ಬೆಂಗಳೂರು(ಆ.01): ತಾವು ಪೊಲೀಸ್‌ ಆಯುಕ್ತರಾಗಿ ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಬೆಂಗಳೂರಿನ ನಾಗರಿಕರಿಗೆ ನಿಗರ್ಮಿತ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಧನ್ಯವಾದ ಹೇಳಿದ್ದಾರೆ.

ನಾನು ಆಯುಕ್ತ ಹುದ್ದೆಯ ಜವಾಬ್ದಾರಿಯನ್ನು ನನ್ನ ಮಿತ್ರ ಮತ್ತು ಬ್ಯಾಚ್‌ಮೇಟ್‌ ಆಗಿರುವ ಕಮಲ್‌ ಪಂತ್‌ ಅವರಿಗೆ ಹಸ್ತಾಂತರಿಸುತ್ತಿದ್ದೇನೆ. ಈವೊಂದು ವರ್ಷದ ಅವಧಿಯಲ್ಲಿ ನನಗೆ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನ ಅಪಾರವಾದ ಸಹಕಾರ, ಪ್ರೀತಿ ಹಾಗೂ ವಿಶ್ವಾಸ ಸಿಕ್ಕಿದೆ. ನಾವೆಲ್ಲರೂ ಒಟ್ಟಿಗೆ ಎದುರಾದ ಎಲ್ಲ ರೀತಿಯ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿದ್ದೇವೆ. ಬೆಂಗಳೂರು ಸುರಕ್ಷಿತವಾಗಿದೆ. ಪೌರತ್ವ ಕಾಯ್ದೆ ವಿರೋಧಿ ಹೋರಾಟ (ಸಿಎಎ), ಕೊರೋನಾ ಹಾಗೂ ವಲಸೆ ಕಾರ್ಮಿಕರ ಸಮಸ್ಯೆಗಳಲ್ಲಿ ಪೊಲೀಸರ ಜತೆ ನಾಗರಿಕರು ಕೈ ಜೋಡಿಸಿದ್ದನ್ನು ಮರೆಯಲಾಗದು ಎಂದು ಸ್ಮರಿಸಿದ್ದಾರೆ.

ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್

ವಿಶೇಷವಾಗಿ ಸಿವಿಲ್‌ ಪೊಲೀಸ್‌ ವಾರ್ಡನ್‌ ಹಾಗೂ ಟ್ರಾಫಿಕ್‌ ವಾರ್ಡನ್‌ ನೇಮಕಾತಿಗೆ ಜನರು ತುಂಬಾ ಚೆನ್ನಾಗಿ ಸ್ಪಂದಿಸಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಜನರು ನೋಡಿಕೊಂಡಿದ್ದಾರೆ. ಪೊಲೀಸರ ನಿರ್ಬಂಧನೆಗಳಿಂದ ವೈಯಕ್ತಿಕ ಅನಾನುಕೂಲವಾದರೂ ನಾಗರಿಕರು ಸಹಿಸಿದ್ದಾರೆ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪೊಲೀಸ್‌ ತಂಡಕ್ಕೆ ಸಹಕಾರ ನೀಡಿದ್ದರು. ಪ್ರತಿಯೊಬ್ಬ ಕಾನ್‌ಸ್ಟೇಬಲ್‌ಗೂ ಪ್ರೀತಿ ತೋರಿಸಿದ್ದಾರೆ. ಇದೇ ಸಹಕಾರ ಮುಂದೆ ಸಹ ನೀಡಬೇಕು ಎಂದು ಭಾಸ್ಕರ್‌ ರಾವ್‌ ವಿನಂತಿಸಿದ್ದಾರೆ.