ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ 7 ತಿಂಗಳ ಬಾಕಿ ಸಂಬಳ ಕೇಳಿದ ವಾಟರ್ ಟ್ಯಾಂಕ್ ವಾಹನ ಚಾಲಕ ಮೋಹನ್ ಮೇಲೆ ಮಾಲೀಕ ಶ್ರೀನಿವಾಸ ಮತ್ತು ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 2 ಲಕ್ಷ ರೂ. ಬಾಕಿ ಹಣ ಕೇಳಿದ್ದಕ್ಕೆ ಕಿಡ್ನಾಪ್ ಮಾಡಿ, ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಲಾಗಿದೆ.

ಬೆಂಗಳೂರು (ನ.15): ದುಡಿದವನ ಮೈಮೇಲಿನ ಬೆವರು ಆರುವ ಮುನ್ನವೇ ಅವನಿಗೆ ಕೂಲಿ ಸಿಗಬೇಕು ಎಂಬ ಮಾತಿದೆ. ಆದರೆ ತಿಂಗಳ ಕಾಲ ಕಷ್ಟಪಟ್ಟು ದುಡಿದು ಸಂಬಳ ಕೇಳುವ ಕಾರ್ಮಿಕರ ಮೇಲೆ ಹಲ್ಲೆ ನಡೆಸುವಂತಹ ಹೇಯ, ಅಮಾನವೀಯ ಕೃತ್ಯಗಳು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇವೆ. ಇದೀಗ ಇಂತಹದ್ದೇ ಘಟನೆ ಬೆಂಗಳೂರಿನ ಜೀವನಬಿಮಾನಗರದಲ್ಲಿ ನಡೆದಿದೆ.

ತಿಂಗಳ ಸಂಬಳ ಕೇಳಿದ್ದಕ್ಕೆ ಟ್ರ್ಯಾಕ್ಟರ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ!

ಸುಮಾರು ಎರಡು ವರ್ಷಗಳಿಂದ ವಾಟರ್ ಟ್ಯಾಂಕ್ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಡಪಾಯಿ ಮೋಹನ್. ಆದರೆ ಕಳೆದ 7 ತಿಂಗಳಿಂದ ಸಂಬಳ ನೀಡದೆ ಸತಾಯಿಸುತ್ತಿದ್ದ ವಾಹನದ ಮಾಲೀಕ ಶ್ರೀನಿವಾಸ್. ಜೀವನ ಕಷ್ಟವಾಗಿದೆ ಸಂಬಳ ನೀಡುವಂತೆ ಪದೇಪದೆ ಕೇಳಿದರೂ ಮುಂದಿನ ತಿಂಗಳು ಕೊಡ್ತೇನೆ ಅಂತಾ ಹೇಳ್ತಾ ಕಳೆದ ಏಳು ತಿಂಗಳಿಂದ ಮಾಲೀಕ ಶ್ರೀನಿವಾಸ ಸಂಬಳವನ್ನೇ ಕೊಡದೆ ದುಡಿಸಿಕೊಂಡಿದ್ದಾನೆ. ಆದರೆ ಸಂಬಳ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿ ಅತ್ತ ಕೆಲಸ ಬಿಡಲು ಆಗದೆ ಮತ್ತೆ ಶ್ರೀನಿವಾಸ ಬಳಿ ಸಂಬಳಕ್ಕೆ ಅಂಗಲಾಚಿಸಿದ್ದಾನೆ. ಇಷ್ಟಕ್ಕೆ ಕೋಪಗೊಂಡು ಮಾಲೀಕ ಶ್ರೀನಿವಾಸ ಇತರೆ ನಾಲ್ವರು ಸೇರಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಚಾಲಕ ಆರೋಪಿಸಿದ್ದಾರೆ.

ಎರಡು ಲಕ್ಷ ರೂಪಾಯಿ ಸಂಬಳ ಬಾಕಿ!

ಹಲ್ಲೆಗೊಳಗಾದ ಮೋಹನ್ ಹೇಳುವ ಪ್ರಕಾರ, ವಾಟರ್ ಟ್ಯಾಂಕ್ ಚಾಲಕನಾಗಿ ದುಡಿದಿರುವ ಮೋಹನ್‌ಗೆ ಸಂಬಳ ಕೊಡದೆ ಮಾಲೀಕ ಶ್ರೀನಿವಾಸ ಬರೋಬ್ಬರಿ 2ಲಕ್ಷ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದ್ದನಂತೆ. ಇದೇ ಕಾರಣಕ್ಕೆ ಶ್ರೀನಿವಾಸ ಜೊತೆಗೆ ಮೋಹನ್ ಮಾತಿನ ಚಕಮಕಿ ನಡೆದಿದೆ. ಇದೇ ದ್ವೇಷಕ್ಕೆ ಕಳೆದ ವಾರ ತನ್ನ ಸಹಚರರನ್ನು ಕರೆದುಕೊಂಡು ಮೋಹನ್ ಮನೆ ಬಳಿ ಹೋಗಿ ಕಬ್ಬಿಣದ ರಾಡುಗಳಿಂದ ಮೋಹನ್ ಮೇಲೆ ನಾಲ್ವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಮೋಹನ್‌ನನ್ನು ಕಾರಿನಲ್ಲಿ ಎಳೆದೊಯ್ದು ಕಿಡ್ನಾಪ್ ಮಾಡಿ ಮತ್ತೊಂದು ಜಾಗದಲ್ಲೂ ಹಲ್ಲೆ ನಡೆಸಿದ್ದಾರೆ. ಯಾವ ಮಟ್ಟಿಗೆ ಹೊಡೆದಿದ್ದಾರೆಂದರೆ ಮೋಹನ್ ಮಿಸುಕಾಡದಿದ್ದಾಗ ಮೋಹನ್ ಸತ್ತೇ ಹೋಗಿದ್ದಾನೆಂದು ತಿಳಿದು ಶ್ರೀನಿವಾಸ ಗ್ಯಾಂಗ್ ಆ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಆದರೆ ಬಳಿಕ ಎಚ್ಚರಗೊಂಡಿರುವ ಮೋಹನ್ ತೀವ್ರ ರಕ್ತಸ್ರಾವ ನೋವಿನೊಂದಿಗೆ ಹೇಗೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಜೀವನಬಿಮಾನಗರ ಪೊಲೀಸ್ ಠಾಣೆಯಲ್ಲಿ ದೂರು

ತೀವ್ರ ಹಲ್ಲೆಗೊಳಗಾದ ಮೋಹನ್ ಚಿಕಿತ್ಸೆ ಪಡೆದ ಬಳಿಕ ಈ ಘಟನೆ ಸಂಬಂಧ ಜೆಬಿ ನಗರ ಠಾಣೆಯಲ್ಲಿ ಆರೋಪಿ ಶ್ರೀನಿವಾಸ ಮತ್ತವನ ಸಹಚರರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಶ್ರೀನಿವಾಸ ಸೇರಿ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ನನಗೆ ಏಳು ತಿಂಗಳ ಸಂಬಳ ಕೊಡಬೇಕಿತ್ತು:

ಹಲ್ಲೆಗೊಳಗಾದ ಮೋಹನ್ ಹೇಳುವುದು ಹೀಗೆ; ಶ್ರೀನಿವಾಸ್ ಅವರಿಂದ ನನಗೆ ಏಳು ತಿಂಗಳ ಸಂಬಳ ಬರಬೇಕಿತ್ತು. ನಾಳೆ, ಮುಂದಿನ ತಿಂಗಳು ಎಂದು ಹೀಗೆ ಸತಾಯಿಸುತ್ತಿದ್ದ. ಹೀಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿ ಅಲ್ಲಿ ಕೆಲಸ ಬಿಟ್ಟಿದ್ದೆ. ಒಂದೂವರೆ ತಿಂಗಳಾಗಿತ್ತು. ಆದರೆ ಬಾಕಿ ಏಳು ತಿಂಗಳ ಸಂಬಳ ಕೊಡುವಂತೆ ಶ್ರೀನಿವಾಸರನ್ನು ಕೇಳಿದಂತೆ. ಇದೇ ವಿಚಾರವಾಗಿ ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆ. ಪೊಲೀಸ್ ಠಾಣೆಗೆ ಕರೆದ್ರು ಅಂತ ಹೋಗೋಕೆ ಹೊರಟಿದ್ದೆ. ಇದೇ ವೇಳೆ ಮೂರು ನಾಲ್ಕು ಜನರನ್ನು ಸೇರಿಸಿಕೊಂಡು ಬಂದ ಶ್ರೀನಿವಾಸ ಕಬ್ಬಿಣದ ರಾಡ್‌ನಿಂದ ಹಿಂದಿನಿಂದ ತಲೆಗೆ ಹೊಡೆದ್ರು. ಜಗಳದಲ್ಲಿ ಮುಗಿಸಬಹುದು ಅಂದ್ಕೊಂಡೆ ಆದರೆ ಎತ್ತಿ ಕಾರಿಗೆ ಹಾಕಿಕೊಂಡು ಹೋದ್ರು. ಬಳಿಕ ಕಾರನ್ನು ಯಾರೋ ಫಾಲೋ ಮಾಡಿದ್ರು ಅಂತಾ ಕಾರಿನ ಡಿಕ್ಕಿಯೊಳಗೆ ಹಾಕಿದ್ರು.

ಗ್ರೇಟ್ ಎಸ್ಕೇಪ್

ಅಲ್ಲಿಂದ ರೈಲ್ವೆ ಗೇಟ್ ಒಂದರ ಬಳಿ ಡಿಕ್ಕಿಯೊಳಗಿಂದ ಎಸೆದ್ರು ಅಷ್ಟೊತ್ತಿಗಾಗಲೆ ತೀವ್ರ ಹಲ್ಲೆ ಮಾಡಿದ್ರಿಂದ ನಾನು ಪ್ರಜ್ಞೆ ತಪ್ಪಿದ್ದೆ.. ಶ್ರೀನಿವಾಸ ಗ್ಯಾಂಗ್ ಏನೋ ಕುಡಿಯುತ್ತಾ ಕಾರಿನ ಮುಂಭಾಗದಲ್ಲಿ ಟ್ರೈನ್‌ ಬರೋದನ್ನು ಕಾಯ್ತಿದ್ರು. ಆ ಸಮಯದಲ್ಲೇ ನನಗೆ ಎಚ್ಚರವಾಗಿ ಸರಿಯಾದ ಸಮಯಕ್ಕೆ ಅಲ್ಲಿಂದ ಎಸ್ಕೇಪ್ ಆದೆ. ಅವರು ಹಲ್ಲೆ ಬಳಿಕ ರೈಲು ಹಳಿಗೆ ಎಸೆಯಲು ಸಂಚು ನಡೆಸಿದ್ದರು. ಅದೃಷ್ಟವಶಾತ್ ನನಗೆ ಸರಿಯಾದ ಸಮಯಕ್ಕೆ ಎಚ್ಚರವಾಗಿ ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದರಿಂದ ಈಗ ಶ್ರೀನಿವಾಸ ಸೇರಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ನಡೆದ ಭಯಾನಕ ಘಟನೆಯನ್ನ ಮೋಹನ್ ವಿವರಿಸಿದ್ದಾರೆ.

ಈ ಘಟನೆ ನೋಡಿದಾಗ ಶಾಂತ, ಆಹ್ಲಾದಕಾರ ವಾತಾವರಣವಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿಗಳ ಲೋಕವೊಂದು ಹೇಗೆ ಬೆಳೆಯುತ್ತಿದೆ ಎಂಬುದು ಅರಿವಾಗಿ ಆತಂಕ ಮೂಡುತ್ತದೆ. ಮೋಹನ್ ಕೇಳಿದ್ದು ಸಾಲವಲ್ಲ. ವಾಟರ್ ಟ್ಯಾಂಕರ್ ಡ್ರೈವರ್ ಗೆ ಎಷ್ಟು ಸಂಬಳ ಇದ್ದಿರಬಹುದು? ಬರುವ ನಾಲ್ಕಂಕಿ ಸಂಬಳದಲ್ಲಿ ಮನೆ ಬಾಡಿಗೆ, ಊಟ, ಕುಟುಂಬ ನಿರ್ವಹಣೆಯೇ ಕಷ್ಟ. ಹೀಗಿರುವಾಗ ಏಳು ತಿಂಗಳು ಸಂಬಳ ಪಡೆಯದೆ ಚಾಲಕನಾಗಿ ದುಡಿದಿರುವ ಮೋಹನ್ ಅದೆಷ್ಟು ಆರ್ಥಿಕ ಸಂಕಷ್ಟ ಎದುರಿಸಿರಬಹುದು. ಸಾಲದಕ್ಕೆ ಸಂಬಳ ಕೇಳಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದಾನೆ. ತಕ್ಷಣಕ್ಕೆ ಏಳು ತಿಂಗಳ ಸಂಬಳ ಕೊಟ್ಟರೂ ಅದೆಲ್ಲ ಆರೋಗ್ಯ ಸುಧಾರಿಸಿಕೊಳ್ಳಲು ಸಾಕಾಗದು. ಇನ್ನು ಮುಂದಿನ ಕೆಲಸಕ್ಕೆ ಅವನನ್ನು ಸಿದ್ಧಗೊಳಿಸಿಕೊಳ್ಳಲು ಸಮಯ ಬೇಕು. ಚಾಲಕ ವೃತ್ತಿಯನ್ನೇ ನಂಬಿ ಬದುಕುವ ಇಂಥ ಜನರ ಹಲ್ಲೆ ಮಾಡುವ ಮಾಲೀಕನ ಹಿನ್ನೆಲೆ ಅದೆಂಥದ್ದಿರಬೇಕು. ಒಟ್ಟಾರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಕಾರ್ಮಿಕನ ಎಲ್ಲ ವೈದ್ಯಕೀಯ ಖರ್ಚುಗಳು ಹಲ್ಲೆ ಮಾಡಿದ ಗ್ಯಾಂಗ್‌ನಿಂದಲೇ ಭರಿಸುವಂತಾಗಬೇಕು.