ಬಿಜೆಪಿ ಶಾಸಕ ಚನ್ನಬಸಪ್ಪ ಅವರು, ರಾಜೀವ್ ಗಾಂಧಿ ಹತ್ಯೆ ಮಾಡಿದ ಎಲ್‌ಟಿಟಿಇಯನ್ನು ಗೌರವಿಸುವ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಕಾಂಗ್ರೆಸ್ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ (ಮೇ.22): ಭಯೋತ್ಪಾದನೆ, ಕಾಂಗ್ರೆಸ್ ಹಾಗೂ ಎಲ್‌ಟಿಟಿಇ ಕುರಿತಾಗಿ ಬಿಜೆಪಿ ಶಾಸಕ ಚನ್ನಬಸಪ್ಪ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ದೇಶದ ಅಖಂಡತೆಗೆ ಧಕ್ಕೆ ತರುವ ಶಕ್ತಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಅವರು ಆರೋಪಿಸಿದರು.

ಭಯೋತ್ಪಾದನೆ ದೇಶದ ಅಖಂಡತೆಗೆ ದೊಡ್ಡ ಅಪಾಯ
ದೇಶದ ಗಡಿಭಾಗಗಳಿಂದ ಈಶಾನ್ಯ ಭಾಗದವರೆಗೆ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ಮಟ್ಟ ಹಾಕಲು ಎಲ್ಲ ಸರ್ಕಾರಗಳು ಪ್ರಯತ್ನ ಮಾಡಿವೆ. 1970ರಿಂದ ಇಲ್ಲಿವರೆಗೆ 12 ಸಾವಿರಕ್ಕೂ ಹೆಚ್ಚು ಭಯೋತ್ಪಾದಕ ಕೃತ್ಯಗಳು ನಡೆದಿವೆ. 30 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದರು.
ರಾಜೀವ್ ಗಾಂಧಿ ಹತ್ಯೆ ಉಲ್ಲೇಖಿಸಿದ ಶಾಸಕ
1991ರ ಮೇ 21ರಂದು ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಹಾಗೂ ಅದಕ್ಕೂ ಮೊದಲು ನಡೆದ ಇಂದಿರಾಗಾಂಧಿ ಹತ್ಯೆಯನ್ನು ಉಲ್ಲೇಖಿಸಿದ ಚನ್ನಬಸಪ್ಪ, 'ಭಯೋತ್ಪಾದನೆಯಿಂದಲೇ ದೇಶದ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದ್ದೇವೆ. ವಿಪಿ ಸಿಂಗ್ ಸರ್ಕಾರ ಮೇ 21 ಭಯೋತ್ಪಾದಕತೆ ವಿರೋಧಿ ದಿನ ಆಚರಣೆ ಆದೇಶವಾಯ್ತು. ದೇಶವನ್ನು ಆಳಿದ ಕಾಂಗ್ರೆಸ್ ಗೆ ರಾಜೀವ್ ಗಾಂಧಿ ಹತ್ಯೆ ಮಾಡಿದ ಎಲ್ ಟಿ ಟಿ ಉಗ್ರರು ಬಗ್ಗೆ ಏನು ಅನಿಸಲಿಲ್ಲವೇ? ಎಲ್‌ಟಿಟಿ ಪ್ರಭಾಕರನ್ ನಾಯಕತ್ವದಲ್ಲಿ ಪೆರಂಬೂದರಿನಲ್ಲಿ ರಾಜೀವ್ ಗಾಂಧಿ ಹತ್ಯೆ ನಡೆದಿತ್ತು. ಆದರಿಂದು ಟಿವಿಕೆ ಪಕ್ಷದ ಮುಖ್ಯಮಂತ್ರಿ ವಿಜಯ್ ಪ್ರಭಾಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುತ್ತಾರೆ. ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತೆ ಅಂದರೆ ಕಾಂಗ್ರೆಸ್ ನಿಂದಲೇ ಭಯೋತ್ಪಾದಕತೆಗೆ ಕುಮ್ಮಕ್ಕು ಕಾಂಗ್ರೆಸ್ ಕೊಡುತ್ತಿದೆ.
TVK ವಿಜಯ್ ವಿರುದ್ಧ ಗಂಭೀರ ಟೀಕೆ
ಟಿವಿಕೆ ಪಕ್ಷದ ನಾಯಕ ವಿಜಯ್ ಅವರು ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿರುವ ವಿಚಾರವನ್ನು ಉಲ್ಲೇಖಿಸಿದ ಅವರು, 'ಇಂತಹ ಮಾನಸಿಕತೆ ಇರುವ ವ್ಯಕ್ತಿ ವಿಜಯ್ ಎಂದು ನನಗೆ ಗೊತ್ತಿರಲಿಲ್ಲ. ಒಳ್ಳೆಯ ಕಲಾವಿದ ಎಂದುಕೊಂಡಿದ್ದೆ. ಪ್ರಭಾಕರನ್‌ಗೆ ಗೌರವ ಕೊಡುವವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಇದು ದೇಶದ ಜನತೆಗೆ ಮಾಡಿದ ದ್ರೋಹ ಎಂದು ಅವರು ಆರೋಪಿಸಿದರು.
ರಾಹುಲ್ ಗಾಂಧಿ ದೇಶದ ಕ್ಷಮೆ ಕೇಳಬೇಕು
ಸ್ವತಃ ತಂದೆಯನ್ನು ಕೊಂದವರನ್ನು ಬೆಂಬಲಿಸುವವರ ಜೊತೆ ನೀವು ನಿಲ್ಲುತ್ತೀರಾ? ಎಂದು ಪ್ರಶ್ನಿಸಿದ ಚನ್ನಬಸಪ್ಪ, ಇದು ಅಕ್ಷಮ್ಯ ಅಪರಾಧ. ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪ್ರಶ್ನೆ ಕೇಳಿದ್ದು ಭಯೋತ್ಪಾದಕರ ಪರವೇ?
ಪುಲ್ವಾಮಾ ದಾಳಿ ಸೇರಿದಂತೆ ಹಲವು ಉಗ್ರ ಕೃತ್ಯಗಳಿಗೆ ಪ್ರತಿಯಾಗಿ ನಡೆದ ಆಪರೇಷನ್‌ಗಳ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಕೇಳಿರುವುದನ್ನು ಉಲ್ಲೇಖಿಸಿ, 'ದೇಶ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವಾಗ ನೀವು ಏಕೆ ಪ್ರಶ್ನೆ ಕೇಳುತ್ತಿದ್ದೀರಿ?' ಎಂದು ಚನ್ನಬಸಪ್ಪ ಪ್ರಶ್ನಿಸಿದರು. ಇನ್ನು ಆಳಂದ ದರ್ಗಾ ಪ್ರಕರಣವೂ ಪ್ರಸ್ತಾಪಿಸಿ ಅವರು, ಆಳಂದ ದರ್ಗಾದ ದುಂಬಿ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರಕ್ಕೂ ಆಕ್ರೋಶ ವ್ಯಕ್ತಪಡಿಸಿದ ಅವರು, 'ಕಾಂಗ್ರೆಸ್ ಬದುಕಿರುವುದೇ ಮುಸ್ಲಿಮರಿಗೋಸ್ಕರ. ಇದು ಅವರ ನೀತಿ' ಎಂದು ಟೀಕಿಸಿದರು. ಇಂತಹ ವಿಚಾರಗಳನ್ನು ಪದೇ ಪದೇ ಚರ್ಚೆ ಮಾಡುವುದು ಕಾನೂನಿಗೆ ಅಪಮಾನ ಎಂದೂ ಹೇಳಿದರು.


