ಪ್ರಿಯಾಂಕ್ ಖರ್ಗೆ ರಾಜ್ಯದ ಸೂಪರ್ ಸಿಎಂ; ಸಿದ್ದರಾಮಯ್ಯರ ಮಾತಿಗೆ ಕಿಮ್ಮತ್ತಿಲ್ಲ: ಎನ್ ರವಿಕುಮಾರ್
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅಲ್ಲ, ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾಜ್ಯಕ್ಕೆ ಪ್ರಿಯಾಂಕ್ ಖರ್ಗೆ ಸೂಪರ್ ಸಿಎಂ ಆಗಿದ್ದಾರೆ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದರು.
ಕಲಬುರಗಿ (ಅ.8): ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅಲ್ಲ, ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾಜ್ಯಕ್ಕೆ ಪ್ರಿಯಾಂಕ್ ಖರ್ಗೆ ಸೂಪರ್ ಸಿಎಂ ಆಗಿದ್ದಾರೆ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದರು.
ಇಂದು ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಕೋಲಿ ಸಮಾಜದ ಯುವಕನ ಹತ್ಯೆ ಆರೋಪಿಗೆ ಪ್ರಿಯಾಂಕ್ ಖರ್ಗೆ ರಕ್ಷಣೆ ನೀಡುತ್ತಿದ್ದಾರೆ. ಆರೋಪಿಯನ್ನು ಅರೆಸ್ಟ್ ಮಾಡುವಂತೆ ಸ್ವತಃ ಸಿಎಂ ಹೇಳಿದರೆ ಅರೆಸ್ಟ್ ಆಗಲ್ಲ, ಸೂಪರ್ ಸಿಎಂ ಹೇಳಿದ್ರೆ ಅರೆಸ್ಟ್ ಆಗುತ್ತೆ. ಕಲಬುರಗಿ ಜಿಲ್ಲೆಯಲ್ಲಿ ಸೂಪರ್ ಸಿಎಂ ಏನು ಹೇಳ್ತಾರೋ ಅದೇ ನಡೆಯೋದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ ಕಾರಿದರು.
ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರದಿಂದ ಹೆಲ್ಪ್‌ಲೈನ್
ಖರ್ಗೆ ದೊಡ್ಡ ತತ್ವಜ್ಞಾನಿಯಂತೆ ಮಾತಾಡ್ತಾರೆ:
ರಾಜ್ಯದಲ್ಲಿ ಯಾವ ಶಾಸಕರ ಬೇಡಿಕೆಗಳು ಸಹ ಈಡೇರುತ್ತಿಲ್ಲ. ಏನು ಹೇಳಿದರೂ ಕೆಲಸ ಆಗುವುದಿಲ್ಲ. ಇದು ನಾನು ಹೇಳುತ್ತಿಲ್ಲ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಬಾಳ ದೊಡ್ಡ ತತ್ವಜ್ಞಾನಿಯಂತೆ ಮಾತಾಡ್ತಾರೆ. ಅವರಂಥ ರಕ್ಷಣಾ ತಜ್ಞ, ಕೃಷಿ ಪಂಡಿತ, ಶಿಕ್ಷಣ ತಜ್ಞ ಈ ರಾಜ್ಯದಲ್ಲಿ ಮತ್ತೊಬ್ಬರಿಲ್ಲ ಎಂದು ವ್ಯಂಗ್ಯ ಮಾಡಿದರು.
ಆನೇಕಲ್ ಪಟಾಕಿ ದುರಂತ ಸಮಗ್ರ ತನಿಖೆಯಾಗಲಿ:
ಆನೇಕಲ್ ಪಟಾಕಿ ದುರಂತದಲ್ಲಿ 14 ಜನ ಅಮಾಯಕರು ಬಲಿಯಾಗಿದ್ದಾರೆ. ಇದು ಘೋರ ಅನ್ಯಾಯ, ದುರಂತ ಪ್ರಕರಣವಾಗಿದೆ. ಈ ದುರಂತದ ಹಿಂದೆ ಯಾರಿದ್ದಾರೆ ? ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬದವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಜಾತ್ಯಾತೀತ ಪಕ್ಷ, ಈಗ ಜನತಾನೂ ಇಲ್ಲ, ಜನರೂ ಇಲ್ಲ: ಹೆಚ್‌ಡಿಕೆ ವಿರುದ್ಧ ಹರಿಹಾಯ್ದ ಪ್ರಿಯಾಂಕ್ ಖರ್ಗೆ
ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿಯ ಕೆಲ ನಾಯಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಎನ್ ರವಿಕುಮಾರ್, ಜೆಡಿಎಸ್ ಜೊತೆ ಮೈತ್ರಿ ನಮ್ಮ ಪಕ್ಷದ ವರಿಷ್ಠರ ನಿರ್ಣಯ. ನಮ್ಮ ಹೈಕಮಾಂಡ್ ನಿರ್ಣಯವನ್ನ ನಾವು ಸ್ವಾಗತಿಸುತ್ತೇವೆ. ನಮ್ಮಲ್ಲಿಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿರಬಹುದು ಆದರೆ ಅದು ಅವರ ವೈಯಕ್ತಿಕ ಹೇಳಿಕೆ. ಜೆಡಿಎಸ್ ಜೊತೆ ಮೈತ್ರಿಯಿಂದ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಲಾಭ ಆಗೇ ಆಗುತ್ತದೆ. ಕಾಂಗ್ರೆಸ್ನವರು ಈ ಹಿಂದೆಯೂ 20 ಸ್ಥಾನ ಗೆಲ್ಲುತ್ತೇವೆ ಎಂದಿದ್ದರು. ಈಗಲೂ ಅವರ ಕಥೆ ಅಷ್ಟೇ. ನಾವು ಮತ್ತೊಮ್ಮೆ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಎಂದು ಭವಿಷ್ಯ ನುಡಿದರು.