ಬೆಂಗಳೂರಿನ ಸುರಂಗ ರಸ್ತೆ ಯೋಜನೆಗೆ ಇಂಜಿನಿಯರ್‌ಗಳ ಸಂಸ್ಥೆ ಬೆಂಬಲ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದರು. ಆದರೆ, ಈ ವರದಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ಎಂ.ಲಕ್ಷ್ಮಣ್ ಕಾಂಗ್ರೆಸ್ ವಕ್ತಾರ ಎಂದು ವಕೀಲ ಗಿರೀಶ್‌ ಭಾರದ್ವಾಜ್‌ ಆರೋಪಿಸಿದ್ದಾರೆ.

ಬೆಂಗಳೂರು (ನ.20): ಭಾರೀ ವಿವಾದಕ್ಕೆ ಕಾರಣವಾಗಿರುವ ಬೆಂಗಳೂರಿನ ಸುರಂಗ ರಸ್ತೆ ವಿಚಾರದ ಬಗ್ಗೆ ಈಗಾಗಲೇ ಹಲವು ವಾದಗಳು ಕೇಳಿ ಬಂದಿವೆ. ದೇಶದ ಅತ್ಯುನ್ನತ ಸಂಸ್ಥೆಯಾಗಿರುವ ಹಾಗೂ ಬೆಂಗಳೂರಿನಲ್ಲಿ ನೆಲೆ ಹೊಂದಿರುವ ಭಾರತೀಯ ವಿಜ್ಞಾನ ಸಂಸ್ಥೆ, ರಾಜಧಾನಿಗೆ ಸುರಂಗ ರಸ್ತೆ ಯಾವುದೇ ಕಾರಣಕ್ಕೂ ಹೊಂದಿಕೆ ಆಗೋದಿಲ್ಲ. ಇದು ಬೆಂಗಳೂರಿನ ಟ್ರಾಫಿಕ್‌ಅನ್ನು ಒಂಚೂರು ಕಡಿಮೆ ಮಾಡೋದಿಲ್ಲ ಎಂದು ಈಗಾಗಲೇ ಹೇಳಿದೆ. ಆದರೆ, ಸರ್ಕಾರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಮಾತ್ರ ಶತಾಯಗತಾಯ ಇದನ್ನು ಮಾಡಲೇಬೇಕು ಎಂದು ಹಠ ತೊಟ್ಟಿದ್ದರೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್‌ ಬುಧವಾರ ಟ್ವೀಟ್‌ ಮಾಡಿ ಭಾರತದ ಇಂಜಿನಿಯರ್‌ಗಳ ಸಂಸ್ಥೆ ಬೆಂಗಳೂರಿನ ಸುರಂಗ ರಸ್ತೆಗೆ ಬೆಂಬಲ ಕೊಟ್ಟಿದೆ. ನಗರಕ್ಕೆ ಇದು ಸೂಕ್ತ ಎಂದು ಅಭಿಪ್ರಾಯ ನೀಡಿದೆ ಎನ್ನುವ ಪತ್ರಿಕಾ ಹೇಳಿಕೆಯನ್ನು ಪೋಸ್ಟ್‌ ಮಾಡಿದ್ದರು. ಆದರೆ, ಈ ರಿಪೋರ್ಟ್‌ ಕೊಟ್ಟಿದ್ದು ಕಾಂಗ್ರೆಸ್‌ ವಕ್ತಾರ ಎನ್ನುವ ಮಾಹಿತಿಯನ್ನು ಸೋಶಿಯಲ್‌ ಮೀಡಿಯಾ ಕ್ಷಣಮಾತ್ರದಲ್ಲಿ ಪತ್ತೆಹಚ್ಚಿದೆ. ವಕೀಲ ಗಿರೀಶ್‌ ಭಾರದ್ವಾಜ್‌ ಸಾಕ್ಷಿ ಸಮೇತ ಇದನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟ್ವೀಟ್‌ ಮಾಡಿ ಸಂಭ್ರಮಿಸಿದ್ದ ಡಿಕೆ ಶಿವಕುಮಾರ್‌

ದಿ ಇನ್ಸ್‌ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್‌ (ಇಂಡಿಯಾ) ಕರ್ನಾಟಕ ರಾಜ್ಯ ಕೇಂದ್ರದ ಗೌರವ ಕಾರ್ಯದರ್ಶಿ ಎಂ.ಲಕ್ಷ್ಮಣ್‌ ಹಾಗೂ ಚೇರ್ಮನ್‌ ಎಂ.ನಾಗರಾಜ್‌ ಅವರ ಸಹಿ ಇರುವ ಪತ್ರಿಕಾ ಹೇಳಿಕೆಯನ್ನು ಡಿಸಿಎಂ ಡಿಕೆ ಶಿವಕುಮಾರ್‌ ಹಂಚಿಕೊಂಡಿದ್ದರು. ಇದರೊಂದಿಗೆ ಡಿಸಿಎಂ, 'ಬೆಂಗಳೂರು ಅತ್ಯುತ್ತಮಕ್ಕೆ ಅರ್ಹವಾಗಿದೆ ಅನ್ನೋದನ್ನು ಇಂಜಿನಿಯರ್ಸ್‌ಗಳೂ ಒಪ್ಪುತ್ತಾರೆ!' ಎಂದು ಬರೆದಿದ್ದರು.

Scroll to load tweet…

'ನಮ್ಮ ಸುರಂಗ ರಸ್ತೆ ಯೋಜನೆಗೆ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಭಾರತ) ಸಂಪೂರ್ಣ ಮತ್ತು ನಿಸ್ಸಂದಿಗ್ಧ ಬೆಂಬಲವನ್ನು ನೀಡಿದ್ದು, ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಇದು ಅತ್ಯಂತ ಪ್ರಾಯೋಗಿಕ ದೀರ್ಘಕಾಲೀನ ಪರಿಹಾರವಾಗಿದೆ ಎಂದು ಕರೆದಿದೆ.

ಅವರ ಮೌಲ್ಯಮಾಪನವು' ನಗರಕ್ಕೆ ಆಧುನಿಕ, ಬಹು-ಪದರದ ಚಲನಶೀಲ ಮೂಲಸೌಕರ್ಯದ ಅಗತ್ಯವಿದೆ ಮತ್ತು ಸುರಂಗ ರಸ್ತೆಯು 2.5 ಮಿಲಿಯನ್‌ಗಿಂತಲೂ ಹೆಚ್ಚು ವಾಹನಗಳನ್ನು ಮೇಲ್ಮೈ ರಸ್ತೆಗಳಿಂದ ತೆಗೆದುಹಾಕಬಹುದು - ದೈನಂದಿನ ಪ್ರಯಾಣವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಅನುಮೋದನೆಯು ಬೆಂಗಳೂರು ವೇಗವಾದ, ಸ್ವಚ್ಛ ಮತ್ತು ಸುರಕ್ಷಿತ ಚಲನಶೀಲತೆಗೆ ಅರ್ಹವಾಗಿದೆ ಎಂಬ ಹಂಚಿಕೆಯ ತಜ್ಞರ ಒಮ್ಮತವನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಸರ್ಕಾರವು ಈ ಯೋಜನೆಯನ್ನು ಪಾರದರ್ಶಕತೆ, ತಾಂತ್ರಿಕ ಕಠಿಣತೆ ಮತ್ತು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ತಲುಪಿಸಲು ಬದ್ಧವಾಗಿದೆ. ಒಟ್ಟಾಗಿ, ಉತ್ತಮವಾಗಿ ಚಲಿಸುವ ಮತ್ತು ಉತ್ತಮವಾಗಿ ವಾಸಿಸುವ ನಗರವನ್ನು ನಿರ್ಮಿಸೋಣ' ಎಂದು ಬರೆದಿದ್ದರು.

ವಕೀಲ ಗಿರೀಶ್‌ ಭಾರದ್ವಾಜ್‌ ಹೇಳಿದ್ದೇನು?

ಆದರೆ, ಡಿಸಿಎಂಗೆ ವರದಿ ಕೊಟ್ಟಿರುವ ವ್ಯಕ್ತಿ ಬೇರೆ ಯಾರೂ ಅಲ್ಲ. ಇಂಜಿನಿಯರ್‌ ಎನಿಸಿಕೊಂಡಿರುವ ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌. ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಯದುವೀರ್‌ ಒಡೆಯರ್‌ ಎದುರು ಸೋಲು ಕಂಡಿದ್ದರು. ಇವರು ನೀಡಿದ ರಿಪೋರ್ಟ್‌ಅನ್ನೇ ಡಿಸಿಎಂ ಪೋಸ್ಟ್‌ ಮಾಡಿದ್ದರು.

ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಡಿಸಿಎಂಗೆ ಜನರನ್ನು ಬಕರಾ ಮಾಡೋದು ಬಿಡಿ ಎಂದು ಟೀಕಿಸಿದ್ದಾರೆ. 'ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು "ತಜ್ಞರು" ಎಂದು ಬಿಂಬಿಸುವ ಮೂಲಕ ಬೆಂಗಳೂರಿನ ಜನರನ್ನು ದಾರಿ ತಪ್ಪಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದ್ದಾರೆ. ಐಇಐ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಅವರು ಈಗ ಸುರಂಗ ಯೋಜನೆಯು ಕನಿಷ್ಠ ಹಾನಿಯನ್ನು ಮಾತ್ರ ಉಂಟುಮಾಡುತ್ತದೆ ಎಂದು ಹೇಳುವ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ತಜ್ಞರೆಂದು ಕರೆಯಲ್ಪಡುವವರ ವರದಿಯನ್ನು ಓದಿ!' ಎಂದು ವಕೀಲ ಗಿರೀಶ್‌ ಭಾರದ್ವಾಜ್‌ ಟ್ವೀಟ್‌ ಮಾಡಿದ್ದಾರೆ.

'ನಮ್ಮ ಡಿಸಿಎಂ ಕಾಂಗ್ರೆಸ್‌ ವಕ್ತಾರ ಇಂಜಿನಿಯರ್‌ ಬೆಂಬಲ ನೀಡಿದ್ದಾರೆ ಎಂದು ತಿಳಿಸೋದನ್ನು ಮರೆತು ಹೋಗಿದ್ದಾರೆ' ಎಂದು ರವಿ ಕೀರ್ತಿಗೌಡ ಎನ್ನುವವರು ಟ್ವೀಟ್‌ ಮಾಡಿದ್ದಾರೆ. 'ಬಂಡೆ ಸಾಹೇಬ್ರು ಕಾಂಗ್ರೆಸ್ ವಕ್ತಾರನ ವರದಿ ಇಡ್ಕೊಂಡು ಬಂದು ಜನರನ್ನು ದಡ್ಡರು ಮಾಡಲು ಹೊರಟಿದ್ದಾರೆ..'ಎಂದು ಮತ್ತೊಬ್ಬರು ಬರೆದಿದ್ದಾರೆ.