ಬೆಂಗಳೂರು, [ಜ.08]: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ, ವಿವಿಧ ಕಾರ್ಮಿಕ ಸಂಘಟನೆಗಳು ಇಂದು [ಬುಧವಾರ] ಕರೆ ನೀಡಿದ್ದ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು

ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಂತೂ ಬಂದ್‌ ಬಿಸಿ ತಟ್ಟಲ್ಲೇ ಇಲ್ಲ. ಜನಜೀವನ ಯಥಾಸ್ಥಿತಿಯಲ್ಲಿದ್ರೆ. KSRTC, BMTC ಬಸ್ ಸಂಚಾರವೂ ಎಂದಿನಂತೆ ಇತ್ತು. ಇನ್ನು, ವ್ಯಾಪಾರ ವಹಿವಾಟುಗೂ ಯಾವುದೇ ತೊಂದರೆಯಾಗಿಲ್ಲ. ಶಾಲಾ, ಕಾಲೇಜುಗಳಿಗೆ ರಜೆ ಇರಲಿಲ್ಲ. SBI ಹೊರತುಪಡಿಸಿ ಇತರೆ ಬ್ಯಾಂಕ್ ಗಳು ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ರಿಂದ ಬ್ಯಾಂಕಿಂಗ್ ಸೇವೆಯಲ್ಲಿ ಮಾತ್ರ ಸ್ಪಲ್ಪ ಮಟ್ಟಿಗೆ ವ್ಯತ್ಯಯ ಕಂಡು ಬಂತು.

ಭಾರತ್ ಬಂದ್: ಸೇವೆಗೆ ಹಾಜರಾದ ನೌಕರರಿಗೆ ಗುಲಾಬಿ ಹೂವು..!

ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ
ಹೌದು...ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆ ಮೆರವಣಿಗೆಗೆ ಪೊಲೀಸರು ಅನುಮತಿ ಕೊಟ್ಟಿರಲಿಲ್ಲ. ಒಂದು ವೇಳೆ ಮಾಡಿದ್ರೆ ಕ್ರಮಕೖಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯಕ್ತ ಭಾಸ್ಕರ್ ರಾವ್ ಹೇಳಿದ್ದರು. ಅದರಂತೆ ಸಿಪಿಐಎಂ, ಸಿಪಿಐ, ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದವು.

ಪ್ರತಿಭಟನಾಕಾರರ ಗಲಾಟೆ..!
ಕಾರ್ಮಿಕ ನೀತಿ ವಿರೋಧಿಸಿ ಬಂದ್ ಎಂದಿದ್ದ ಆಯೋಜಕರು, ಭಾಷಣದ ವೇಳೆ CAA, NRC ಪ್ರಸ್ತಾಪಿಸಿದರು. ಇದ್ರಿಂದ ರೊಚ್ಚಿಗೆದ್ದ ಕಾರ್ಮಿಕರು, CAA, NRC ವಿಚಾರವಾಗಿ ಮಾತನಾಡಬೇಡಿ. ಕಾರ್ಮಿಕರ ವಿಚಾರವಾಗಿ ಮಾತಾಡಿ‌ ಎಂದು ಪಾಂಪ್ಲೆಂಟ್ ಹರಿದು ಆಕ್ರೋಶ ಹೊರಹಾಕಿರುವ ಪ್ರಸಂಗ ಫ್ರಿಡಂ ಪಾರ್ಕ್ ನಲ್ಲಿ ನಡೆಯಿತು. 

ಮತ್ತೊಂದೆಡೆ ವಾಟಾಳ್ ನಾಗರಾಜ್, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಕೂಡಲೇ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು ಅಷ್ಟೇ. ಇನ್ನುಳಿದಂತೆ ಯಾವುದೇ ಹೇಳಿಕೊಳ್ಳುವಷ್ಟು ಪ್ರತ್ರಿಭಟನೆ ನಡೆದಿಲ್ಲ. ಇನ್ನು ಬಂದ್ ಇದೆ ಎಂದು ಬೆಳಗ್ಗೆ ಬಸ್ ಪ್ರಯಾಣಿಕ ಸಂಖ್ಯೆ ಕಡಿಮೆಯಾಗಿತ್ತು. ಬಳಿಕ ಮಧ್ಯಾಹ್ನದ ಹೊತ್ತಿಗೆ ಎಂದಿನಂತೆ ರಸ್ತೆಗಳಲ್ಲೆ ಜನ ದಟ್ಟಣೆಯಿಮದ ಕೂಡಿದ್ದವು.

ಭಾರತ್ ಬಂದ್: ಕೋಲಾರದಲ್ಲಿ ಪ್ರತಿಭಟನಾಕಾರರ ಬಂಧನ

ಜಿಲ್ಲೆಗಳಲ್ಲಿ ಬಂದ್ ಬಿಸಿ ಹೇಗಿತ್ತು..? 
ರಾಜ್ಯದ 30 ಜಿಲ್ಲೆಗಳಲ್ಲೂ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಲಾರದಲ್ಲಿ ಭಾರತ್ ಬಂದ್ ಗೆ ಕಿಚ್ಚು ಪ್ರಾರಂಭದಲ್ಲಿ ಜೋರಾಗಿತ್ತು. 10 ಗಂಟೆ ನಂತರ ಬಂದ್ ಬಿಸಿ ತಣ್ಣಗಾಯ್ತು. ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿಪಿಐಎಂ ಕಾರ್ಯಕರ್ತರಿಂದ ವಾಹನ ತಡೆದು ಪ್ರತಿಭಟನೆ ನಡೆಸಿದ್ರು. 

ಮಂಡ್ಯದಲ್ಲಿ ಪೊಲೀಸರು, CITU ಕಾರ್ಯಕರ್ತರ ವಾಗ್ವಾದ ನಡೀತು. ಇತ್ತ ಹುಬ್ಬಳ್ಳಿಯಲ್ಲೂ ಮುಷ್ಕರಕ್ಕೆ ನೀರಸ ಪ್ರತಿಕ್ರಿಯ ವ್ಯಕ್ತವಾಗಿದೆ. ಹುಬ್ಬಳ್ಳಿ ತಹಶೀಲ್ದಾರ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮನವಿ ಸಲ್ಲಿಸಿದರು.

ಮಡಿಕೇರಿಯಲ್ಲಿ ಕಲ್ಲುತೂರಾಟ
ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರೈತ ಸಂಘ ಸೇರಿ ಹಲವು ಸಂಘಟನೆಗಳು ಚಿತ್ರದುರ್ಗದಲ್ಲಿ ಧರಣಿ ನಡೆಸಿದ್ವು. ಇತ್ತ ಮಡಿಕೇರಿಯಲ್ಲಿ ಕಿಡಿಗೇಡಿಗಳು ಸಾರಿಗೆ ಬಸ್ ಮೇಲೆ  ಕಲ್ಲುತೂರಾಟ ನಡೆಸಿದ್ದಾರೆ. ಮಂಗಳೂರಲ್ಲಿ ಪ್ರತಿಭಟನೆ ನಡೆಸಿದ ಎಡಪಕ್ಷಗಳು ಪ್ರಧಾನಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.

80 'ಅಮೆರಿಕನ್ ಭಯೋತ್ಪಾದಕರ' ಹತ್ಯೆ, ಬಂದ್ ಮಾಡಿ ಕಾರ್ಮಿಕರು ಕೇಳಿದರು ಭತ್ಯೆ: ಟಾಪ್ 10 ಸುದ್ದಿ!

ಇನ್ನು, ಮೈಸೂರು, ಚಾಮರಾಜನಗರ ಕಲಬುರಗಿ, ಯಾದಗಿರಿ, ಗದಗ, ಧಾರವಾಡ, ಬಾಗಲಕೋಟೆ, ವಿಜಯಪುರ, ಶಿವಮೊಗ್ಗ ದಾವಣಗೆರೆ  ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರತ್ ಬಂದ್ ಬಿಸಿ ಅಷ್ಟೇನು ಕಂಡುಬಂದಿಲ್ಲ. 

ಕೆಲವೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದರು.

 ಒಟ್ಟಾರೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರ ಕರ್ನಾಟಕದಲ್ಲಿ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು.