ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಯ ನಡುವೆ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬುದು ತಮ್ಮ ಆಶಯವಾದರೂ, ಈ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ, ಸೀಟು ಹಂಚಿಕೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಿಎಂ ಬದಲಾವಣೆ ಆಗಲೇಬೇಕೆಂದು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ನವೆಂಬರ್ ಕ್ರಾಂತಿಗೆ ಮುನ್ನಡಿ ಬರೆಯಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ನೀಡಿ ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ. ಸಿಎಂ ಸ್ಥಾನ ಖಾಲಿಯಾದಾಗ ಮಾತನಾಡೋಣ.ಜನವರಿವರೆಗೂ ಮಾತನಾಡಲ್ಲ, ಹೈಕಮಾಂಡ್ ಹೇಳಬೇಕಲ್ಲ. ನಾನು ದೆಹಲಿಗೆ ಹೋಗ್ತಾ ಇಲ್ಲ. ಅಧಿಕಾರ ಹಂಚಿಕೆ ಒಪ್ಪಂದ ನಮ್ಮುಂದೆ ಆಗಿಲ್ಲ. ಪಕ್ಷದ ಸಭೆಗಳಲ್ಲೂ ಒಪ್ಪಂದ ಆಗಿಲ್ಲ. 2-3 ಅನ್ನೋ ಒಪ್ಪಂದ ಆಗಿದ್ರೆ ಅದು ಹೈಕಮಾಂಡ್ ಸಮ್ಮುಖದಲ್ಲಿ ಆಗಿರುತ್ತದೆ. ಅದನ್ನ ಹೈಕಮಾಂಡ್ ಹೇಳಬೇಕು ಎಂದಿದ್ದಾರೆ.
ಡಿಕೆಶಿಗೆ ಎರಡೆರಡು ಸ್ಥಾನ ಇದೆ
ಡಿಕೆಶಿವಕುಮಾರ್ ಗೆ ಹೈಕಮಾಂಡ್ ಬೆಲೆ ಕೊಟ್ಟಿದೆ. ಅದ್ಕೆ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಜೊತೆಗೆ ಡಿಸಿಎಂ ಆಗಿ ಮಾಡಿದೆ. ಡಿಕೆಶಿವಕುಮಾರ್ ಸಿಎಂ ಆಗಬೇಕು ಅನ್ನೋ ಆಸೆ ನನಗಂತೂ ಇದೆ. ಅದಕ್ಕೆ ಅಂತಾ ಒಂದು ಸಂದರ್ಭ ಬರುತ್ತೆ. ಜನವರಿಗೆ ಮಾತನಾಡ್ತೀನಿ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ನನ್ನದೂ ಒಂದೇ ಅಜೆಂಡಾ. ಅದನ್ನ ಜನವರಿಗೆ ಮಾತನಾಡ್ತೀನಿ. ನನ್ನ ನಿಲುವು ಅಚಲ. ನಾನು ಜನವರಿಗೆ ಮಾತನಾಡುವೆ ಎಂದು ಒತ್ತಿ ಹೇಳಿದ್ದಾರೆ.
ಡಿಕೆಶಿಗೆ 136 ಜನರ ಬೆಂಬಲ ಇದೆ
ಇನ್ನು ಶಾಸಕರು ದೆಹಲಿ ಹೋಗಿರುವ ಬಗ್ಗೆ ಮಾಹಿತಿ ಇಲ್ಲ. ಡಿಕೆಶಿಗೆ 136 ಜನರ ಬೆಂಬಲ ಇದೆ. ಹೈಕಮಾಂಡ್ ಹೇಳಿದ್ರೆ ಎಲ್ಲರ ಬೆಂಬಲ ಇರುತ್ತೆ. ಹೈಕಮಾಂಡ್ ನಾಳೆಯೇ ಹೇಳಿದ್ರು ಹೇಳಬಹುದು. ಹೈಕಮಾಂಡ್ ನಿರ್ಧಾರಕ್ಕ ನಾವೂ ಬದ್ದವಾಗಿದ್ದೇವೆ. ಕ್ರಾಂತಿಯೂ ಇಲ್ಲ. ಭ್ರಾಂತಿಯೂ ಇಲ್ಲ. ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆಯುತ್ತೇನೆ ಅಂದಿದ್ದಾರೆ. ಯಾರೇ ರಾಜಕಾರಣಿ ಆದ್ರು ಕೊಟ್ಟ ಮಾತಿನಂತೆ ನಡೆಯಬೇಕು. ಐದು ಗ್ಯಾರಂಟಿಗಳನ್ನ ಕೊಡ್ತೀವಿ ಅಂತಾ ಮಾತು ಕೊಟ್ಟಿದ್ವೀ. ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು ಯಾರಾದ್ರು ಇದ್ರೆ ಅದು ಸಿದ್ದರಾಮಯ್ಯ ಮಾತ್ರ. ಹಿಂದೆ ಕೊಟ್ಟ ಎಲ್ಲ ಭರವಸೆಗಳನ್ನು ಸಿಎಂ ಈಡೇರಿಸಿದ್ದಾರೆ. ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ ಎಂದರು.
ಡಿಕೆಶಿ ಸಿಎಂ ಆಗಬೇಕು
ಡಿಕೆಶಿವಕುಮಾರ್ ಸಿಎಂ ಆಗಬೇಕು. ಯಾಕಂದ್ರೆ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿ, ಐದೂವರೆ ವರ್ಷ ಅಧ್ಯಕ್ಷರಾಗಿ ಪಕ್ಷ ಸೇವೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಶೂನ್ಯ ಇದ್ದ ಪಕ್ಷವನ್ನ 9 ಸ್ಥಾನಗಳ ಗೆಲುವಿನವರೆಗೂ ಡಿಕೆಶಿ ತಗೆದುಕೊಂಡು ಹೋಗಿದ್ರು. ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದಾರೆ. ಡಿಕೆಶಿವಕುಮಾರ್ ಅವರ ಶಕ್ತಿ ಸರ್ಕಾರದಲ್ಲಿ ಉಪಯೋಗ ಆಗಬೇಕು. ಆಗ ಇನ್ನೂ ಅಭಿವೃದ್ಧಿ ಚೆನ್ನಾಗಿ ಆಗಬಹುದು. ಇದು ಎಲ್ಲ ಶಾಸಕರ ಅಭಿಪ್ರಾಯ. ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತನೂ ಒಂದೇ. ಪಕ್ಷದ ಅಧ್ಯಕ್ಷನೂ ಒಂದೇ. ಸಿದ್ದರಾಮಯ್ಯ ಮಾತು ಕೊಟ್ಟಿದ್ರೆ ನಡೆಸಿಕೊಡ್ತಾರೆ. ಡಿಕೆಶಿವಕುಮಾರ್ ಅವರು ಲೋಕಸಭಾ ಚುನಾವಣಾ ಬಂದಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲು ಮುಂದಾಗಿದ್ರು. ಆದ್ರೆ ಆಗ ರಾಹುಲ್ ಗಾಂಧಿ ಅವರೇ ಅವರನ್ನ ಮುಂದುವರಿಸಿದ್ರು. ಈಗ 6 ವರ್ಷ ಆಗ್ತಾ ಬಂದಿದೆ. ಹೀಗಾಗಿ ಅನಿವಾರ್ಯವಾಗಿ ತ್ಯಾಗದ ಮಾತು ಆಡಿದ್ದಾರೆ. ಬದಲಾವಣೆ ಸಂದರ್ಭ ಬಂದ್ರೆ ಆಗಲಿ ಅಂತಾ ಡಿಕೆಶಿ ಹೇಳಿದ್ದಾರೆ ಎಂದು ಶಿವಗಂಗಾ ಬಸವರಾಜ್ ಅಭಿಪ್ರಾಯಪಟ್ಟರು.


