ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದಾಗ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಈ ಸಾವಿಗೆ ಕಾರಣ ಯಾರು? ಮದ್ಯ ನಿಷೇಧದ ಅಗತ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು(ಡಿ.22): ಸಿಲಿಕಾನ್ ಸಿಟಿಯಲ್ಲಿ ಮದ್ಯಪಾನದ ವ್ಯಸನ ಮತ್ತೊಂದು ಬಲಿ ಪಡೆದಿದೆ. ಕುಡಿದು ತೂರಾಡಿ ರಸ್ತೆಗೆ ಬಿದ್ದ ವ್ಯಕ್ತಿಯೊಬ್ಬರ ಮೇಲೆ ಬಸ್ ಟೈರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಇದು ಕೇವಲ ಅಪಘಾತವೋ ಅಥವಾ ವ್ಯವಸ್ಥೆಯ ವೈಫಲ್ಯವೋ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ಆಯಾ ತಪ್ಪಿ ಬಸ್ ಚಕ್ರದ ಅಡಿಗೆ ಬಿದ್ದ ಕುಡುಕ:

ಕಳೆದ ಡಿಸೆಂಬರ್ 13ರಂದು ಸಂಜೆ 7 ಗಂಟೆಯ ಸುಮಾರಿಗೆ ಕಾಮಾಕ್ಷಿಪಾಳ್ಯದ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಈ ದುರಂತ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಚೇತನ್ ಕುಮಾರ್ (42) ಎಂದು ಗುರುತಿಸಲಾಗಿದೆ. ಬಾರ್‌ನಲ್ಲಿ ಕುಡಿದು ಹೊರಬಂದ ಚೇತನ್ ಕುಮಾರ್, ಅಮಲಿನಲ್ಲಿ ರಸ್ತೆಯಲ್ಲಿ ತೂರಾಡುತ್ತಾ ನಡೆಯುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಾಗ, ಹಿಂಬದಿಯಿಂದ ಬಂದ ಬಸ್ ಚಕ್ರ ಇವರ ಮೇಲೆ ಹರಿದಿದೆ.

ಪರಾರಿಯಾಗಿದ್ದ ಬಸ್ ಚಾಲಕ ಬಂಧನ

ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ನರೇಂದ್ರ ಸ್ಥಳದಿಂದ ಪರಾರಿಯಾಗಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತಪಾಸಣೆ ನಡೆಸಿದ್ದರು. ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ಆರೋಪಿ ಬಸ್ ಚಾಲಕ ನರೇಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾವಿಗೆ ಹೊಣೆ ಯಾರು? ಬಸ್ ಚಾಲಕನೇ? ಸರ್ಕಾರವೇ? ಬಾರ್ ಮಾಲೀಕರೇ?

ಇದೀಗ ಸಾವಿನ ಸುತ್ತ ಅನೇಕ ಕಠಿಣ ಪ್ರಶ್ನೆಗಳು ಉದ್ಭವಿಸಿವೆ. ಕೇವಲ ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆಯೇ? ಅಥವಾ ಮದ್ಯ ಮಾರಾಟ ಮಾಡಿ ಆದಾಯ ಗಳಿಸುತ್ತಿರುವ ಸರ್ಕಾರ ಮತ್ತು ಬಾರ್ ಮಾಲೀಕರು ಇದಕ್ಕೆ ಹೊಣೆಯೇ? ಮದ್ಯದ ಅಮಲಿನಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಕುಡುಕನದ್ದೇ ತಪ್ಪೇ? ಇಂತಹ ಸಾವುಗಳು ಸಂಭವಿಸಿದಾಗ ಕಾನೂನು ಕೇವಲ ಚಾಲಕನ ಮೇಲೆ ಕೇಸ್ ಹಾಕುತ್ತದೆ, ಆದರೆ ಮೂಲ ಕಾರಣವಾದ 'ಮದ್ಯ'ದ ಬಗ್ಗೆ ಮೌನ ವಹಿಸುತ್ತದೆ.

ಸರ್ಕಾರಕ್ಕೆ ಆದಾಯವೇ ಮುಖ್ಯವಾಯಿತೇ? ಜನರ ಪ್ರಾಣಕ್ಕಿಲ್ಲವೇ ಬೆಲೆ?

ರಾಜ್ಯದಲ್ಲಿ ಮದ್ಯ ನಿಷೇಧಿಸಬೇಕೆಂದು ಮಹಿಳಾ ಸಂಘಟನೆಗಳು ದಶಕಗಳಿಂದ ಹೋರಾಡುತ್ತಿವೆ. ಇತ್ತೀಚೆಗೆ ಸ್ವತಃ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮದ್ಯ ಬ್ಯಾನ್ ಮಾಡುವಂತೆ ಮನವಿ ಮಾಡಿದ್ದರು. ಆದರೂ ಅಬಕಾರಿ ಇಲಾಖೆಯ ಆದಾಯದ ಮೇಲೆ ಕಣ್ಣಿಟ್ಟಿರುವ ಸರ್ಕಾರ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಜನಸಾಮಾನ್ಯರ ಪ್ರಾಣಕ್ಕಿಂತ ಸರ್ಕಾರಕ್ಕೆ ತಿಜೋರಿ ತುಂಬಿಸಿಕೊಳ್ಳುವುದೇ ಮುಖ್ಯವಾಯಿತೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಬೀದಿ ಪಾಲಾಗುತ್ತಿರುವ ಸಂಸಾರಗಳು: ಇನ್ನಾದರೂ ಎಚ್ಚೆತ್ತುಕೊಳ್ಳಲಿ ಸರ್ಕಾರ

ಮದ್ಯಪಾನದಿಂದಾಗಿ ಕೇವಲ ವ್ಯಕ್ತಿಯ ಸಾವು ಮಾತ್ರವಾಗುತ್ತಿಲ್ಲ, ಅದೆಷ್ಟೋ ಸಂಸಾರಗಳು ಬೀದಿಗೆ ಬರುತ್ತಿವೆ. ಅಪ್ಪನಿಲ್ಲದೆ ಮಕ್ಕಳು ಅನಾಥರಾಗುತ್ತಿದ್ದಾರೆ, ಪತ್ನಿಯರು, ತಾಯಂದಿರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇನ್ನು ಎಷ್ಟು ಜನ ಹೀಗೆ ಬೀದಿ ಹೆಣವಾಗಬೇಕು? ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಯೋಚಿಸಿ, ಮದ್ಯ ನಿಷೇಧದ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಇಂತಹ ದುರಂತಗಳು ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತವೆ.