ಧಾರವಾಡದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ವಾಹನಗಳಿಗೆ ಸಚಿವ ಸಂತೋಷ ಲಾಡ್ ಚಾಲನೆ. ಆದರೆ, ಕಾರ್ಯಕ್ರಮದ ಪೂಜೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದು ಚರ್ಚೆಗೆ ಗ್ರಾಸ.
ಧಾರವಾಡ (ಮೇ.27): ಧಾರವಾಡದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಸಂಚಾರಿ ಆರೋಗ್ಯ ತಪಾಸಣೆ ವಾಹನಗಳಿಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು. ಧಾರವಾಡ ಜಿಲ್ಲೆಗೆ ಒಟ್ಟು ಮೂರು ವಾಹನಗಳು ಮಂಜೂರಾಗಿದ್ದು, ಈ ವಾಹನಗಳು ಕಾರ್ಮಿಕರ ಇದ್ದಲ್ಲಿಯೇ ಹೋಗಿ 20 ಬಗೆಯ ಆರೋಗ್ಯ ತಪಾಸಣೆ ನಡೆಸಲಿವೆ. ಸರ್ಕ್ಯೂಟ್ ಹೌಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಮತ್ತಿತರರು ಭಾಗವಹಿಸಿದ್ದರು.
ಕರ್ಪೂರ, ಅಗರಬತ್ತಿ ಬೆಳಗಲು ಸಂತೋಷ ಲಾಡ್ ಹಿಂದೇಟು?
ಕಾರ್ಯಕ್ರಮದ ಆರಂಭದಲ್ಲಿ ನಡೆಯಬೇಕಿದ್ದ ಸಾಂಪ್ರದಾಯಿಕ ಪೂಜೆಯಲ್ಲಿ ಸಚಿವ ಸಂತೋಷ ಲಾಡ್ ಭಾಗವಹಿಸಲು ಹಿಂದೇಟು ಹಾಕಿದ್ದು ಗಮನ ಸೆಳೆಯಿತು. ಕಾರ್ಮಿಕ ಇಲಾಖೆ ಅಧಿಕಾರಿಗಳು ಪೂಜೆಗೆ ಆಹ್ವಾನಿಸಿದರೂ, ಲಾಡ್ ದೂರವೇ ಕೈಕಟ್ಟಿಕೊಂಡು ನೋಡುತ್ತಾ ನಿಂತು, ಶಾಸಕ ಎನ್.ಎಚ್. ಕೋನರಡ್ಡಿಯವರಿಗೆ ಕರ್ಪೂರ ಬೆಳಗಲು ಮತ್ತು ಇಡುಗಾಯಿ ಒಡೆಯಲು ಸೂಚಿಸಿದರು. ಕೋನರಡ್ಡಿಯವರು ಕರ್ಪೂರ ಬೆಳಗಿ, ಲಾಡ್‌ಗೆ ಕೊಡಲು ಮುಂದಾದಾಗ, 'ಸ್ವಲ್ಪ ನೀವೇ ಬೆಳಗಿ' ಎಂದು ಕೇಳಿಕೊಂಡರೂ, ಲಾಡ್ ಕರ್ಪೂರ ಬೆಳಗಲು ಒಪ್ಪದೆ, ಕಾಯಿ ಒಡೆಯುವಂತೆ ಹೇಳಿದರು. ಕೊನೆಗೆ ಕೋನರಡ್ಡಿಯವರೇ ಇಡುಗಾಯಿ ಒಡೆದರು. ಲಾಡ್ ಪೂಜೆಗೆ ಕೈ ಜೋಡಿಸದೇ ಕೇವಲ ಹಸಿರು ನಿಶಾನೆ ತೋರಿಸಿದರು.
ಈ ಘಟನೆಯಿಂದ ಸಚಿವ ಸಂತೋಷ ಲಾಡ್ ಅವರ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ನಿಲುವು ಚರ್ಚೆಗೆ ಗ್ರಾಸವಾಗಿದೆ.
