ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್
ಬೆಂಗಳೂರು ಪೊಲೀಸ್ ಕಮಿಷನರ್ ಬದಲಾವಣೆ/ ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್/ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದ ರಾವ್/ ಸವಾಲಿನ ವರ್ಷದಲ್ಲಿ ಕೆಲಸ ಮಾಡಿದ ಭಾಸ್ಕರ್ ರಾವ್
"
ಬೆಂಗಳೂರು (ಜು. 31) ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕಮಲ್ ಪಂಥ್ ನೇಮಕವಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂಥ್ ಶುಕ್ರವಾರ ಸಂಜೆ ಪದಗ್ರಹಣ ಮಾಡಲಿದ್ದಾರೆ.
ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್ ಬಂದಿದ್ದಾರೆ. ಮೂಲತಃ ಉತ್ತರಾಂಚಲ್ ನ ಪಿತೋರ್ ಗಢ್ ನ ಪಂತ್ 1990ರ ಬ್ಯಾಚ್ ಅಧಿಕಾರಿ. ಯಾದಗಿರಿ, ಕಲಬುರಗಿಯಲ್ಲಿ ಪ್ರೊಬೆಷನರಿ ಎಎಸ್ ಪಿ ಯಾಗಿ ಕೆಲಸ ಶುರು ಮಾಡಿ ಶಿವಮೊಗ್ಗದ ಭದ್ರಾವತಿಯಲ್ಲಿ ಎಎಸ್ ಪಿಯಾಗಿ ಕೆಲಸ ಮಾಡಿದ್ದರು.
ನಂತರ ಶಿವಮೊಗ್ಗ ಹಾಗೂ ಮಂಗಳೂರಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸಿದ ಅನುಭವ ಪಂಥ್ ಅವರಿಗಿದೆ. ಕೇಂದ್ರ ಐಜಿಪಿಯಾಗಿ ಕಮಲ್ ಬಡ್ತಿ ನಂತರ ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹಾಗೂ ಆಂತರಿಕ ಭದ್ರತಾ ಇಲಾಖೆಯ ಎಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ದ್ವಿಚಕ್ರ ವಾಹನ ಸವಾರರಿಗೆ ಖಡಕ್ ಎಚ್ಚರಿಕೆ, ಹೆಲ್ಮೆಟ್ ಇಲ್ಲದಿದ್ದರೆ!
ಭಾಸ್ಕರ್ ರಾವ್ ಅವರ ಅವಧಿ ವರ್ಷ ಪೂರ್ಣಗೊಂಡಿರುವ ಕಾರಣ ಕಮಲ್ ಪಂಥ್ ನೇಮಕವಾಗಿದೆ. ನಿರ್ಗಮಿತ ಭಾಸ್ಕರ್ ರಾವ್ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಮಾಧ್ಯಮಕ್ಕೆ ಧನ್ಯವಾದ ತಿಳಿಸಿದ ನಿರ್ಗಮಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, 'ಎಲ್ಲಾ ಚಾನಲ್ ಹಾಗೂ ಪತ್ರಿಕಾ ವರದಿಗಾರರು, ಕ್ಯಾಮರಾ ಮ್ಯಾನ್ ಫೋಟೋ ಗ್ರಾಫರ್ ಗಳಿಗೆ ಧನ್ಯವಾದ' ನಿಮ್ಮೆಲ್ಲರ ಸಹಕಾರಕ್ಕೆ ನನ್ನ ಧನ್ಯವಾದ ಎಲ್ಲರಿಗೂ ದೇವರು ಒಳ್ಳೆದು ಮಾಡಲಿ ಎಂದು ಕೇಳಿಕೊಂಡಿದ್ದಾರೆ.
ಜಮ್ಮು ಕಾಶ್ಮೀರ ವಿಧಿ ರದ್ದು, ಸಿಎಎ ವಿರುದ್ಧ ಪ್ರತಿಭಟನೆ, ಕೊರೋನಾ ಸಮರ ಎಲ್ಲವನ್ನು ಭಾಸ್ಕರ್ ರಾವ್ ನಿಭಾಯಿಸಿದ್ದರು. ಸವಾಲಿನ ವರ್ಷದಲ್ಲಿ ಕೆಲಸ ಮಾಡಿದ್ದಾರೆ ಎಂದೇ ಹೇಳಬಹುದು.