ಕಾನ್ಫಿಡೆಂಟ್ ಗ್ರೂಪ್‌ನ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ಐಟಿ ಅಧಿಕಾರಿಗಳ ಕಿರುಕುಳದ ಆರೋಪದ ಮೇಲೆ, ದಾಳಿ ನಡೆಸಿದ್ದ ತಂಡವನ್ನು ವಿಚಾರಣೆಗೊಳಪಡಿಸಲಾಗಿದ್ದು, ತನಿಖೆ ಮುಗಿಯುವವರೆಗೂ ಬೆಂಗಳೂರು ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. 

ಬೆಂಗಳೂರು (ಫೆ. 1): ಕಾನ್ಫಿಡೆಂಟ್ ಗ್ರೂಪ್ ನ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣ ಈಗ ರಾಜ್ಯ ರಾಜಕೀಯ ಮತ್ತು ಉದ್ಯಮ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರಕರಣದ ಬೆನ್ನುಹತ್ತಿರುವ ವಿಶೇಷ ತನಿಖಾ ತಂಡ (SIT), ಐಟಿ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. 'ನಮ್ಮ ಕೆಲಸ ನಾವು ಮಾಡಿದ್ದೇವೆ' ಎಂದು ಐಟಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರೂ, ಅವರ ವಿರುದ್ಧದ ಕಿರುಕುಳದ ಆರೋಪಗಳು ತನಿಖೆಯ ದಿಕ್ಕನ್ನು ಬದಲಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಟಿ ಅಧಿಕಾರಿಗಳಿಗೇ ಕಾನೂನು ಸಂಕಷ್ಟ!

ದಾಳಿ ನಡೆಸಿದ್ದ ಕೇರಳದ ಐಆರ್‌ಎಸ್ ಅಧಿಕಾರಿ ಕೃಷ್ಣ ಪ್ರಸಾದ್ ಮತ್ತು ಅವರ ತಂಡ ಅಧಿಕಾರಿಗಳಿಗೇ ಕಾನೂನು ಸಂಕಷ್ಟ ಎದುರಾಗಿದೆ. ಸ್ವತಃ ಎಸಿಪಿ ದರ್ಜೆಯ ಅಧಿಕಾರಿಯೊಬ್ಬರು ಐಟಿ ಅಧಿಕಾರಿಗಳನ್ನು ಪ್ರಾಥಮಿಕವಾಗಿ ವಿಚಾರಣೆ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ನಡೆದ ಸಂಭಾಷಣೆ, ರಾಯ್ ಅವರಿಗೆ ನೀಡಿದ ಮಾನಸಿಕ ಒತ್ತಡ ಹಾಗೂ ರಾಯ್ ಅವರ ಕೊನೆಯ ಕ್ಷಣಗಳ ಬಗ್ಗೆ ಐಟಿ ಅಧಿಕಾರಿಗಳಿಂದ ಎಸ್‌ಐಟಿ ಮಾಹಿತಿಯನ್ನು ಕಲೆಹಾಕಿದೆ.

ಬೆಂಗಳೂರು ಬಿಟ್ಟು ತೆರಳದಂತೆ ಅಧಿಕಾರಿಗಳಿಗೆ ಎಸ್‌ಐಟಿ ಸೂಚನೆ:

ಪ್ರಾಥಮಿಕ ವಿಚಾರಣೆ ಮುಗಿದಿದ್ದರೂ, ತನಿಖೆ ಇನ್ನೂ ಬಾಕಿ ಇದೆ ಎಂದು ತಿಳಿಸಿರುವ ಎಸ್‌ಐಟಿ, ಯಾವುದೇ ಐಟಿ ಅಧಿಕಾರಿಗಳು ತಮ್ಮ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದೆ. ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಕರೆಯುವುದಾಗಿ ಸೂಚನೆ ನೀಡಲಾಗಿದೆ. ಇದು ಐಟಿ ಅಧಿಕಾರಿಗಳ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ತನಿಖೆಯ ಹಾದಿ ಈಗ ಅಧಿಕಾರಿಗಳ ಕಡೆಗೆ ತಿರುಗಿದೆ.

ವ್ಯವಹಾರವೋ? ಕಿರುಕುಳವೋ? ತನಿಖೆ ಚುರುಕು

ಮತ್ತೊಂದೆಡೆ, ಪೊಲೀಸರು ಈಗಾಗಲೇ ರಾಯ್ ಕುಟುಂಬಸ್ಥರು ಮತ್ತು ಕಾನ್ಫಿಡೆಂಟ್ ಗ್ರೂಪ್‌ನ ಉನ್ನತ ಸಿಬ್ಬಂದಿಯಿಂದ ಮಹತ್ವದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಕೇವಲ ಐಟಿ ಕಿರುಕುಳ ಮಾತ್ರವಲ್ಲದೆ, ವ್ಯವಹಾರಿಕ ಸ್ಪರ್ಧೆ ಅಥವಾ ವೈಯಕ್ತಿಕ ಕಾರಣಗಳೂ ಇವೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆದರೆ, ಐಟಿ ಅಧಿಕಾರಿಗಳ 'ಬೆಂಗಳೂರಲ್ಲೇ ಲಾಕ್' ಮಾತ್ರ ಈ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ನೀಡಿದೆ.