Cattle bones found in Bhatkal: ಭಟ್ಕಳದಲ್ಲಿ ಪತ್ತೆಯಾದ ದನದ ಮೂಳೆಗಳ ಪ್ರಕರಣದಲ್ಲಿ ಹೊಸ ತಿರುವು. ಸ್ಥಳೀಯ ಮುಸ್ಲಿಂ ನಿವಾಸಿಯಿಂದ ಪ್ರಕರಣವನ್ನು ಸುಳ್ಳು ಎಂದು ಬಿಂಬಿಸುವ ಯತ್ನ. ಮೂಳೆ ಪತ್ತೆ ಹಚ್ಚಿದವರ ವಿರುದ್ಧವೇ ದೂರು ದಾಖಲು.

ಕಾರವಾರ, ಉತ್ತರಕನ್ನಡ, (ಸೆ.13): ಭಟ್ಕಳದ ಮಗ್ದೂಂ ಕಾಲೋನಿಯಲ್ಲಿ ನಿನ್ನೆ ಅರಣ್ಯ ಪ್ರದೇಶದಲ್ಲಿ ನೂರಾರು ದನಗಳ ಮೂಳೆಗಳು ಪತ್ತೆಯಾದ ಬಗ್ಗೆ ಸುದ್ದಿ ಬಹಿರಂಗವಾದ ನಂತರ, ಈ ಪ್ರಕರಣವನ್ನು ಸುಳ್ಳು ಎಂದು ಬಿಂಬಿಸುವ ಉದ್ದೇಶದಿಂದ ಸ್ಥಳೀಯ ಮುಸ್ಲಿಂ ನಿವಾಸಿ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೃಹತ್ ಪ್ರಮಾಣದಲ್ಲಿ ದನದ ಮೂಳೆಗಳು ಪತ್ತೆಯಾಗಿದ್ದವು. ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದ್ರೆ ಇವೆಲ್ಲವೂ ಸುಳ್ಳು, ತಪ್ಪು ಮಾಹಿತಿ ಹರಡಿಸಿ ಸಮಾಜದಲ್ಲಿ ಶಾಂತಿ-ಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಪತ್ತೆ ಹಚ್ಚಿದ ಹಿಂದೂಗಳ ವಿರುದ್ಧವೇ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ..

ತಾಹೀರ್ ಮಸ್ತಾನ್ ಎಂಬಾತನಿಂದ ದೂರು:

ಭಟ್ಕಳ ಮಗ್ದೂಂ ಕಾಲೋನಿ ನಿವಾಸಿ ತಾಹೀರ್ ಮಸ್ತಾನ್ ಅವರು ಸಲ್ಲಿಸಿದ ದೂರಿನಲ್ಲಿ, ಶ್ರೀನಿವಾಸ ಭಟ್ಕಳ, ಶ್ರೀಕಾಂತ್ ಭಟ್ಕಳ ಸೇರಿದಂತೆ ಇನ್ನೂ ನಾಲ್ವರ ವಿರುದ್ಧ ಆರೋಪ ಮಾಡಲಾಗಿದೆ. ದೂರಿನ ಪ್ರಕಾರ, ಸೆಪ್ಟೆಂಬರ್ 10ರಂದು ಸಂಜೆ 5:30ರಿಂದ 6:00ರ ನಡುವೆ ಈ ಆರೋಪಿಗಳು ಗುಂಪು ಕಟ್ಟಿಕೊಂಡು ಮಗ್ದೂಂ ಕಾಲೋನಿ ಗುಡ್ಡ ಪ್ರದೇಶಕ್ಕೆ ಬಂದು ಸುತ್ತಾಡಿದ್ದರು. ದೂರದಾರರು ಇದನ್ನು ಕಣ್ಣಾರೆ ನೋಡಿದ್ದು, ಈ ಘಟನೆಯನ್ನು ಸಾಕ್ಷ್ಯವಾಗಿ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.ನಂತರ, ಸೆಪ್ಟೆಂಬರ್ 11ರಂದು ಆರೋಪಿಗಳು ಅಲ್ಲಿ ಕೆಲವು ಪ್ರಾಣಿಗಳ ಎಲುಬುಗಳು ಕಂಡುಬಂದಿವೆ ಎಂದು ಪೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ. ಈ ಕೃತ್ಯ ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಭಯ ಹುಟ್ಟಿಸಿ ಶಾಂತಿ ಭಂಗಕ್ಕೆ ಕಾರಣವಾಗಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಗೊಂದಲ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ರೀತಿಯ ಕೃತ್ಯಗಳು ಭಾರತೀಯ ನ್ಯಾಯ ಸಂಹಿತೆಯ ಅನೇಕ ವಿಧಾನಗಳಡಿಯಲ್ಲಿ ಶಿಕ್ಷಾರ್ಹವಾಗಿದ್ದು, ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.,

ಭಟ್ಕಳದಲ್ಲಿ ದನದ ಮೂಳೆಗಳು ಪತ್ತೆ:

ಭಟ್ಕಳ ಮಗ್ದೂಂ ಕಾಲೋನಿ ಹಿಂದಿನ ಅರಣ್ಯ ಪ್ರದೇಶದ ಗುಡ್ಡ ಭಾಗದಲ್ಲಿ (ಸರ್ವೇ ನಂಬರ್ 74) ಭಾರೀ ಪ್ರಮಾಣದಲ್ಲಿ ದನಗಳ ಮೂಳೆಗಳು ಪತ್ತೆಯಾಗಿತ್ತು. ಈ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್‌ನ ವಿಶೇಷ ವರದಿ ಪ್ರಸಾರವಾಗಿ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ವರದಿ ಬಂದ ನಂತರ ಡಿವೈಎಸ್‌ಪಿ ಮಹೇಶ್ ಕೆ., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ, ಪಿಎಸ್‌ಐ ನವೀನ್, ಪಶುವೈದ್ಯಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಾಶಿ ರಾಶಿ ಮೂಳೆಗಳನ್ನು ಕಂಡಿದ್ದರು. ಸ್ಥಳದಲ್ಲಿ ಭಾರೀ ಪ್ರಮಾಣದ ದನಗಳ ಮೂಳೆಗಳು ಪತ್ತೆಯಾದ ಹಿನ್ನೆಲೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಇದೀಗ ಭಟ್ಕಳದ ಮುಸ್ಲಿಂ ವ್ಯಕ್ತಿಯಿಂದ ಇಡೀ ಪ್ರಕರಣವನ್ನು ಸುಳ್ಳು ಎಂದು ಬಿಂಬಿಸಲು ಯತ್ನಸಿದ್ದಲ್ಲದೇ. ಸಾಕ್ಷ್ಯ ಸಮೇತ ಮೂಳೆ ಪತ್ತೆ ಬಗ್ಗೆ ದೂರು ನೀಡಿದವರ ಮೇಲೆ ದೂರು ನೀಡಿ ಘಟನೆಯನ್ನು ಸುಳ್ಳು ಎಂದು ಬಿಂಬಿಸಲು ಯತ್ನಿಸಲಾಗಿದೆ.