ನಮ್ಮ ಸರ್ಕಾರ ರಚನೆಯಾಗಿ 20 ದಿನವಾಗಿದೆ ಅಷ್ಟೇ. ಈಗಲೇ ಬಿಜೆಪಿಯವರು ಕುಣಿದಾಡುತ್ತಿದ್ದಾರೆ. ಅವರು ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು. ಬಿಟ್‌ ಕಾಯಿನ್‌ ಪ್ರಕರಣವನ್ನೂ ಮರು ಪರಿಶೀಲನೆ ಮಾಡಿ ತನಿಖೆ ನಡೆಸುತ್ತೇವೆ ಎಂದು ಟಾಂಗ್‌ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ 

ಬೆಂಗಳೂರು(ಜೂ.15): ಬಿಜೆಪಿ ಅವಧಿಯ ಪಿಎಸ್‌ಐ ಹಗರಣ, ನೀರಾವರಿ ಇಲಾಖೆಯ ಇಂಜನಿಯರ್‌ಗಳ ನೇಮಕಾತಿ ಮರು ತನಿಖೆ ನಡೆಸುವುದಾಗಿ ಹೇಳಿದ್ದ ಕಾಂಗ್ರೆಸ್‌ ಸರ್ಕಾರ ಇದೀಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಟ್‌ ಕಾಯಿನ್‌ ಪ್ರಕರಣವನ್ನೂ ಮರು ಪರಿಶೀಲನೆ ಮಾಡಿ ತನಿಖೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ನಮ್ಮ ಸರ್ಕಾರ ರಚನೆಯಾಗಿ 20 ದಿನವಾಗಿದೆ ಅಷ್ಟೇ. ಈಗಲೇ ಬಿಜೆಪಿಯವರು ಕುಣಿದಾಡುತ್ತಿದ್ದಾರೆ. ಅವರು ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು. ಬಿಟ್‌ ಕಾಯಿನ್‌ ಪ್ರಕರಣವನ್ನೂ ಮರು ಪರಿಶೀಲನೆ ಮಾಡಿ ತನಿಖೆ ನಡೆಸುತ್ತೇವೆ ಎಂದು ಟಾಂಗ್‌ ನೀಡಿದರು.

ನಿಷೇಧಿತ PFI ಸಂಘಟನೆಯ ಮಾಸ್ಟರ್ ಮೈಂಡ್ ಬಂಧನ

ಧೈರ್ಯ ತುಂಬಲು ದಲಿತ ಸಿಎಂ- ಸ್ಪಷ್ಟ​ನೆ:

‘ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಮಾಧ್ಯಮಗಳು ಆಳವಾಗಿ ಚಿಂತನೆ ಮಾಡುವ ಅಗತ್ಯವಿಲ್ಲ. ನಾಳೆಯೇ ನಾವು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಲ್ಲ. ನಮ್ಮ ಸಮುದಾಯಕ್ಕೆ ಧೈರ್ಯ ತುಂಬಲು ಆ ರೀತಿ ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ಗೊಂದಲದ ಮಾತು ಇಲ್ಲ’ ಎಂದು ಪರ​ಮೇ​ಶ್ವ​ರ್‌ ಸಮಜಾಯಿಷಿ ನೀಡಿದರು.

ಕಾಂಗ್ರೆಸ್‌ ಹೈಕಮಾಂಡ್‌ನಿಂದ ಸಚಿವರ ಮೌಲ್ಯಮಾಪನ ಮಾಡುವ ಬಗ್ಗೆ ಇನ್ನೂ ಸೂಚನೆ ಬಂದಿಲ್ಲ. ಒಂದೊಮ್ಮೆ ಈ ರೀತಿ ಮಾಡಿದರೆ ಒಳ್ಳೆಯದು. ಬಿಜೆಪಿಯವರು ಈ ರೀತಿ ಮಾಡದಿದ್ದರಿಂದಲೇ ಅವರಿಗೆ ಹೀಗಾಯಿತು. ನಮಗೆ ಮೌಲ್ಯಮಾಪನ ಮಾಡಿದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

‘ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. ಅವಕಾಶ ವಂಚಿತರಿಗೆ ನ್ಯಾಯ ಕೊಡಿಸಬೇಕು. ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಯಾವ ಮಾರ್ಗ ಅನುಸರಿಬಹುದು ಎಂದು ಚರ್ಚೆ ನಡೆಯುತ್ತಿದೆ. ಅಡ್ವೊಕೇಟ್‌ ಜನರಲ್‌ ಅವರ ಬಳಿಯೂ ಚರ್ಚೆ ನಡೆಸಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಎಸ್‌ಐ, ಬಿಟ್‌ಕಾಯಿನ್‌ ಅಕ್ರಮಕ್ಕೆ ತಾರ್ಕಿಕ ಅಂತ್ಯ, ಇದು ನಮ್ಮ 6ನೇ ಗ್ಯಾರಂಟಿ: ಪ್ರಿಯಾಂಕ್‌ ಖರ್ಗೆ

‘ಪೊಲೀಸ್‌ ಇಲಾಖೆಯಲ್ಲಿ ಸುಧಾರಣೆಗೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್‌ ಅವರು ವರದಿ ನೀಡಿದ್ದಾರೆ. ಹಿಂದೆ ಗೃಹ ಸಚಿವನಾಗಿದ್ದಾಗ 12 ಸಾವಿರ ಪೊಲೀಸರಿಗೆ ಪ್ರಮೋಷನ್‌ ಕೊಡಿಸಿದ್ದೆ. ಯಾವುದೇ ಕಾರಣಕ್ಕೂ ಪ್ರಮೋಷನ್ಸ್‌ ನಿಲ್ಲಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.

ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸಭೆ ನಡೆಸಿದ್ದಾರೆ ಎಂದು ವಿವಾದವಾಗಿರುವುದಕ್ಕೆ ಸ್ಪಷ್ಟನೆ ನೀಡಿದ ಅವರು, ಅದು ಅಧಿಕೃತ ಸಭೆ ಆಗಿರಲಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಭೆ ನಡೆಸುತ್ತಿದ್ದರು. ಆಗ ಅಲ್ಲಿಗೆ ಸುರ್ಜೇವಾಲಾ ಆಗಮಿಸಿದ್ದಾರಷ್ಟೇ. ವಿಧಾನಸೌಧದಲ್ಲಿ ಸಭೆ ನಡೆದಿಲ್ಲ. ಖಾಸಗಿ ಹೋಟೆಲ್‌ನಲ್ಲಿ ನಡೆಸಿದ್ದಾರೆ. ಬಿಜೆಪಿಯವರು ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಿ. ರಾಜಭವನದವರು ಇದನ್ನು ಪರಿಶೀಲಿಸುತ್ತಾರೆ ಎಂದು ವಿವರಿಸಿದರು.