ಕರ್ನಾಟಕದಲ್ಲಿ ರಮೇಶ್ ಕುಮಾರ್ ಅವರಿಗಿಂತ ಬುದ್ಧಿವಂತರಿಲ್ಲಾ ಎಂದುಕೊಂಡಿದ್ದಾರೆ. ಅತಿಯಾದ ಮಾತಿನಿಂದ ಭರವಸೆಗಳನ್ನು ಕಳೆದುಕೊಳ್ಳುತ್ತಾರೆ: ಶಿವರಾಂ ಹೆಬ್ಬಾರ್
ಬೆಂಗಳೂರು(ಜು.23): ನೆಹರೂ, ಇಂದಿರಾ, ಸೋನಿಯಾ ಹೆಸರೇಳಿಕೊಂಡು ಮೂರ್ನಾಲ್ಕು ತಲೆಮಾರಿಗಾಗುವಷ್ಟುಸಂಪತ್ತು ಮಾಡಿಕೊಂಡಿದ್ದೇವೆ ಎಂಬ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸ್ಪೀಕರ್ ಸಚಿವ ರಮೇಶ್ ಕುಮಾರ್ ಹೇಳಿಕೆಯನ್ನೇ ಆಧರಿಸಿ ತನಿಖೆ ಕೈಗೊಳ್ಳಬೇಕು ಎಂದು ಆಡಳಿತಾರೂಢ ಬಿಜೆಪಿಯ ಹಲವು ಸಚಿವರು ಆಗ್ರಹಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ರಮೇಶ್‌ಕುಮಾರ್ ಹೇಳಿಕೆಯನ್ನು ಲೇವಡಿ ಮಾಡಿ ತಿರುಗೇಟು ನೀಡಿದರು.
ಸಚಿವ ಅಶೋಕ್ ಮಾತನಾಡಿ, ಕಾಂಗ್ರೆಸ್ 60 ವರ್ಷದ ನಿಜಬಣ್ಣವನ್ನು ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಹೊರಹಾಕಿದ್ದಾರೆ. ಯಾವಾಗಲೂ ರಮೇಶ್ ಕುಮಾರ್ ಸತ್ಯ ಹೇಳುತ್ತಾರೆ. ಕಾಂಗ್ರೆಸ್‌ನ ಅಧಿನಾಯಕರಾದ ರಾಹುಲ್‌ಗಾಂಧಿ, ಸೋನಿಯಾಗಾಂಧಿ ಅವರ ಇ.ಡಿ ವಿಚಾರಣೆಗೆ ರಮೇಶ್ ಕುಮಾರ್ ಸಾಕ್ಷಿ ಕೊಟ್ಟಿದ್ದಾರೆ. ನಮ್ಮ ಮೇಲೆ ಕಾಂಗ್ರೆಸ್‌ನವರು ಶೇ.40ರಷ್ಟು ಕಮಿಷನ್ ಆರೋಪ ಮಾಡಿದರು. ಈಗ ಅವರ ಪಕ್ಷದವರೇ ಮೂರ್ನಾಲ್ಕು ತಲೆಮಾರು ಆಗುವಷ್ಟು ಆಸ್ತಿ ಮಾಡಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. 3-4 ತಲೆಮಾರು ಲೆಕ್ಕ ಹಾಕಿದರೆ ಶೇ.160ರಷ್ಟು ಕಮಿಷನ್ ಹೊಡೆದಿದ್ದಾರೆ ಎಂದು ಆಪಾದಿಸಿದರು.
ಗಾಂಧಿಗಳಿಂದಾಗಿ 4 ತಲೆಮಾರಿಗೆ ಸಂಪತ್ತು ಮಾಡಿದ್ದೇವೆ: ರಮೇಶ್ ಕುಮಾರ್
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ರಮೇಶ್ ಹೇಳಿಕೆಯಲ್ಲಿ ಬಹಳಷ್ಟುತೂಕ ಇರುತ್ತದೆ. ಅವರ ಮೇಲೆ ನನಗೆ ಅಪಾರವಾದ ಗೌರವ ಇದೆ. ನೆಹರು, ಇಂದಿರಾಗಾಂಧಿ, ಸೋನಿಯಾಗಾಂಧಿ ಆಶ್ರಯದಲ್ಲಿ 3-4 ತಲೆಮಾರುಗಳು ಕೂತು ತಿನ್ನುವಷ್ಟುಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಕಾಂಗ್ರೆಸ್ ನಾಯಕರು ದೇಶದನ ಜನರ ಕ್ಷಮೆ ಕೇಳಬೇಕು. ಆಡಳಿತದ ಹೆಸರಲ್ಲಿ ಏನು ಮಾಡಿದ್ದಾರೆ ಎನ್ನುವುದಕ್ಕೆ ಇದು ದೊಡ್ಡ ನಿದರ್ಶನ. ಜನರ ಹಣವನ್ನು ಲೂಟಿ ಹೊಡೆದಿದ್ದಾರೆ ಎಂದು ಒಪ್ಪುವುದಾದರೆ ಇದಕ್ಕಿಂತ ನೀಚತನ ಇನ್ನೊಂದಿಲ್ಲ ಎಂದರು.
ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ತನಿಖೆ ಮಾಡಬಾರದು ಎಂದು ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗ ರಮೇಶ್ ಕುಮಾರ್ ಹೇಳಿಕೆಯಿಂದ ಹಗರಣ ನಡೆದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ತನಿಖಾ ಏಜೆನ್ಸಿಗಳು ತಕ್ಷಣವೇ ಇವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಬೇಕು. ರಮೇಶ್ ಕುಮಾರ್ ಮೇಲೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದರೆ ಎಂಬುದು ಹೊರಬರಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ, ಅತಿ ಬುದ್ದಿವಂತಿಕೆ ಪ್ರದರ್ಶನ ಮಾಡುವುದಕ್ಕೆ ಹೋದರೆ ಹೀಗೆ ಆಗುತ್ತದೆ. ಕರ್ನಾಟಕದಲ್ಲಿ ರಮೇಶ್ ಕುಮಾರ್ ಅವರಿಗಿಂತ ಬುದ್ಧಿವಂತರಿಲ್ಲಾ ಎಂದುಕೊಂಡಿದ್ದಾರೆ. ಅತಿಯಾದ ಮಾತಿನಿಂದ ಭರವಸೆಗಳನ್ನು ಕಳೆದುಕೊಳ್ಳುತ್ತಾರೆ. ಅದ್ವಾನಗಳನ್ನು ಸೃಷ್ಟಿಮಾಡಿಕೊಳ್ಳುತ್ತಾರೆ. ರಮೇಶ್ ಕುಮಾರ್ ಅವರೇ ಹೇಳಿದ ಸತ್ಯ ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.
