ಬೆಂಗಳೂರು ಏಷ್ಯಾದ ಅತೀ ಹೆಚ್ಚು ಟ್ರಾಫಿಕ್ ದಟ್ಟಣೆ ಸಿಟಿ, ಎಷ್ಟು ಗಂಟೆ ರಸ್ತೆಯಲ್ಲಿ ಕಳೆಯುತ್ತೀರಿ ಗೊತ್ತಾ?
ಟ್ರಾಫಿಕ್ ಸಮೀಕ್ಷಾ ವರದಿ ಪ್ರಕಟಗೊಂಡಿದೆ. ಏಷ್ಯಾದಲ್ಲಿ ಅತೀ ಹೆಚ್ಚು ಟ್ರಾಫಿಕ್ ದಟ್ಟಣೆ ನಗರ ಅನ್ನೋ ಕುಖ್ಯಾತಿಗೆ ಬೆಂಗಳೂರು ಗುರಿಯಾಗಿದೆ. ಇದೇ ಸಮೀಕ್ಷೆ ಬೆಂಗಳೂರಿಗರು ಈ ಟ್ರಾಫಿಕ್‌ನಲ್ಲಿ ಹೆಚ್ಚುವರಿಯಾಗಿ ಎಷ್ಟು ಗಂಟೆ ಕಳೆಯುತ್ತಾರೆ ಅನ್ನೋದು ಬಹಿರಂಗಪಡಿಸಿದೆ.
ಬೆಂಗಳೂರು(ಜ.03) ಸಿಲಿಕಾನ್ ಸಿಟಿ, ಉದ್ಯಾನ ನಗರ ಸೇರಿದಂತೆ ಬೆಂಗಳೂರು ಹಿರಿಮೆಗೆ ಹಲವು ಹೆಸರುಗಳಿವೆ. ಇದರ ಜೊತೆಗೆ ಟ್ರಾಫಿಕ್ ಸಿಟಿ ಅನ್ನೋ ಹೆಸರು ಸೇರಿಕೊಂಡಿದೆ. ಇದೀಗ ಈ ಹೆಸರು ಖಚಿತಗೊಂಡಿದೆ. ಕಾರಣ ಹಲವು ದೇಶದಳ ಪ್ರಮುಖ ನಗರಗಳ ಟ್ರಾಫಿಕನ್ನು ಟಾಮ್ ಟಾಮ್ ಟ್ರಾಫಿಕ್ಸ್ ಇಂಡೆಕ್ಸ್ ಸಮೀಕ್ಷೆ ನಡೆಸಿದೆ. ಇದೀಗ ವರದಿ ಪ್ರಕಟಿಸಿದೆ. ಈ ವರದಿ ಪ್ರಕಾರ ಬೆಂಗಳೂರು ಏಷ್ಯಾದಲ್ಲೇ ಅತೀ ಹೆಚ್ಚು ಟ್ರಾಫಿಕ್ ದಟ್ಟಣೆ ನಗರ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ. ವಿಶೇಷ ಅಂದರೆ ಇದೇ ಸಮೀಕ್ಷೆ ಬೆಂಗಳೂರಿಗರು ವರ್ಷದಲ್ಲಿ ಹೆಚ್ಚುವರಿಯಾಗಿ 132 ಗಂಟೆ ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ ಎಂದಿದೆ. ಈ ಕುರಿತು ಹಲವು ರೋಚಕ ಮಾಹಿತಿಗಳನ್ನು ಟಾಮ್ ಟಾಮ್ ಟ್ರಾಫಿಕ್ಸ್ ಇಂಡೆಕ್ಸ್ ನೀಡಿದೆ.
ಬೆಂಗಳೂರಿಗರಿಗೆ ಮಾತ್ರವಲ್ಲ ವಿಶ್ವದಲ್ಲೇ ಸಿಲಿಕಾನ್ ಸಿಟಿ ಟ್ರಾಫಿಕ್ ಸಮಸ್ಯೆ ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಸಮೀಕ್ಷೆ ಮುದ್ರೆಯೊಂದು ಬಿದ್ದಿದೆ. ಬೆಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ಆದರೆ ಇಲ್ಲಿನ ಮೂಲಸೌಕರ್ಯ ಸಾಲುತ್ತಿಲ್ಲ. ಊಹೆಗೂ ಮೀರಿದ ರೀತಿಯಲ್ಲಿ ಬೆಂಗಳೂರು ಬೆಳೆಯುತ್ತಿದೆ.ಪ್ರತಿ ದಿನ ಲಕ್ಷಾಂತರ ಮಂದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ವಾಹನ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಬೆಂಗಳೂರು: ಟ್ರಾಫಿಕ್ ತಪ್ಪಿಸಲು ಸಿಗ್ನಲ್ ಫ್ರೀ ಏರ್ಪೋರ್ಟ್ ರಸ್ತೆಗೆ ಯೋಜನೆ
ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿ ಪ್ರಕಾರ ಬೆಂಗಳೂರಿನಲ್ಲಿ ಒಬ್ಬ 10 ಕಿಲೋಮೀಟರ್ ಪ್ರಯಾಣಿಸಲು ಸರಾಸರಿ 28 ನಿಮಿಷ 10 ಸೆಕೆಂಡ್ ತೆಗೆದುಕೊಳ್ಳುತ್ತಾನೆ. ಇದು 2023ರಲ್ಲಿ ನಡೆಸಿದ ಅಧ್ಯಯನ ವರದಿ. ಎಲ್ಲಾ ಅಂಕಿ ಅಂಶಗಳನ್ನು ಲೆಕ್ಕ ಹಾಕಿ 2024ರಲ್ಲಿ ಈ ವರದಿ ಪ್ರಕಟಗೊಂಡಿದೆ. ಆದರೆ ಸದ್ಯ ಬೆಂಗಳೂರಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸದ್ಯ 30 ರಿಂದ 45 ನಿಮಿಷ 10 ಕಿಲೋಮೀಟರ್‌ಗೆ ಕನಿಷ್ಠ ಸಮಯವಾಗಿದೆ. 10 ಕಿ.ಮಿ ಪ್ರಯಾಣಕ್ಕೆ 28 ನಿಮಿಷ 10 ಸೆಕೆಂಡ್ ಲೆಕ್ಕಾಚಾರ ಕೇವಲ ಒಂದು ಹೊತ್ತಿನ ಪ್ರಯಾಣದ ಲೆಕ್ಕಾಚಾರವಾಗಿದೆ. ಇದು ಒಂದು ದಿನದ ಬೆಂಗಳೂರಿನ ಟ್ರಾಫಿಕ್ ಲೆಕ್ಕಾಚಾರವಲ್ಲ.
ಏಷ್ಯಾದಲ್ಲಿ ಗರಿಷ್ಠ ಟ್ರಾಫಿಕ್ ನಗರ ಬೆಂಗಳೂರು ಆಗಿದ್ದರೆ, 2ನೇ ಸ್ಥಾನವನ್ನು ಭಾರತದ ಮತ್ತೊಂದು ನಗರ ಪುಣೆ ಹೆಗಲೇರಿಸಿದೆ. ಪುಣೆಯಲ್ಲಿ 10 ಕಿ.ಮೀ ದೂರ ಕ್ರಮಿಸಲು 27 ನಿಮಿಷ 50 ಸೆಕೆಂಡ್ ಬೇಕಿದೆ ಎಂದು ವರದಿ ಹೇಳುತ್ತಿದೆ. ಪುಣೆ ಕೂಡ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ. ವಿಶೇಷ ಅಂದರೆ 3 ಮತ್ತು ನಾಲ್ಕನೇ ಸ್ಥಾನ ಫಿಲಿಪೈನ್ಸ್ ಹಾಗೂ ತೈವಾನ್ ದೇಶದ ನಗರಗಳು ಆಕ್ರಮಿಸಿಕೊಂಡಿದೆ. ಫಿಲಿಪೈನ್ಸ್‌ನನ ಮನಿಲಾ ನಗರದಲ್ಲಿ ಇದೇ ದೂರ ಪ್ರಯಾಣಿಸಲು 27 ನಿಮಿಷ 20 ಸೆಕೆಂಡ್ ಬೇಕಿದ್ದರೆ, ತೈವಾನ್‌ನ ತೈಚುಂಗ್ ನಗರದಲ್ಲಿ ಪ್ರಯಾಣಿಸಲು 26 ನಿಮಿಷ 50 ಸೆಕೆಂಡ ಬೇಕಿದೆ.
ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ನಗರಗಳ ಟ್ರಾಫಿಕ್ ಎಷ್ಟಿದೆ ಎಂದು ಪತ್ತೆ ಹಚ್ಚಲು ಅತೀ ದೊಡ್ಡ ಅಧ್ಯಯನ ನಡೆಸಿದೆ. ಇದಕ್ಕಾಗಿ 55 ದೇಶಗಳ 387 ನಗರಗಳಲ್ಲಿ ಅಧ್ಯಯನ ನಡೆಸಿದೆ. ಟ್ರಾಫಿಕ್ ಸಮಸ್ಯೆಯಿಂದ ಜನರು ಹೆಚ್ಚುವರಿ ಸಮಯವನ್ನು ರಸ್ತೆ ಮೇಲೆ ಕಳೆಯುವುದರಿಂದ ಸಂಪನ್ಮೂಲ ನಷ್ಟವಾಗುತ್ತಿದೆ. ಅನಗತ್ಯ ಇಂಧನ ಖರ್ಚು, ಹೊಗೆ ಸೇರಿದೆಂತ ವಾಯು ಮಾಲಿನ್ಯ, ತಾಪಮಾನ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದು ವರದಿ ಮಾಡಿದೆ.
ಕಳೆದ ಬಾರಿ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ನೀಡಿದ ವರದಿಯಲ್ಲಿ ಮೊದಲ ಸ್ಥಾನವನ್ನು ಲಂಡನ್ ಆಕ್ರಮಿಸಿಕೊಂಡಿತ್ತು. ಲಂಡನ್‌ನಲ್ಲಿ ಇದೇ ರೀತಿ 10 ಕಿಲೋಮೀಟ್ ಪ್ರಯಾಣಕ್ಕೆ 37 ನಿಮಿಷ 20 ಸೆಕೆಂಡ್ ಬೇಕಿದೆ ಎಂದು ಹೇಳಿತ್ತು. ಆದರೆ ಈ ಬಾರಿ ಲಂಡನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಸುಧಾರಿಸಿದೆ. ಆದರೆ ಬೆಂಗಳೂರು ಮತ್ತಷ್ಟು ಕಳಪೆಯಾಗಿದೆ.
ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಸಾಗಿದ ಕಾರು ಮಾಲೀಕ, ಮನೆ ಸೇರುವಷ್ಟರಲ್ಲೇ ಕಾದಿತ್ತು ಆಘಾತ!