ಬಿಜೆಪಿ ಶಾಸಕ ಶರಣು ಸಲಗರ್, ರಾಜ್ಯದ ಅಬಕಾರಿ ನೀತಿಯನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯರನ್ನು 'ರಾಕ್ಷಸ' ಎಂದು ಕರೆದಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗಾಗಿ ಮದ್ಯ ಮಾರಾಟ ಹೆಚ್ಚಿಸುತ್ತಿರುವುದರಿಂದ ಉತ್ತರ ಕರ್ನಾಟಕದ ಹಳ್ಳಿಗಳು 'ವಿಧವಾ ಗ್ರಾಮ'ಗಳಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಬೀದರ್: (ಡಿ.24): ರಾಜ್ಯದಲ್ಲಿ ಹೆಚ್ಚುತ್ತಿರುವ ಮದ್ಯದ ಹಾವಳಿ ಮತ್ತು ಸರ್ಕಾರದ ಅಬಕಾರಿ ನೀತಿಯ ವಿರುದ್ಧ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ್ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮದ್ಯ ನಿಷೇಧ ಮಾಡದಿದ್ದರೆ ಸಿಎಂ ತಮ್ಮ ಪಾಲಿಗೆ ರಾಕ್ಷಸನಂತೆ ಕಾಣುತ್ತಾರೆ ಎಂದು ಅವರು ಗುಡುಗಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ 'ರಾಕ್ಷಸ' ಪದ ಪ್ರಯೋಗ
ಬೀದರ್‌ನ ಬಸವಕಲ್ಯಾಣದಲ್ಲಿ ಮಾತನಾಡಿದ ಶರಣು ಸಲಗರ್, ಸಾರಾಯಿ ಬಂದ್ ಮಾಡದ ಸಿಎಂ ಸಿದ್ದರಾಮಯ್ಯ ಅವರು ನನ್ನ ಪಾಲಿಗೆ ರಾಕ್ಷಸನಂತೆ ಕಾಣುತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಅಬಕಾರಿ ಅಧಿಕಾರಿಗಳಿಗೆ ಟಾರ್ಗೆಟ್ ನೀಡುತ್ತಿದೆ. ಇದರಿಂದ ಕರ್ನಾಟಕವು ನಶಾ ರಾಜ್ಯವಾಗಿ ಬದಲಾಗುತ್ತಿದೆ. ಕಿರಾಣಿ ಅಂಗಡಿಗಳು ಮತ್ತು ಪಾನ್ ಶಾಪ್‌ಗಳು ವೈನ್ ಶಾಪ್‌ಗಳಾಗಿ ಮಾರ್ಪಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಹಳ್ಳಿಗಳು ವಿಧವಾ ಗ್ರಾಮಗಳಾಗುತ್ತಿವೆ:
ಮದ್ಯ ಮತ್ತು ಗಾಂಜಾ ಚಟದಿಂದಾಗಿ ಯುವಕರು ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಣ್ಣ ಮಕ್ಕಳು ಮತ್ತು ಯುವತಿಯರು ಸಹ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಹಳ್ಳಿಗಳು ಮದ್ಯದ ಹಾವಳಿಯಿಂದಾಗಿ 'ವಿಧವಾ ಗ್ರಾಮ'ಗಳಾಗಿ ಬದಲಾಗುತ್ತಿವೆ. ಮದ್ಯ ನಿಷೇಧವಾಗುವವರೆಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ದೇವರಾಜ ಅರಸ್, ಬಸವಣ್ಣನಾಗಿ; ಇಲ್ಲವೇ ರಾಕ್ಷಸ!
ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ ಶಾಸಕರು, 'ನೀವು ದೇವರಾಜ ಅರಸ್ ಅವರಿಗಿಂತ ದೊಡ್ಡ ಹೆಸರನ್ನು ಮಾಡಲು ಹೊರಟಿದ್ದೀರಿ. ಅರಸ್ ಅವರಂತೆ ಹೆಸರು ಮಾಡಬೇಕೆಂದರೆ ಮೊದಲು ಸಾರಾಯಿ ಬಂದ್ ಮಾಡಿ. ಮದ್ಯ ನಿಷೇಧಿಸಿದರೆ ನೀವು ವಿಶ್ವಗುರು ಬಸವಣ್ಣನವರಂತಾಗುತ್ತೀರಿ. ಆಗ ನಿಮ್ಮ ಫೋಟೋವನ್ನು ನಮ್ಮ ಮನೆಯಲ್ಲಿಟ್ಟು ಪೂಜೆ ಮಾಡುತ್ತೇನೆ. ಆದರೆ, ಒಂದು ಕೈಯಲ್ಲಿ ಗ್ಯಾರೆಂಟಿ ಹಣ ಕೊಟ್ಟು, ಇನ್ನೊಂದು ಕೈಯಲ್ಲಿ ಮದ್ಯದ ಮೂಲಕ ಹಣ ಲೂಟಿ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮದ್ಯ ನಿಷೇಧ: ಒಂದು ಕೋಟಿ ಮಹಿಳೆಯರ ಸಹಿ ಸಂಗ್ರಹ ಅಭಿಯಾನ
ಮದ್ಯ ನಿಷೇಧಕ್ಕಾಗಿ ರಾಜ್ಯಾದ್ಯಂತ ಒಂದು ಕೋಟಿ ಮಹಿಳೆಯರ ಸಹಿ ಸಂಗ್ರಹ ಮಾಡುವುದಾಗಿ ಘೋಷಿಸಿದ ಅವರು, 'ಸಾರಾಯಿ ಮುಕ್ತ' ರಾಜ್ಯ ಮಾಡಿದರೆ ನಮ್ಮ ಮಹಿಳೆಯರೇ ಸರ್ಕಾರಕ್ಕೆ ಪ್ರತಿ ತಿಂಗಳು ಸಾವಿರ ರೂಪಾಯಿ ನೀಡಲು ಸಿದ್ಧರಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮದ್ಯ ನಿಷೇಧ ಸಾಧ್ಯವಿಲ್ಲ. ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತಾ ಸಾರಾಯಿ ಮುಕ್ತ ರಾಜ್ಯ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆಯ ಸವಾಲು
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮದ್ಯ ನಿಷೇಧ ಮಾಡದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಲಗರ್ ಸವಾಲು ಹಾಕಿದ್ದಾರೆ. ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮದ್ಯ ನಿಷೇಧಿಸದಿದ್ದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶರಣು ಸಲಗರ್ ಅವರು ಬಹಿರಂಗವಾಗಿ ಘೋಷಿಸಿದರು.


