ಬೆಂಗಳೂರಿನ ಡೈರಿ ಸರ್ಕಲ್ ಬಳಿ ನಡೆದ 7 ಕೋಟಿಗೂ ಅಧಿಕ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ತಿರುಪತಿಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರೋಡೆಗೆ ಬಳಸಿದ್ದ ಇನೋವಾ ಕಾರು ಕೂಡ ಪತ್ತೆಯಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು: ಬೆಂಗಳೂರಿನ ಡೈರಿ ಸರ್ಕಲ್ ಬಳಿ ಏಳು ಕೋಟಿ ಕ್ಯಾಶ್ ರಾಬರಿ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆಯಾಗಿದೆ. ಬೆಂಗಳೂರಿನಲ್ಲಿ ನಡೆದ 7 ಕೋಟಿ 11 ಲಕ್ಷ ದರೋಡೆ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ತಿರುಪತಿಯಲ್ಲಿ ಸಿಸಿಬಿ ವಶಕ್ಕೆ ಪಡೆದಿರುವ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಮಾಹಿತಿ ಲಭ್ಯವಾಗಿದೆ. ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಇಬ್ಬರಿಂದ ಸಿಸಿಬಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ. ಮತ್ತಷ್ಟು ಮಾಹಿತಿಯೊಂದಿಗೆ ಸಿಸಿಬಿಯಿಂದ ಉಳಿದವರಿಗಾಗಿ ಹುಡುಕಾಟ ನಡೆಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನೋವಾ ಕಾರು ಕೂಡ ಪತ್ತೆ

ಇನ್ನು ರಾಬ್ರಿಗೆ ಬಳಸಿದ್ದ ಇನೋವಾ ಕಾರು ಕೂಡ ಪತ್ತೆಯಾಗಿದೆ. ತಿರುಪತಿಯಲ್ಲಿ ಪತ್ತೆಯಾದ ಇನೋವಾ ಕಾರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ಇನೋವಾ ಕಾರು ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ತಿರುಪತಿ ಪೊಲೀಸರ ಜೊತೆ ದಕ್ಷಿಣ ವಿಭಾಗ ಪೊಲೀಸರಿಂದ ಶೋಧ ನಡೆಯುತ್ತಿದೆ. ಹೋಟೆಲ್, ಲಾಡ್ಜ್, ದೇವಸ್ಥಾನ ‌ಬಳಿ ಮಪ್ತಿಯಲ್ಲಿ ಶೋಧ ನಡೆಸಲಾಗುತ್ತಿದೆ. ಹಣವನ್ನು ಬೇರೆ ಕಡೆ ಆರೋಪಿಗಳು ಡೈವರ್ಟ್ ಮಾಡಿದ್ದಾರೆನ್ನಲಾಗುತ್ತಿದೆ. ಹಣ ಬೇರೆ ಕಡೆ ಎಸ್ಕೇಪ್ ಮಾಡಿಸಿ ಆರೋಪಿಗಳು ತಿರುಪತಿಯಲ್ಲಿ ಇದ್ದಾರೆ. ಹೀಗಾಗಿ ಪ್ರತಿ ಹೊಟೇಲ್, ಲಾಡ್ಜ್ ಹೋಮ್ ಸ್ಟೇ ಗಳನ್ನ ಪೊಲೀಸರು ತಿರುಪತಿ ಪೊಲೀಸರ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ