ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಮನೆಗೆ ಗುರುವಾರ ಅನೇಕ ಬಿಜೆಪಿ ನಾಯಕರು, ಶಾಸಕರು, ಸಂಘಟನೆಗಳ ಮುಖಂಡರು, ಕಾಂಗ್ರೆಸ್‌ ನಾಯಕರು ಭೇಟಿ ನೀಡಿದ್ದಾರೆ. 

ಸುಳ್ಯ (ಜು.29): ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಮನೆಗೆ ಗುರುವಾರ ಅನೇಕ ಬಿಜೆಪಿ ನಾಯಕರು, ಶಾಸಕರು, ಸಂಘಟನೆಗಳ ಮುಖಂಡರು, ಕಾಂಗ್ರೆಸ್‌ ನಾಯಕರು ಭೇಟಿ ನೀಡಿದ್ದಾರೆ. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರವೀಣ್‌ ಪತ್ನಿ ನೂತನಾಗೆ ಸರ್ಕಾರಿ ಉದ್ಯೋಗ ಕೊಡಿಸುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಮನೆ ಶಿಥಿಲಾವಸ್ಥೆಯಲ್ಲಿದ್ದು ಹೊಸದಾಗಿ ಅದರ ನಿರ್ಮಾಣದ ವ್ಯವಸ್ಥೆ ಮಾಡಲಾಗುವುದು ಎಂದರು.

ಅಪರಾಧಿಗಳು ಇನ್ಯಾವತ್ತೂ ಹೊರಗೆ ಬರದಂತೆ ನೋಡಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅನುಸರಿಸುವ ಎನ್‌ಕೌಂಟರ್‌ ಕ್ರಮವನ್ನು ಇಲ್ಲಿಯೂ ಜಾರಿಗೊಳಿಸಬೇಕು ಎಂದು ಪ್ರವೀಣ್‌ ಬಂಧುಗಳು ನಾಯಕರಲ್ಲಿ ಒತ್ತಾಯಿಸಿದರು. ಸಚಿವ ಎಸ್‌.ಅಂಗಾರ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಬಂಟ್ವಾಳ ಶಾಸಕ ರಾಜೇಶ್‌ ನಾಯ್‌್ಕ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ಪುತ್ತೂರು ಶಾಸಕ ಸಂಜೀವ ಮಠಂದೂರು, ಕಾಂಗ್ರೆಸ್‌ ಮುಖಂಡರಾದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜಾ, ಶ್ರೀ ಪ್ರಣವಾನಂದ ಸ್ವಾಮೀಜಿ ಸಹಿತ ಹಲವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಪ್ರವೀಣ್‌ ತಂದೆ ದಿಢೀರ್‌ ಅಸ್ವಸ್ಥ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ತಂದೆ ಶೇಖರ ಪೂಜಾರಿ ಆರೋಗ್ಯದಲ್ಲಿ ಗುರುವಾರ ಬೆಳಗ್ಗೆ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆಯಿತು. ಪುತ್ರನನ್ನು ಕಳೆದುಕೊಂಡ ಶೋಕದಲ್ಲಿರುವ ಶೇಖರ ಪೂಜಾರಿ ಹೃದಯ ಬಡಿತದಲ್ಲಿ ಏರುಪೇರು ಉಂಟಾಗಿ ಅಸ್ವಸ್ಥರಾದರು. ತಕ್ಷಣ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಬೆಳ್ಳಾರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಸದ್ಯ ಅವರು ಆರೋಗ್ಯದಿಂದಿದ್ದಾರೆ.

ಪ್ರಮೋದ್‌ ಮುತಾಲಿಕ್‌ಗೆ ನಿರ್ಬಂಧ: ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪೊಲೀಸ್‌ ಘಟಕ ವ್ಯಾಪ್ತಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಜು.28ರ ಸಂಜೆ 4ರಿಂದಲೇ ಈ ಆದೇಶ ಅನ್ವಯವಾಗಿದೆ. ಜಿಲ್ಲಾ ಪೊಲೀಸ್‌ ಘಟಕ ವ್ಯಾಪ್ತಿಗೆ ಬರುವ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿ ಪ್ರಮೋದ್‌ ಮುತಾಲಿಕ್‌ ಅವರ ಪ್ರವೇಶ ನಿರ್ಬಂಧಿಸಲಾಗಿದೆ.

ಹತ್ಯೆಯಾದ ಪ್ರವೀಣ್ ಕುಟುಂಬಕ್ಕೆ ವೈಯಕ್ತಿಕ 10 ಲಕ್ಷ ರೂ. ನೆರವು ಘೋಷಿಸಿದ ಅಶ್ವತ್ಥ ನಾರಾಯಣ

ಪ್ರವೀಣ್‌ ಹತ್ಯೆಯನ್ನು ಕೋಮು ದ್ವೇಷದಿಂದ ಎಸಗಿರುವುದಾಗಿ ಗಾಳಿ ಸುದ್ದಿ ಹಬ್ಬಿದೆ. ಅಲ್ಲದೆ, ಪ್ರವೀಣ್‌ ಮೃತದೇಹ ಮೆರವಣಿಗೆ ಸಮಯದಲ್ಲಿ ಅಲ್ಲಲ್ಲಿ ಘರ್ಷಣೆ ಉಂಟಾಗಿ ಸಾರ್ವಜನಿಕ ಆಸ್ತಿಪಾಸ್ತಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಈ ಉದ್ವಿಗ್ನ ಪರಿಸ್ಥಿತಿಯಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅವರು ಬೆಳ್ಳಾರೆ ಮತ್ತು ಮೃತ ಪ್ರವೀಣ್‌ ಮನೆಗೆ, ಇತರ ಕಡೆಗಳಿಗೆ ಭೇಟಿ ನೀಡುವುದಾಗಿ ಮಾಹಿತಿ ಲಭಿಸಿದೆ. ಇಲ್ಲಿಗೆ ಆಗಮಿಸಿ ಪ್ರಚೋದನಕಾರಿ ಹೇಳಿಕೆ ನೀಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಆದೇಶ ಮಾಡಿದ್ದಾಗಿ ತಿಳಿಸಲಾಗಿದೆ.