ticket fight: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸ್ತಾರಾ?
- ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸ್ತಾರಾ?
- ಸಿದ್ದು ಕರೆತರಲು ಶ್ರೀನಿವಾಸಗೌಡ ಯತ್ನ, ಬಿಜೆಪಿಯಿಂದ ವರ್ತೂರು
- ಮುಳಬಾಗಿಲಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಪಕ್ಷೇತರ ನಾಗೇಶ್ ಯತ್ನ
- ಶ್ರೀನಿವಾಸಪುರದಲ್ಲಿ ರಮೇಶ್, ವೆಂಕಟಶಿವಾರೆಡ್ಡಿ ಫೈಟ್ ಪಕ್ಕಾ
- ಮಾಲೂರಲ್ಲಿ ಆಪ್ ಎಂಟ್ರಿ, ಚತುಷ್ಕೋನ ಸ್ಪರ್ಧೆ ಸಾಧ್ಯತೆ
ಸ್ಕಂದಕುಮಾರ್ ಬಿ.ಎಸ್
ಕೋಲಾರ (ಡಿ.14) : ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ. ಆ ಪೈಕಿ ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ 4 ಹಾಗೂ ಜೆಡಿಎಸ್ ಒಂದು ಸ್ಥಾನಗಳನ್ನು ಹೊಂದಿದ್ದರೆ, ಪಕ್ಷೇತರರಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ ಎಚ್.ನಾಗೇಶ್, ಬಿಜೆಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್, ಎಲ್ಲಾ 6 ಕ್ಷೇತ್ರಗಳಲ್ಲೂ ತಮ್ಮ ಪ್ರಾಬಲ್ಯ ಹೊಂದಿವೆ. ಜಿಲ್ಲೆಯಲ್ಲಿ ಒಕ್ಕಲಿಗರು ಹಾಗೂ ಎಸ್‌ಸಿ ಜನಾಂಗದವರು ಪ್ರಬಲರಾಗಿದ್ದಾರೆ. ಜೊತೆಗೆ, ಮುಸ್ಲಿಂ, ಕುರುಬ, ಬಲಿಜಿಗ ಜಾತಿಯವರೂ ಸಾಕಷ್ಟುಸಂಖ್ಯೆಯಲ್ಲಿದ್ದಾರೆ.
ಕಾಂಗ್ರೆಸ್‌ನಲ್ಲಿ ಕೋಲಾರ ಕ್ಷೇತ್ರಕ್ಕೆ ಸಿದ್ಧರಾಮಯ್ಯ ಬರಲಿದ್ದಾರೆ ಎನ್ನುವ ಕಾರಣದಿಂದ ಆ ಕ್ಷೇತ್ರದ ಟಿಕೆಟ್ ಹಂಚಿಕೆ ಕುತೂಹಲ ಕೆರಳಿಸಿದೆ. ಮುಳಬಾಗಿಲು ಕ್ಷೇತ್ರದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರದ ವಿವಾದ ನ್ಯಾಯಾಲಯದಲ್ಲಿದ್ದು, ತೀರ್ಪು ಹೊರಬೀಳದೆ ಇರುವುದರಿಂದ ಅಲ್ಲಿಯೂ ಟಿಕೆಟ್ ಹಂಚಿಕೆ ವಿಚಾರ ಗೊಂದಲದಲ್ಲಿದೆ. ಉಳಿದಂತೆ ಶ್ರೀನಿವಾಸಪುರ, ಬಂಗಾರಪೇಟೆ, ಕೆಜಿಎಫ್, ಮಾಲೂರಿನಲ್ಲಿ ಹಾಲಿ ಕಾಂಗ್ರೆಸ್ ಶಾಸಕರೇ ಇರುವುದರಿಂದ ಅವರೇ ಪ್ರಬಲ ಸ್ಪರ್ಧಾಳುಗಳು. ಜೊತೆಗೆ, ಕೋಲಾರ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯೂ ಹೌದು.
ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲ, ಕೆ.ಎಚ್.ಮುನಿಯಪ್ಪ ಸ್ಪಷ್ಟನೆ
ಇನ್ನು, ಪಂಚರತ್ನ ಯಾತ್ರೆ ಮೂಲಕ ಜಿಲ್ಲಾ ಪ್ರವಾಸ ಕೈಗೊಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಕೆಲವು ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಹೋಗಿದ್ದಾರೆ.
1. ಶ್ರೀನಿವಾಸಪುರ: ಇಲ್ಲಿ ವೆಂಕಟ್, ರಮೇಶ್ ಮಧ್ಯೆಯೇ ಪೈಪೋಟಿ
ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ.ಆರ್. ರಮೇಶ್‌ಕುಮಾರ್, ಮಾವು ಮಂಡಳಿಯ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ ಹಾಗೂ ಜೆಡಿಎಸ್‌ನಿಂದ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಬೆಂಗಳೂರಿನ ಬಿದರಹಳ್ಳಿಯ ಜಿ.ಪಂ.ಮಾಜಿ ಸದಸ್ಯ ಎಸ್.ಎಲ್.ಎನ್. ಮಂಜುನಾಥ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ನಡುವೆ ಪೈಪೋಟಿಯಿದೆ. ಈ ಕ್ಷೇತ್ರದಲ್ಲಿ ವೆಂಕಟಶಿವಾರೆಡ್ಡಿ ಮತ್ತು ರಮೇಶ್‌ಕುಮಾರ್ ಮಧ್ಯೆಯಾರೇ, ಯಾವ ಪಕ್ಷದಿಂದ ಸ್ಪರ್ಧೆ ಮಾಡಿದರೂ ಗೆಲುವಿನ ಅಂತರ 5 ಸಾವಿರ ಮತ ದಾಟುವುದಿಲ್ಲ. ಕಳೆದ ಚುನಾವಣೆಯಲ್ಲಿ ವೆಂಕಟಶಿವಾರೆಡ್ಡಿ 10 ಸಾವಿರ ಮತಗಳಿಂದ ಪರಾಭವಗೊಂಡಿದ್ದಾರೆ.
2. ಮುಳಬಾಗಿಲು: ನಾಗೇಶ್‌ಗೆ ಬಿಜೆಪಿ ಟಿಕೆಟ್ ಸಿಗುತ್ತಾ?
ಜೆಡಿಎಸ್‌ನಿಂದ ಸಮೃದ್ಧಿ ಮಂಜುನಾಥ್ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಈಗಾಗಲೇ ಪ್ರಚಾರ ಕೈಗೊಂಡಿದ್ದಾರೆ. ಹಾಲಿ ಶಾಸಕ ಎಚ್. ನಾಗೇಶ್ ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲದಿಂದ ಆಯ್ಕೆಯಾಗಿದ್ದಾರೆ. ಬಳಿಕ, ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಎಂಬ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿ, ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಜಾತಿ ಪ್ರಮಾಣಪತ್ರದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಅವರ ಮುಂದಿನ ನಡೆ ಏನೆಂಬುದು ನ್ಯಾಯಾಲಯದ ತೀರ್ಪಿನ ಮೇಲೆ ಆಧಾರಿತವಾಗಿದೆ. ಜೊತೆಗೆ, ಕಾಂಗ್ರೆಸ್ ಮುಖಂಡರಾದ ಮದೂರಪ್ಪ, ಸಾಂಬಯ್ಯ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ.
ಬಿಜೆಪಿಯಿಂದ ಎಚ್.ನಾಗೇಶ್, ಬಿಜೆಪಿ ಮುಖಂಡರಾದ ಮಂಜುನಾಥ್, ಸುಂದರ್‌ರಾಜ್, ಆಲಂಗೂರು ಗ್ರಾ.ಪಂ.ಅಧ್ಯಕ್ಷೆ ಶೋಭಮ್ಮ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಡಾ.ಕೆ.ಸಿ.ಶಿವಣ್ಣ, ಆರ್‌ಎಸ್‌ಎಸ್‌ನ ನಾರಾಯಣಪ್ಪ ಕೂಡ ಟಿಕೆಟ್ ಆಕಾಂಕ್ಷಿಗಳು.
3. ಬಂಗಾರಪೇಟೆ: ಬಿಜೆಪಿ ಟಿಕೆಟ್‌ಗಾಗಿ ಹಲವರ ಫೈಟ್
ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಕೆಪಿಸಿಸಿ ಹಾಲಿ ಸದಸ್ಯ ರಾಮಚಂದ್ರಪ್ಪನವರು ಕಾಂಗ್ರೆಸ್ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಜೆಡಿಎಸ್‌ನಿಂದ ಮಲ್ಲೇಶ್‌ಬಾಬು ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪ, ಜಿ.ಪಂ.ಮಾಜಿ ಸದಸ್ಯ ಬಿ.ವಿ.ಮಹೇಶ್, ಸಮಾಜ ಸೇವಕ ಶೇಷು ಅವರು ಬಿಜೆಪಿ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಕಳೆದ ಬಾರಿ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಜೆಡಿಎಸ್‌ನಿಂದ ಮಲ್ಲೇಶ್‌ಬಾಬು, ಬಿಜೆಪಿಯಿಂದ ಬಿ.ಪಿ.ವೆಂಕಟಮುನಿಯಪ್ಪ ಸ್ಪರ್ಧಿಸಿ, ಪರಾಭವಗೊಂಡಿದ್ದರು.
4. ಕೆಜಿಎಫ್: ರೂಪಕಲಾ ವಿರುದ್ಧ ನಿಲ್ಲುವವರಾರು?
ಕಾಂಗ್ರೆಸ್‌ನಿಂದ ಹಾಲಿ ಶಾಸಕಿ ರೂಪಕಲಾ ಶಶಿಧರ್ ಮತ್ತೆ ಸ್ಪರ್ಧಿಸುವ ಉಮೇದಿಯಲ್ಲಿದ್ದಾರೆ. ಹಿರಿಯ ಮುಖಂಡ ಬಾಲಕೃಷ್ಣ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ವೈ.ಸಂಪಂಗಿ, ಮೋಹನ್ ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ನಾರಾಯಣಸ್ವಾಮಿ, ಕಮ್ಮಸಂದ್ರ ಗ್ರಾ.ಪಂ. ಅಧ್ಯಕ್ಷ ಸುರೇಶ್ ಬಾಬು, ಬಿಜೆಪಿ ಮುಖಂಡ ಚಲಪತಿ ಟಿಕೆಟ್ ಆಕಾಂಕ್ಷಿಗಳು.ಜೆಡಿಎಸ್‌ನಿಂದ ಡಾ.ರಮೇಶ್ ಬಾಬು, ಹೈಕೋರ್ಚ್ ವಕೀಲ ಬಿ.ಸುರೇಶ್ ಕುಮಾರ್, ಜೆಡಿಎಸ್ ಪಕ್ಷದ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಜಾನಕಿ ಪ್ರಸಾದ್ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಇನ್ನು, ಆರ್‌ಪಿಐ ಪಕ್ಷದಿಂದ ಎಸ್.ರಾಜೇಂದ್ರನ್, ಸಿಪಿಐನಿಂದ ಜ್ಯೋತಿಬಸು, ಸಿಪಿಎಂನಿಂದ ತಂಗರಾಜ್ ಟಿಕೆಟ್‌ಗಾಗಿ ಯತ್ನ ನಡೆಸಿದ್ದಾರೆ.
5. ಮಾಲೂರು: 2 ಪಕ್ಷಗಳ ಜತೆ ಟಿಕೆಟ್‌ಗೆ ಮಂಜುನಾಥ್ ಮಾತುಕತೆ!
ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ.ವೈ.ನಂಜೇಗೌಡ ಸ್ಪರ್ಧಾ ಕಣದಲ್ಲಿದ್ದಾರೆ. ಮಾಜಿ ಶಾಸಕ ಎ.ನಾಗರಾಜ್ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ.
ಬಿಜೆಪಿಯಿಂದ ಮಾಜಿ ಶಾಸಕ ಕೆ.ಎಸ್.ಮಂಜುನಾಥ ಗೌಡ, ಬಿಜೆಪಿ ಪ್ರಕೋಷ್ಠದ ಹೂಡಿ ವಿಜಯಕುಮಾರ್ ಹಾಗೂ ತಾಲೂಕು ಅಧ್ಯಕ್ಷ ಪುರ ನಾರಾಯಣಸ್ವಾಮಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಕೆ.ಎಸ್.ಮಂಜುನಾಥಗೌಡರು ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಈ ಬಾರಿ ಜೆಡಿಎಸ್‌ನಿಂದ ಟಿಕೆಟ್ ದೊರೆಯದಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ, ಎರಡೂ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇನ್ನು, ಜೆಡಿಎಸ್‌ನಿಂದ ಜಿ.ಇ.ರಾಮೇಗೌಡ ಕೂಡ ಟಿಕೆಟ್ ಆಕಾಂಕ್ಷಿ. ಆಮ್ ಆದ್ಮಿ ಪಕ್ಷದಿಂದ ಸುಬ್ರಮಣಿ ಟಿಕೆಟ್ ಆಕಾಂಕ್ಷಿ.
6. ಕೋಲಾರ: ಸಿದ್ದು ಕರೆ ತರಲು ಯತ್ನ
ಕೋಲಾರದಲ್ಲಿ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಅವರು ಕಳೆದ ಬಾರಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರೂ, ಜೆಡಿಎಸ್‌ಗೆ ಗುಡ್ ಬೈ ಹೇಳಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಕ್ಷೇತ್ರ ಬಿಟ್ಟು ಕೊಡುವುದಾಗಿ ಹೇಳಿ, ಕೋಲಾರಕ್ಕೆ ಸಿದ್ದರಾಮಯ್ಯ ಅವರನ್ನು ಕರೆ ತರುವ ಪ್ರಯತ್ನದಲ್ಲಿದ್ದಾರೆ. ಆದರೆ, ಸಿದ್ದರಾಮಯ್ಯನವರು ಕೋಲಾರಕ್ಕೆ ಬರುವ ಬಗ್ಗೆ ಇನ್ನೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಅವರು ಇಲ್ಲಿ ಸ್ಪರ್ಧಿಸದಿದ್ದರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಜೊತೆಗೆ, ಎಲ್.ಎ.ಮಂಜುನಾಥ್, ಊರು ಬಾಗಿಲು ಶ್ರೀನಿವಾಸ್ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಕಸರತ್ತು ಆರಂಭಿಸಿದ್ದಾರೆ.
ಟಿಕೆಟ್‌ಗಾಗಿ ಸಿದ್ದರಾಮಯ್ಯ ಮುಂದೆ ಕಾಂಗ್ರೆಸ್ ಆಕಾಂಕ್ಷಿಗಳ ಬಲಪ್ರದರ್ಶನ..!
ಜೆಡಿಎಸ್‌ನಿಂದ ಸಿಎಂಆರ್ ಶ್ರೀನಾಥ್ ಅವರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡಲಾಗಿದೆ. ಬಿಜೆಪಿಯಿಂದ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ತಾವು ಟಿಕೆಟ್ ಆಕಾಂಕ್ಷಿಯೆಂದು ಹೇಳಿಕೊಂಡು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಒಂದು ವೇಳೆ, ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ, ಈ ಕ್ಷೇತ್ರ ಪ್ರತಿಷ್ಠಿತ ಕ್ಷೇತ್ರವಾಗಲಿದೆ.
ಜಿಲ್ಲೆ: ಕೋಲಾರ
ಕ್ಷೇತ್ರ ಬಲಾಬಲ:
- ಒಟ್ಟು ಕ್ಷೇತ್ರ: 6.
- ಕಾಂಗ್ರೆಸ್-4.
- ಜೆಡಿಎಸ್: 1.
- ಬಿಜೆಪಿ-1.