ಗಾಂಧಿಗಳಿಂದಾಗಿ 4 ತಲೆಮಾರಿಗೆ ಸಂಪತ್ತು ಮಾಡಿದ್ದೇವೆ: ರಮೇಶ್ ಕುಮಾರ್
ಗಾಂಧಿ ಕುಟುಂಬ ಸಂಕಷ್ಟದಲ್ಲಿದ್ದಾಗ ನಾವು ಬೆಂಬಲ ನೀಡಬೇಕು. ಅವರ ಹೆಸರು ಹೇಳಿಕೊಂಡು ಆಸ್ತಿ ಮಾಡಿಕೊಂಡಿದ್ದೇವೆ. ಸಂಕಷ್ಟದಲ್ಲಿದ್ದಾಗ ಬೆಂಬಲ ನೀಡಬೇಕು. ನಮ್ಮಲ್ಲಿರುವ ಸಣ್ಣತನ, ನೀಚತನ, ಚಾಡಿಕೋರತನ ಬಿಟ್ಟು ಅವರ ಪರ ನಿಲ್ಲೋಣ ಎಂದ ರಮೇಶ್ ಕುಮಾರ್
ಬೆಂಗಳೂರು(ಜು.22): ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರನ್ನು ಹೇಳಿಕೊಂಡು ನಾವು ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ. ಈಗ ನಾವು ಮಾತನಾಡದಿದ್ದರೆ ತಿನ್ನುವ ಅನ್ನದಲ್ಲಿ ಹುಳಗಳು ಬೀಳುತ್ತವೆ. ಹೀಗಾಗಿ ಸೋನಿಯಾ ಪರವಾಗಿ ಹೋರಾಟ ಮಾಡೋಣ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಭಾವನಾತ್ಮಕವಾಗಿ ಹೇಳಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದ್ದನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಗಾಂಧಿ ಕುಟುಂಬ ಸಂಕಷ್ಟದಲ್ಲಿದ್ದಾಗ ನಾವು ಬೆಂಬಲ ನೀಡಬೇಕು. ಅವರ ಹೆಸರು ಹೇಳಿಕೊಂಡು ಆಸ್ತಿ ಮಾಡಿಕೊಂಡಿದ್ದೇವೆ. ಸಂಕಷ್ಟದಲ್ಲಿದ್ದಾಗ ಬೆಂಬಲ ನೀಡಬೇಕು. ನಮ್ಮಲ್ಲಿರುವ ಸಣ್ಣತನ, ನೀಚತನ, ಚಾಡಿಕೋರತನ ಬಿಟ್ಟು ಅವರ ಪರ ನಿಲ್ಲೋಣ ಎಂದರು.
ದೇಶಾದ್ಯಂತ ಸೋನಿಯಾ ಗಾಂಧಿಯವರಿಗೆ ಜನತೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇ.ಡಿ. ವಿಚಾರಣೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ಗುಮಾನಿಗೆ ಅವಕಾಶ ಇಲ್ಲದಿದ್ದರೂ ವಿಚಾರಣೆ ನಡೆಸುತ್ತಿರುವುದೇಕೆ? ರಾಷ್ಟ್ರಪತಿ ಭವನದಿಂದ ಪ್ರಧಾನಿ ಹುದ್ದೆಯ ಆಹ್ವಾನ ಬಂದರೂ ಅದನ್ನು ನಿರಾಕರಿಸಿದವರು ಸೋನಿಯಾ ಗಾಂಧಿ. ಹಣ ಮಾಡಬೇಕೆಂದಿದ್ದರೆ ಪ್ರಧಾನಿ ಹುದ್ದೆಗಿಂತ ನ್ಯಾಷನಲ್ ಹೆರಾಲ್ಡ್ ಹಗರಣ ದೊಡ್ಡದಲ್ಲ ಎಂದು ವ್ಯಾಖ್ಯಾನಿಸಿದರು.
ಸಿದ್ದು, ಡಿಕೆಶಿ ಒಳಹೋರಾಟದಿಂದ ಕಾಂಗ್ರೆಸ್ ಅವನತಿ: ಜಗದೀಶ ಶೆಟ್ಟರ್
ಸೋನಿಯಾ ಇಲ್ಲದಿದ್ದರೆ ನಾವು ಸೊನ್ನೆ:
ರಾಷ್ಟ್ರೀಯ ಸ್ವಯಂಸೇವಕ ಸಂಘದವರು, ಹಿಂದೂ ಮಹಾ ಸಭಾದವರು ಸ್ವಾತಂತ್ರ್ಯಕ್ಕಾಗಿ ಒಂದು ದಿನವೂ ಜೈಲಿಗೆ ಹೋದವರಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಹಲ್ಲುಕಿರಿದು ಮಾತನಾಡುವ ಅವಿವೇಕಿಗಳಿಗೆ ಇದು ಅರ್ಥವಾಗುವುದಿಲ್ಲ. ಕಾಂಗ್ರೆಸ್‌ಗೆ ಸೋನಿಯಾ ಗಾಂಧಿ ಬೃಹತ್ ಶಕ್ತಿಯಾಗಿದ್ದಾರೆ. ಅವರಿಲ್ಲದಿದ್ದರೆ ನಾವು ಸೊನ್ನೆಗಳು ಎಂದು ಬಣ್ಣಿಸಿದರು.
ಹೆಡಗೇವಾರ್, ಗೋಳ್ವಾಳ್ಕರ್ ಎಂದೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲ. ಸ್ವಾತಂತ್ರ್ಯ ಹೋರಾಟಕ್ಕೂ ಇವರಿಗೂ ಸಂಬಂಧವಿಲ್ಲ. ಕೇಂದ್ರ ಸರ್ಕಾರ ಸಂವಿಧಾನ ದುರ್ಬಲಗೊಳಿಸಲು, ಚತುರ್ವರ್ಣ ಪದ್ಧತಿಯನ್ನು ಜಾರಿಗೆ ತರುವ ಹುನ್ನಾರ ನಡೆಸಿದೆ. ಬ್ರಾಹ್ಮಣೇತರರನ್ನು ಆರ್‌ಎಸ್‌ಎಸ್ ಸರಸಂಘಚಾಲಕರನ್ನಾಗಿ ಇಲ್ಲಿಯವರೆಗೂ ನೇಮಿಸಿಲ್ಲ. ದ್ವೇಷದ ರಾಜಕಾರಣ ಮಾಡಿದವರು ಇತಿಹಾಸದಲ್ಲಿ ಎಂದೂ ಉಳಿದಿಲ್ಲ. ಸರ್ವಾಧಿಕಾರಿ ಹಿಟ್ಲರ್ ಕೊನೆಗೆ ಟೇಬಲ್ ಕೆಳಗೆ ಅಡಗಿ ಕುಳಿತಿದ್ದ ಎಂದು ಇತಿಹಾಸ ಸ್ಮರಿಸಿದರು.