ಸಮಾಜ ಶಾಂತಿಯುತವಾಗಿ, ನಿರ್ಭೀತಿಯಿಂದ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ, ರಾಜ್ಯದಲ್ಲಿ ಬಾಂಬ್ ಸ್ಫೋಟ ನಡೆಸಿದವರ ಪತ್ತೆ ಹಚ್ಚಲಾಗುತ್ತಿದ್ದು, ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಭಾನುವಾರ ಹೇಳಿದರು.

ಬೆಳಗಾವಿ (ಮಾ.4): ಸಮಾಜ ಶಾಂತಿಯುತವಾಗಿ, ನಿರ್ಭೀತಿಯಿಂದ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ, ರಾಜ್ಯದಲ್ಲಿ ಬಾಂಬ್ ಸ್ಫೋಟ ನಡೆಸಿದವರ ಪತ್ತೆ ಹಚ್ಚಲಾಗುತ್ತಿದ್ದು, ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿನಲ್ಲಿ ಬಾಂಬ್‌ ಇಟ್ಟವರು ದೇಶ ದ್ರೋಹಿಗಳು. ಅವರಿಗೆ ಯಾವುದೇ ಜಾತಿ, ಧರ್ಮ, ವರ್ಗವಿಲ್ಲ. ಮನುಷ್ಯತ್ವ, ಕರುಣೆ ಇಲ್ಲದವರನ್ನು ನಾವು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನು 'ನಮ್ಮ ಬ್ರದರ್ಸ್' ಅಂದಿದ್ದ ಡಿಕೆಶಿ, ಈಗ ಬಾಂಬರ್‌ಗೆ ಆಂಕಲ್ ಅಂತಾರಾ? ಬಿಜೆಪಿ ಕಿಡಿ

ಶಾಂತಿಯುತ, ನಿರ್ಭಯ ಸಮಾಜದಲ್ಲಿ ಮಾತ್ರ ಅಭಿವೃದ್ಧಿಯ ಜತೆಗೆ ಜನರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಶಾಂತಿಯುತ ರಾಜ್ಯವನ್ನು ಹದಗೆಡಿಸಲು ಪ್ರಯತ್ನಿಸಿದವರನ್ನು ಮಟ್ಟ ಹಾಕಲು ಸರಕಾರ ಕ್ರಮ ಕೈಗೊಂಡಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಇದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶ ಏನಾಗಿತ್ತು ಎಂಬುದನ್ನು ಬಯಲು ಮಾಡಬೇಕು. ಅದೇ ರೀತಿ ಮುಂದೆ ಈ ರೀತಿ ಕೃತ್ಯ ಮಾಡಲು ಯಾರಿಗೂ ಧೈರ್ಯ ಬರದಂತೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಇಂತಹ ಸಂದರ್ಭದಲ್ಲಿ ಯಾರೂ ರಾಜಕಾರಣ ಮಾಡಬಾರದು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ವರ್ಗವನ್ನು ಗುರಿಯಾಗಿಸಬಾರದು. ರಾಜ್ಯದ ಹಿತಾಸಕ್ತಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಅದನ್ನು ಬಿಟ್ಟು ನಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿದರೆ ದುಷ್ಕರ್ಮಿಗಳು ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಬ್ರ್ಯಾಂಡ್‌ ಬೆಂಗ್ಳೂರು ಮಾಡ್ದೆ ಇದ್ರೂ ತೊಂದ್ರೆ ಇಲ್ಲ, ಬಾಂಬ್‌ ಬೆಂಗ್ಳೂರು ಮಾಡ್ಬೇಡಿ: ಸರ್ಕಾರದ ವಿರುದ್ಧ ಆರ್‌.ಅಶೋಕ್‌ ಆಕ್ರೋಶ

ಕಾಂಗ್ರೆಸ್‌ ಸರಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಎಲ್ಲರೂ ಕನ್ನಡಿಗರಾಗಿ ಒಗ್ಗಟ್ಟಾಗಿ, ಅಣ್ಣ ತಮ್ಮಂದಿರಂತೆ ಜೀವನ ನಡೆಸುತ್ತಿದ್ದೇವೆ. ನಮ್ಮನ್ನು ಬೇರ್ಪಡಿಸಲು ಯಾರಿಗೂ ಅವಕಾಶ ನೀಡಬಾರದು ಎಂದು ಹೇಳಿದರು