ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರು ಕಲ್ಲಡ್ಕ ಪ್ರಭಾಕರ ಮೇಲಿನ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿಗೆ ಪಾಕ್- ಮುಸ್ಲಿಂ ಬಿಟ್ಟರೆ ಬೇರೆ ವಿಷಯವೇ ಇಲ್ಲ, ಚುನಾವಣೆ ಬಂದಾಗ ಮಾತ್ರ ಹಿಂದುಗಳು ಬೇಕು ಎಂದು ಲಾಡ್‌ ಪ್ರಶ್ನಿಸಿದರು. 

ಅಳ್ನಾವರ (ಜೂ.4): ಬಿಜೆಪಿಗೆ ಪಾಕ್- ಮುಸ್ಲಿಂ ಬಿಟ್ಟರೆ ಬೇರೆ ವಿಷಯವೇ ಇಲ್ಲ. ಆ ಪಕ್ಷಕ್ಕೆ ಇವೆರಡೇ ಬುನಾದಿಯಾಗಿದ್ದು, ಇದರ ಮೇಲೆಯೇ ಚರ್ಚೆ ನಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಕಲ್ಲಡ್ಕ ಪ್ರಭಾಕರ ಮೇಲಿನ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಯಾರೇ ಬಂದರೂ ಸಂವಿಧಾನ ಮೇಲೆ ಅಧಿಕಾರ ನಡೆಸಬೇಕು. 24 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬಿಹಾರ ಚುನಾವಣೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್- ಬಿಜೆಪಿಯ ಯುವಕರು ಈ ದೇಶ ನಮಗಾಗಿ ಎಂದು ತಿಳಿಯಬೇಕು. ಭಿನ್ನಾಭಿಪ್ರಾಯ ಇರಬೇಕು. ಆದರೆ, ವೈಯಕ್ತಿಕ ಭಿನ್ನಾಭಿಪ್ರಾಯ ಇರಬಾರದು. ನಾವು ಸಹ ಹಿಂದುಗಳು. ಕಾಂಗ್ರೆಸ್ ಇರುವಾಗಿನಿಂದಲೂ ಹಿಂದೂಗಳು ಇದ್ದಾರೆ. ಆದರೆ, ಬಿಜೆಪಿ ಬರೀ ಧರ್ಮದ ಬಗ್ಗೆ ಬಿಟ್ಟರೆ ಬೇರೆ ಬಂಡವಾಳವನ್ನು ಹೊಂದಿಲ್ಲ. ಬಿಜೆಪಿ ಮುಖಂಡರು ಬಡತನ ರೇಖೆಗಿಂತ ಕೆಳಗಿರುವ ಎಷ್ಟು ಹಿಂದೂಗಳನ್ನು ‌ಮೇಲೆ ತಂದಿದ್ದಾರೆ?. ಚುನಾವಣೆ ಬಂದಾಗ ಮಾತ್ರ ಇವರಿಗೆ ಹಿಂದುಗಳು ಬೇಕು. ಬರೀ ಬಿಜೆಪಿ ನಾಯಕರ ಮಕ್ಕಳು ಮಾತ್ರ ಉದ್ಧಾರ ಆಗಿದ್ದಾರೆಯೇ ಹೊರತು ಹಿಂದೂಗಳು ಉದ್ಧಾರವಾಗಿದ್ದಾರೆಯೇ ಎಂದು ಲಾಡ್‌ ಪ್ರಶ್ನಿಸಿದರು.

ಎಲ್ಲ ಕಡೆ ಅವಕಾಶ ನೀಡಲಿ: ಎಸ್ಸಿ-ಎಸ್ಟಿ ಸೇರಿದಂತೆ ಜಾತಿಗೊಂದು ವಸತಿ ನಿಲಯ ಸ್ಥಾಪನೆಯಿಂದಾಗಿ ಎಡಪಂಥೀಯ ಚಿಂತನೆಗಳು ಹೆಚ್ಚುತ್ತಿವೆ ಎಂಬ ಶಾಸಕ ಅರವಿಂದ ಬೆಲ್ಲದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಲಾಡ್‌, ಬೆಲ್ಲದ್‌ ಅವರು ಹೇಳಿರುವುದು ನಿಜವಿದೆ. ಹಾಗಾದರೆ ಇದೇ ವ್ಯವಸ್ಥೆ ಎಲ್ಲ ಕಡೆ ಆಗಬೇಕು ಎಂಬುದು ನಮ್ಮ ಅಭಿಪ್ರಾಯ. ಗುಡಿ-ಗುಂಡಾರಗಳಲ್ಲೂ ಪೂಜೆ ಮಾಡಲು ಎಲ್ಲ ಜಾತಿಯವರಿಗೆ ಅವಕಾಶ ನೀಡಬೇಕು. ಮಾತನಾಡುವುದು ಅವರ ವಿಚಾರ. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಆದರೆ, ಅವರ ಹೇಳಿಕೆಗೆ ನಮ್ಮ ಭಿನ್ನಮತವಿದೆ ಎಂದರು.