ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ರೈತ ಮತ್ತು ಕನ್ನಡಪರ ಸಂಘಟನೆಗಳ ಮೇಲಿನ 52 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆದ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ, ಪೆಟ್ರೋಲ್-ಡೀಸೆಲ್ ದರ ಇಳಿಕೆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಬೆಂಗಳೂರು (ಮೇ.22): ರಾಜ್ಯದಲ್ಲಿ ರೈತ ಹಾಗೂ ಕನ್ನಡಪರ ಸಂಘಟನೆಗಳ ಮೇಲಿದ್ದ 52 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆದಿರುವ ಸರ್ಕಾರದ ನಿರ್ಧಾರವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಧಾನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು ಮೂರು ಪ್ರಮುಖ ವಿಷಯಗಳ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

Add Asianetnews Kannada as a Preferred SourcegooglePreferred

52 ಕ್ರಿಮಿನಲ್ ಪ್ರಕರಣಗಳ ವಾಪಸ್: ಏಕಾಏಕಿ ನಿರ್ಧಾರ ಮಾಡಿಲ್ಲ!

"ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ವಿವಿಧ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಮನವಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ಇವುಗಳನ್ನು ಸಚಿವ ಸಂಪುಟದ ಉಪಸಮಿತಿಗೆ (Cabinet Sub-Committee) ಶಿಫಾರಸು ಮಾಡಿತ್ತು. ಸಬ್ ಕಮಿಟಿಯು ಪ್ರತಿಯೊಂದು ಪ್ರಕರಣದ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಚರ್ಚಿಸಿದೆ. ಕಾನೂನಾತ್ಮಕವಾಗಿ ಯಾವ ಕೇಸ್‌ಗಳನ್ನು ವಾಪಸ್ ಪಡೆಯಲು ಅವಕಾಶವಿದೆಯೋ, ಅದನ್ನು ಮಾತ್ರ ಪರಿಗಣಿಸಲಾಗಿದೆ. ಅದರಂತೆ ರಾಜ್ಯದಲ್ಲಿ ಒಟ್ಟು 52 ಪ್ರಕರಣಗಳನ್ನು ಹಿಂಪಡೆಯಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ" ಎಂದು ಪರಮೇಶ್ವರ್ ವಿವರಿಸಿದರು.

ಇದೇ ವೇಳೆ ತೀವ್ರ ವಿವಾದಕ್ಕೀಡಾಗಿರುವ ಕಲಬುರಗಿಯ ಆಳಂದದ 'ಲಾಡ್ಲೇ ಮಶಾಕ್ ದರ್ಗಾ' ಪ್ರಕರಣವನ್ನು ವಾಪಸ್ ಪಡೆದಿರುವ ಕುರಿತು ಕೇಳಲಾದ ಪ್ರಶ್ನೆಗೆ ನಿಖರ ವಿವರ ನೀಡಲು ಸಚಿವರು ಹಿಂದೇಟು ಹಾಕಿದರು. "ಅದರ ಬಗ್ಗೆ ನಾನು ಹೆಚ್ಚು ಡೀಟೈಲ್ಸ್ ಹೇಳಲು ಹೋಗಲ್ಲ. ಕ್ಯಾಬಿನೆಟ್‌ನಲ್ಲಿ ಎಲ್ಲವನ್ನೂ ಚರ್ಚಿಸಿ, ಕಾನೂನು ಚೌಕಟ್ಟಿನಲ್ಲೇ ತೀರ್ಮಾನ ಮಾಡಲಾಗಿದೆ. ಯಾವುದೇ ನಿರ್ಧಾರವನ್ನು ಏಕಾಏಕಿ ಕೈಗೊಂಡಿಲ್ಲ" ಎಂದು ಸಮಜಾಯಿಷಿ ನೀಡಿ ಸುಮ್ಮನಾದರು.

ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ?: ಇಂಧನ ದರ ಇಳಿಕೆ ನಿರಾಕರಣೆ

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬ ಸಾರ್ವಜನಿಕ ಹಾಗೂ ವಿರೋಧ ಪಕ್ಷಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕೇಂದ್ರ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು. "ಕೇಂದ್ರ ಸರ್ಕಾರವು ದಿನೇದಿನೆ ದರಗಳನ್ನು ಜಾಸ್ತಿ ಮಾಡುತ್ತಾ ಹೋಗುತ್ತದೆ, ಅದನ್ನು ನಾವು ಇಲ್ಲಿ ಕಡಿಮೆ ಮಾಡುತ್ತಾ ಕೂರಬೇಕಾ? ನಾವು ಎಲ್ಲದಕ್ಕೂ ಸಬ್ಸಿಡಿ ನೀಡಲು ಎಲ್ಲಿಂದ ಸಾಧ್ಯವಿದೆ? ಕೇಂದ್ರ ಸರ್ಕಾರಕ್ಕೆ ಜನಪರ ಚಿಂತನೆ ಮತ್ತು ಜವಾಬ್ದಾರಿ ಇಲ್ಲವೇ?" ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಅವರು, "ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಆರ್ಥಿಕ ಪಾಲು ಸರಿಯಾಗಿ ಬರುತ್ತಿಲ್ಲ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹಣ ಇರಬಹುದು ಅಥವಾ ನಮಗೆ ಬರಬೇಕಾದ ತೆರಿಗೆ ಹಂಚಿಕೆಯ ಹಣ ಇರಬಹುದು, ಯಾವುದೂ ಸಕಾಲಕ್ಕೆ ಬಂದಿಲ್ಲ. ಇದೆಲ್ಲವೂ ಈಗಾಗಲೇ ರಾಜ್ಯ ಸರ್ಕಾರದ ಮೇಲೆ ಭಾರಿ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪರಿಸ್ಥಿತಿ ಹೀಗಿರುವಾಗ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿ ಎಂದು ಕೇಳುವುದು ಎಷ್ಟು ಸರಿ? ಜವಾಬ್ದಾರಿಯುತವಾಗಿ ದೇಶ ಆಳುವವರು ಮುಂಚಿತವಾಗಿಯೇ ಸರಿಯಾದ ಯೋಜನೆಗಳನ್ನು ರೂಪಿಸಬೇಕಿತ್ತು" ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು.

'SIR' ಪ್ರಕ್ರಿಯೆಯಲ್ಲಿ ಶಾಸಕರ ನಿಗಾಕ್ಕೆ ಸೂಚನೆ

SIR ಕುರಿತು ಮಾತನಾಡಿದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇದರ ಮೇಲೆ ತೀವ್ರ ನಿಗಾ ಇಡಬೇಕು ಎಂದು ಸೂಚಿಸಿದರು. "ನಮ್ಮ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಖುದ್ದಾಗಿ ಮಾನಿಟರ್ ಮಾಡಬೇಕು. ಸರಿಯಾದ ರೀತಿಯಲ್ಲಿ ವರದಿ ಸಿದ್ಧವಾಗುವಂತೆ ನೋಡಿಕೊಳ್ಳುವುದರಲ್ಲಿ ಶಾಸಕರು ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ" ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.