Asianet Suvarna News Asianet Suvarna News

ಕೇಂದ್ರದ ₹5495 ಕೋಟಿ ಪಡೆವಲ್ಲಿ ಬಿಜೆಪಿ ಸಂಸದರು ವಿಫಲ: ಸಿದ್ದು

  • ಕೇಂದ್ರದ .5495 ಕೋಟಿ ಪಡೆವಲ್ಲಿ ಬಿಜೆಪಿ ಸಂಸದರು ವಿಫಲ: ಸಿದ್ದು
  •  ಕುಷ್ಟಗಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ
  • ಬಿಜೆಪಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ
BJP MP failed to get 5495 crore from Centre govt says Siddaramaiah rav
Author
First Published Dec 17, 2022, 12:28 AM IST

 ಕುಷ್ಟಗಿ (ಕೊಪ್ಪಳ) (ಡಿ.17) : ರಾಜ್ಯದಲ್ಲಿ ಬಿಜೆಪಿಯ 25 ಲೋಕಸಭೆ ಸದಸ್ಯರಿದ್ದರೂ ಯಾರೊಬ್ಬರೂ ಪ್ರಧಾನಿ ಮೋದಿ ಬಳಿ ಬಾಯಿ ಬಿಡುತ್ತಿಲ್ಲ. 15ನೇ ಹಣಕಾಸು ಆಯೋಗದಲ್ಲಿ ವಿಶೇಷ ನೆರವು .5,495 ಕೋಟಿಯನ್ನು ಕೇಂದ್ರದಿಂದ ಪಡೆಯಲು ಇವರಿಂದ ಆಗಲಿಲ್ಲ. ಒಂದು ವೇಳೆ ಪ್ರಶ್ನಿಸಿದ್ದರೆ ಅದೇ ದುಡ್ಡು ಕೋವಿಡ್‌ ಸಮಯದಲ್ಲಿ ಉಪಯೋಗಕ್ಕೆ ಬರುತ್ತಿತ್ತು ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಶುಕ್ರವಾರ ಇಲ್ಲಿ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ‘ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ’ದಲ್ಲಿ ಮಾತನಾಡಿ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು. ಬಿಜೆಪಿಯಲ್ಲಿ ಆರೆಸ್ಸೆಸ್‌ನವರು ಕೂರು ಅಂದರೆ ಕೂರಬೇಕು, ನಿಲ್ಲು ಅಂದರೆ ನಿಲ್ಲಬೇಕು. ಇವರಿಗೆಲ್ಲ ಮೋದಿ ಅವರು ಹೆಡ್‌ ಮಾಸ್ಟರ್‌, ಅಮಿತ್‌ ಶಾ ಅಸಿಸ್ಟೆಂಟ್‌ ಹೆಡ್‌ ಮಾಸ್ಟರ್‌. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿಯ ಯಾವ ನಾಯಕರಿಗೂ ಇವರಿಬ್ಬರ ಬಳಿ ಮಾತನಾಡುವ ಧೈರ್ಯ ಇಲ್ಲ. ಅವರು ಹೇಳಿದ್ದನ್ನಷ್ಟೇ ಕೇಳಿ ಬರಬೇಕು. ಇಂಥ ಸರ್ಕಾರ ನಮಗೆ ಬೇಕಾ ಎಂದು ಲೇವಡಿ ಮಾಡಿದರು.

ticket fight: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸ್ತಾರಾ?

ಸ್ವತಃ ನಾನೇ ಪ್ರಧಾನಿ ಮೋದಿಯವರ ಬಳಿ ಮಹದಾಯಿ ಯೋಜನೆ ಕುರಿತು ಚರ್ಚಿಸಲು ಹೋದಾಗ ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಇತ್ಯರ್ಥ ಮಾಡಿ ಅಂದರೆ ಕ್ರಮ ಕೈಗೊಳ್ಳಲಿಲ್ಲ. ಅಂತಾರಾಜ್ಯ ನೀರಾವರಿ ಸಮಸ್ಯೆ ಪರಿಹಾರಕ್ಕೆ ಮೋದಿ ಅವರು ಏನೂ ಮಾಡಿಲ್ಲ ಎಂದು ಕಿಡಿಕಾರಿದರು.

ಸರ್ಕಾರದಿಂದ ಜನರಿಗೆ ಟೋಪಿ: ಬಿಜೆಪಿ ಸರ್ಕಾರವು ಸಾರ್ವಜನಿಕರಿಗೆ ಟೋಪಿ ಹಾಕಿದೆ, ಮೋಸ ಮಾಡುತ್ತಿದೆ. ನಡ್ಡಾ ಅವರು ಬಿಜೆಪಿಯದು ಲಂಚರಹಿತಸರ್ಕಾರ ಅಂದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ರಾಜ್ಯದಲ್ಲಿ 40 ಪರ್ಸೆಂಟ್‌ ಸರ್ಕಾರ ಇದೆ ಎಂದು ಜನರೇ ಹೇಳುತ್ತಿದ್ದಾರೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಕೊಡಲಾಗುವುದು. ಒಂದು ವರ್ಷಕ್ಕೆ ಐದು ಸಾವಿರ ಕೋಟಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು. ಎಲ್ಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಒಂದೂವರೆ ಲಕ್ಷ ಕೋಟಿ ಅನುದಾನವನ್ನು ನೀರಾವರಿಗಾಗಿ ಮೀಸಲಿಡಲಾಗುವುದು ಎಂದರು.

ಟಿಕೆಟ್‌ಗಾಗಿ ಸಿದ್ದರಾಮಯ್ಯ ಮುಂದೆ ಕಾಂಗ್ರೆಸ್‌ ಆಕಾಂಕ್ಷಿಗಳ ಬಲಪ್ರದರ್ಶನ..!

ಕುಷ್ಟಗಿಯಿಂದ ಸ್ಪರ್ಧಿಸಲ್ಲ: ಸಿದ್ದು

ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಹಾಗೂ ಮಾಜಿ ಶಾಸಕ ಹಸನ್‌ಸಾಬ್‌ ದೋಟಿಹಾಳ ಅವರು ತಮ್ಮನ್ನು ಕುಷ್ಟಗಿಯಿಂದ ಸ್ಪರ್ಧಿಸುವಂತೆ ನೀಡಿದ ಆಹ್ವಾನವನ್ನು ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿದ್ದಾರೆ. ಭಯ್ಯಾಪುರ, ದೋಟಿಹಾಳ ನನ್ನನ್ನು ಮುಂದಿನ ಚುನಾವಣೆಯಲ್ಲಿ ಕುಷ್ಟಗಿಯಿಂದ ಸ್ಪರ್ಧಿಸಲು ಕೋರಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕುಷ್ಟಗಿಯಿಂದ ಸ್ಪರ್ಧೆ ಮಾಡಲ್ಲ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಎಂದು ಸಮಾರಂಭದಲ್ಲಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Follow Us:
Download App:
  • android
  • ios