ, ತೀರಿಕೊಂಡ ನಂತರವೂ ಕಾಂಗ್ರೆಸ್ ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.
ಮಂಗಳೂರು (ಡಿ.21): ಡಾ. ಅಂಬೇಡ್ಕರ್ ಅವರ ಹೆಸರನ್ನು ಟೂಲ್ ರೀತಿ ಉಪಯೋಗಿಸಲಾಗುತ್ತಿತ್ತು. ಆದರೆ ಇಂದು ಟೂಲ್ ತರ ಉಪಯೋಗಿಸಲು ಅವರಿಗೆ ಸಾಧ್ಯವಿಲ್ಲ. ನಾವು ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನುಡಿದರು.
ಮಂಗಳೂರಿನಲ್ಲಿ 'ಸಂವಿಧಾನ ಬದಲಿಸಿದ್ದು ಯಾರು' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಖರೀದಿ ಮಾಡಿ ಬ್ರಾಂಡ್ ಮಾಡಿಟ್ಟುಕೊಂಡವರು ಅದನ್ನ ಕೇವಲ ಭಾಷಣಕ್ಕಾಗಿ ಮಾತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಅಂಬೇಡ್ಕರ್, ಸಂವಿಧಾನವನ್ನು ತಾವೇ ಕಾಂಟ್ರಾಕ್ಟ್ ತಗೊಂಡಿದ್ದೇವೆ ಅನ್ನೋ ರೀತಿ ಮಾತನಾಡುತ್ತಿದ್ದಾರೆ. ಆದ್ರೆ ಅಂಬೇಡ್ಕರ್ ಎಲ್ಲರಿಗೂ ಸೇರಿದವರಾಗಿದ್ದಾರೆ ಎಂದರು.
ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಕಾಂಗ್ರೆಸ್‌ನಿಂದ ಯಾಕೆ ಹೊರಬಂದರು ಎಂಬುದು ಗೊತ್ತೇ ಇದೆ. ಕಾಂಗ್ರೆಸ್ ನ ವೋಟ್‌ಬ್ಯಾಂಕ್‌ನ ಹಪಾಹಪಿಗೆ ಬೇಸತ್ತು ಹೊರಬಂದರು. ಸಂವಿಧಾನದಲ್ಲಿ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳ ಸೇರ್ಪಡೆಗೆ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಆದರೆ ಅಂಬೇಡ್ಕರ್ ವಿರೋಧದ ನಡುವೆಯೂ ಜಾತ್ಯಾತೀತ, ಸಮಾಜವಾದ ಸೇರಿಸಿದ ಕಾಂಗ್ರೆಸ್‌ನವರು ಇಂದು ಕೇವಲ ಚುನಾವಣೆಗಾಗಿ ಮಾತ್ರ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಸಿಟಿ ರವಿ ಅವರನ್ನ ರಾತ್ರಿಯಿಡೀ ಸುತ್ತಾಡಿಸಿದ ಪೊಲೀಸರ ಕ್ರಮ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ, ಹೇಳಿದ್ದೇನು?
ಇಂದು ಎಲ್ಲದಕ್ಕೂ ಅಂಬೇಡ್ಕರ್ ಜಪ ಮಾಡುವ ಕಾಂಗ್ರೆಸ್‌ನವರು ಹಿಂದೆ ಅಂಬೇಡ್ಕರ್‌ಗೆ ಅವಮಾನ ಮಾಡಿದರು, ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿದರು. ಬದುಕಿದ್ದಾಗ ಬಿಡಿ ಅಂಬೇಡ್ಕರ್ ತೀರಿಕೊಂಡ ಮೇಲೆಯೂ ಅವರ ಪಾರ್ಥೀವ ಶರೀರವನ್ನು ದೆಹಲಿಯಲ್ಲಿ ಅಂತಿಮ ಸಂಸ್ಕಾರ ಮಾಡಲು ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ, ಕಾಂಗ್ರೆಸ್ ಕಾಲದಲ್ಲಿ ಅಂಬೇಡ್ಕರ್ ಸ್ಮಾರಕ ನಿರ್ಮಾಣ ಮಾಡೋದಕ್ಕೂ ಸಹ ಸಾಧ್ಯವಾಗಲಿಲ್ಲ. ಅಂಬೇಡ್ಕರಗೆ ಅವಮಾನ ಮಾಡಿಕೊಂಡೇ ಬಂದಿರುವ ಕಾಂಗ್ರೆಸ್‌ಗೆ ಇಂದು ಅಂಬೇಡ್ಕರ್ ಹೆಸರು ಹೇಳಲು ಯಾವ ನೈತಿಕತೆ ಇದೆ? ಎಂದು ಹರಿಹಾಯ್ದರು.
ಮಾತು ಮಾತಿಗೆ ಅಂಬೇಡ್ಕರ್ ಎನ್ನುವ ಕಾಂಗ್ರೆಸ್‌ವರಿಗೆ ಅಂಬೇಡ್ಕರ್‌ಗೆ ಭಾರತ ರತ್ನ ಕೊಡಬೇಕು ಎನ್ನಿಸಲಿಲ್ಲ. ಬದುಕಿದ್ದಾಗ ಅಂಬೇಡ್ಕರ್ ಅವರಿಗೆ ಕನಿಷ್ಟ ಗೌರವ ಕೊಡದ ಕಾಂಗ್ರೆಸ್ ಇವತ್ತು 170 ರೂಪಾಯಿ ಕೊಟ್ಟು ಖರೀದಿಸಿದ ಸಂವಿಧಾನದ ಪುಸ್ತಕ ಇಟ್ಟುಕೊಂಡು ಒಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಕಾಂಗ್ರೆಸ್ ನಡುವೆ ನಡೆವಳಿಕೆಯಲ್ಲಿ ಬಹಳ ವ್ಯತ್ಯಾಸವಿದೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಂವಿಧಾನ ಬದಲು ಮಾಡ್ತಾರೆ ಅಂತಾ ಹೇಳಿದ್ರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬದಲಾಯ್ತಾ? ನಿಜವಾಗಿಯೂ ಸಂವಿಧಾನಕ್ಕೆ ಗೌರವ ಕೊಟ್ಟವರು ಬಿಜೆಪಿಯವರು. 370 ನೇ ವಿಧಿಯನ್ನು ಅಂಬೇಡ್ಕರ್ ಅವರ ವಿರೋಧದ ನಡುವೆಯೂ ನೆಹರು ಸೇರಿಸಿದ್ರು. ಆದ್ರೆ ಈ ವಿಧಿಯನ್ನು ಕಿತ್ತೆಸೆಯುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ನಮ್ಮ ನಡೆವಳಿಕೆ ಏನು, ಕಾಂಗ್ರೆಸ್ ನಡೆವಳಿಕೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಸಂವಿಧಾನದ ಸ್ವರೂಪವನ್ನೇ ಬದಲಿಸಿದ್ದು ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ. ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಇದನ್ನು ಅರ್ಥಮಾಡಿಸೋಕೆ ಆಗೊಲ್ಲ. ಒಂದಷ್ಟು ವಯಸ್ಸು ಆದ ಬಳಿಕ ಏನೇ ಹೇಳಿದರೂ ಅರ್ಥ ಆಗೋದಿಲ್ಲ. ದೇಶ ಕಂಡಂತಹ ಡಿಕ್ಟೇಟರ್ ಚೀಫ್ ಇಂದಿರಾ ಗಾಂಧಿ. ಎಮರ್ಜೆನ್ಸಿ ಟೈಮ್‌ನಲ್ಲಿ ಸಿದ್ದರಾಮಯ್ಯನವರು ಇಂದಿರಾಗಾಂಧಿಗೆ ಬಾಯಿಗೆ ಬಂದಹಾಗೆ ಬೈದಿದ್ರು. ಆದ್ರೆ ಅದೇ ಸಿದ್ದರಾಮಯ್ಯ ಇವತ್ತು ಇಂದಿರಾ ಗಾಂಧಿಗೆ ಜೈ ಎನ್ನುತ್ತಿದ್ದಾರೆ. ಅದೇ ಸಿದ್ದರಾಮಯ್ಯ ಇಂದು ಅವರದ್ದೇ ಫೋಟೊ ಹಾಕಿ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಮಾಡಿರುವ ಅನ್ಯಾಯಗಳು ಒಂದೆರಡಲ್ಲ ಅನೇಕ ಇವೆ. ತಮ್ಮ ಆಳ್ವಿಕೆಯ ಕಾಲದಲ್ಲಿ ಎಲ್ಲವನ್ನೂ ಧ್ವಂಸ ಮಾಡಿದವರು ಕಾಂಗ್ರೆಸ್ ನವರೇ ಎಂದು ಹರಿಹಾಯ್ದರು.