ಜೆಡಿಎಸ್ ಜಾತ್ಯಾತೀತ ಪಕ್ಷ, ಈಗ ಜನತಾನೂ ಇಲ್ಲ, ಜನರೂ ಇಲ್ಲ: ಹೆಚ್‌ಡಿಕೆ ವಿರುದ್ಧ ಹರಿಹಾಯ್ದ ಪ್ರಿಯಾಂಕ್ ಖರ್ಗೆ
ಬಿಜೆಪಿ ಜೊತೆ ಸೇರಿಕೊಂಡು ಮೇಲೆ ಜಾತ್ಯಾತೀತ ತತ್ವನೂ ಇಲ್ಲ. ಅದಕ್ಕೆ ಜನ ಬಿಟ್ಟು ಬರ್ತಿದ್ದಾರೆ. ಅಲ್ಪಸಂಖ್ಯಾತ ಮಾತ್ರವಲ್ಲ. ಹಲವಾರು ನಾಯಕರು ಜೆಡಿಎಸ್‌ನಿಂದ ಹೊರಗೆ ಬರ್ತಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ(ಅ.01): ಕುಮಾರಸ್ವಾಮಿ ವೈಯಕ್ತಿಕ ಅಸ್ಥಿತ್ವ ಉಳಿಸಿಕೊಳ್ಳೋಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೋಗೋರು ಹೋಗಲಿ ಅಂತ ಹೇಳಿದ್ರೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವರಿಗೆ ಜನರು ಬೇಡ ಅಂತ. ಸಂವಿಧಾನ ಪರ ಇರೋ ಜನ, ಜಾತ್ಯಾತೀತ ತತ್ವ ನಂಬೋ ಜನ ಅವರಿಗೆ ಬೇಡ ಅಂತ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕೆ ಜೆಡಿಎಸ್‌ನಿಂದ ಅನೇಕ ಜನ ಬಿಟ್ಟು ಬರ್ತಿದ್ದಾರೆ. ಜೆಡಿಎಸ್ ಜಾತ್ಯಾತೀತ ಪಕ್ಷ, ಈಗ ಜನತಾನೂ ಇಲ್ಲ. ಜನರು ಇಲ್ಲ ಅವರ ಜೊತೆ ದಳನೂ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಪಕ್ಷ ಬಿಟ್ಟು ಹೋಗೋರೆಲ್ಲ ಹೋಗಲಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಜೊತೆ ಸೇರಿಕೊಂಡು ಮೇಲೆ ಜಾತ್ಯಾತೀತ ತತ್ವನೂ ಇಲ್ಲ. ಅದಕ್ಕೆ ಜನ ಬಿಟ್ಟು ಬರ್ತಿದ್ದಾರೆ. ಅಲ್ಪಸಂಖ್ಯಾತ ಮಾತ್ರವಲ್ಲ. ಹಲವಾರು ನಾಯಕರು ಜೆಡಿಎಸ್‌ನಿಂದ ಹೊರಗೆ ಬರ್ತಿದ್ದಾರೆ. ಜಾತ್ಯಾತೀತ ತತ್ವವನ್ನ ನಂಬಿ ಅನೇಕರು ಪಕ್ಷ ಸೇರ್ಪಡೆ ಆಗಿದ್ರು. ಕುಟುಂಬ ಅಥವಾ ವ್ಯಕ್ತಿ ನಂಬಿ ಪಕ್ಷ ಸೇರಿರಲಿಲ್ಲ. ಪಕ್ಷದ ತತ್ವ ನೋಡಿ ಪಕ್ಷ ಸೇರ್ಪಡೆ ಆಗಿರುತ್ತಾರೆ. ಅವರು ಹೊರಗೆ ಬರ್ತಿದ್ದಾರೆ. ಯಾರೇ ಪಕ್ಷದಿಂದ ನಮ್ಮ ಪಕ್ಷದ ಸಿದ್ಧಾಂತ, ಸಂವಿಧಾನ ಒಪ್ಪಿ ಬರೋದಾದ್ರೆ ಬರಬಹುದು. ಅವರನ್ನ ಸ್ವಾಗತ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ಗೆ ಹೆದರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ: ಸಚಿವ ಶರಣಬಸಪ್ಪ ದರ್ಶನಾಪೂರ್
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ, ಲಿಂಗಾಯತ ಸಿಎಂ ಆಗಬೇಕು ಎಂಬ ಶಾಸಕ ಶಾಮನೂರು ಶಂಕರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಶಾಮನೂರು ಶಂಕರಪ್ಪ ಹಿರಿಯರು. ಅವರು ಸರ್ಕಾರಕ್ಕೆ ಮಾರ್ಗದರ್ಶನ ಮಾಡೋದು ತಪ್ಪಲ್ಲ. ಏನಾದ್ರು ಅನಿಸಿಕೆ ಇದ್ದರೆ ತಿದ್ದೋದು ಪಕ್ಷದಲ್ಲಿ, ಸರ್ಕಾರದಲ್ಲಿ ಇದ್ದರೆ ಮಾಡ್ತೀವಿ. ನಮ್ಮ ಸಮಾಜದವರಿಗೆ ಸಿಗಬೇಕು ಅಂತ ಎಲ್ಲಾ ಸಮಾಜದವರು ಬಯಸುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ. ಅವರ ಅನುಭವ, ಮಾರ್ಗದರ್ಶನ ಪಕ್ಷ ಮತ್ತು ಸರ್ಕಾರಕ್ಕೆ ಬೇಕಾಗಿದೆ. ಅವರು ಹೇಳೋದನ್ನ ಹಿರಯರ ಮುಂದೆ ಇಡುತ್ತಾರೆ. ನಮ್ಮ ಸರಕಾರದಲ್ಲಿ ಯಾವ ಸಮುದಾಯದವರಿಗೂ ಅನ್ಯಾಯ ಆಗ್ತಿಲ್ಲ.ನಾವು ಅಧಿಕಾರಕ್ಕೆ ಬಂದಿರೋದು ಸಂವಿಧಾನ ಪ್ರಕಾರ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ. ಜಾತಿ ನೋಡಿ ಅಧಿಕಾರಿಗಳನ್ನ ನಾವು ಪೋಸ್ಟಿಂಗ್ ಮಾಡೋದಿಲ್ಲ. ಅವರ ಸಾಮರ್ಥ್ಯ ನೋಡಿ ಪೋಸ್ಟಿಂಗ್ ಮಾಡ್ತೀವಿ. ನನ್ನ ಇಲಾಖೆಯಲ್ಲಿ ಎಲ್ಲಾ ಸಮುದಾಯದವರು ಇದ್ದಾರೆ. ದಲಿತ, ಬ್ರಾಹ್ಮಣ, ಓಬಿಸಿ, ಲಿಂಗಾಯತ, ಅಲ್ಪಸಂಖ್ಯಾತ ಎಲ್ಲರೂ ಇದ್ದಾರೆ ಎಂದು ಹೇಳಿದ್ದಾರೆ.
ಜಾತಿ ನೋಡಿ ನಾವು ಕೆಲಸ ಕೊಡಲ್ಲ. ಸಾಮರ್ಥ್ಯ, ಜನರಿಗೆ ಸ್ಪಂದಿಸೋ ರೀತಿ, ಕಾನೂನು, ಯೋಜನೆಗಳ ಅರಿವಿದೆಯಾ ಅವರಿಗೆ ಅಂತ ನೋಡಿ ಪೋಸ್ಟಿಂಗ್ ಮಾಡ್ತೀವಿ. ಒಂದು ಸಮುದಾಯಕ್ಕೆ ಅನ್ಯಾಯ ಆಗ್ತಿದೆ ಅಂತ ನಾವು ಭಾವಿಸೋದಿಲ್ಲ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.