ಬ್ರ್ಯಾಂಡ್ ಬೆಂಗ್ಳೂರು ಮಾಡ್ದೆ ಇದ್ರೂ ತೊಂದ್ರೆ ಇಲ್ಲ, ಬಾಂಬ್ ಬೆಂಗ್ಳೂರು ಮಾಡ್ಬೇಡಿ: ಸರ್ಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟಕ್ಕೆ ಸರ್ಕಾರವನ್ನು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ ಭದ್ರತಾ ವೈಫಲ್ಯ ನೇರವಾಗಿ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಮಾ.1): ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿ ಅಂದರೆ ಐಇಡಿ ಬಳಸಿ ನಡೆಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳುವ ಬ್ರ್ಯಾಂಡ್ ಬೆಂಗಳೂರು ಪದವನ್ನೇ ಹಿಡಿದು ಟೀಕೆ ಮಾಡಿದ ಅಶೋಕ್, ಬ್ರ್ಯಾಂಡ್ ಬೆಂಗಳೂರು ಮಾಡದೇ ಇದ್ದರೂ ತೊಂದರೆ ಇಲ್ಲ, ಈ ಸರ್ಕಾರ ಇದನ್ನು ಬಾಂಬ್ ಬೆಂಗಳೂರು ಮಾಡದೇ ಇದ್ದರೆ ಸಾಕು ಎಂದು ಹೇಳಿದ್ದಾರೆ. 'ನಾವೆಲ್ಲರೂ ಬೆಂಗಳೂರನ್ನು ಪ್ರೀತಿಸುವ ಜನ. ಇದು ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಇರಬೇಕು. ಆಡಳಿತ ನಡೆಸುವ ವ್ಯಕ್ತಿಗಳಲ್ಲಿ ನಮ್ಮದೊಂದು ವಿನಂತಿ. ದಯವಿಟ್ಟು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ. ಮಂಗಳೂರಿನಿಂದ ಹಿಡಿದು ವಿಧಾನಸೌಧವರೆಗೂ ಮೈಂಡ್ ಸೆಟ್ ರೆಡಿ ಮಾಡಿದ್ದೀರಾ. ನಮಗೆ ಓಟು ಹಾಕಿ, ನೀವು ಏನು ಮಾಡಿದ್ರೂ ಕಾಪಾಡ್ತೀವಿ ಅಂತ ಅವರಿಗೆ ಭರವಸೆ ಕೊಟ್ಟಿದ್ದೀರಾ. ಶರ್ಟಿನ ಗುಂಡಿ ಬಿಚ್ಚಿ ಎದೆಯುಬ್ಬಿಸಿ ಓಡಾಡಿಕೊಂಡು ಇರುವ ಮನಸ್ಥಿತಿ ಗೆ ತಂದಿದ್ದೀರಾ' ಎಂದು ಅಶೋಕ್ ಟೀಕೆ ಮಾಡಿದ್ದಾರೆ.
'ನೀವು ಬ್ರಾಂಡ್ ಬೆಂಗಳೂರು ಮಾಡದೇ ಇದ್ರೂ ಪರವಾಗಿಲ್ಲ. ಆದರೆ, ಬಾಂಬ್ ಬೆಂಗಳೂರು ಮಾಡಬೇಡಿ ಎನವುದು ನಮ್ಮ ವಿನಂತಿ' ಎಂದು ಅಶೋಕ್ ಹೇಳಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಕಾನೂನು ವೈಫಲ್ಯ ದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ದೆವು. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಅಂತ ಕೂಡಾ ಹೇಳಿದ್ದೆವು. ಪಾಕ್ ಪರ ಘೋಷಣೆ ಹಾಕಿದಾಗಲೂ ಕಾಂಗ್ರೆಸ್‌ನ ಎಲ್ಲರೂ ಅವರ ಪರವಾಗಿ ನಿಂತರು. ಡಿಕೆಶಿ ಅಂತೂ ಆ ತರಹ ಘಟನೆ ಆಗಲೇ ಇಲ್ಲ ಎಂದಿದ್ದರು. ಮಂಗಳೂರು ಬ್ಲಾಸ್ಟ್ ಮಾಡಿದವರನ್ನು ಬ್ರದರ್ಸ್ ಅಂತಾ ಹೇಳಿದ್ದರು. ರಾಮೇಶ್ವರಂ ಕೆಫೆ ಬ್ಲಾಸ್ಟ್ ಮಾಡಿದವರನ್ನು ಅವರು ಅಂಕಲ್ ಎನ್ನಬಹುದು ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ಮೇಲೆ ಸಂಚು: ಬೆಂಗಳೂರಿನಲ್ಲಿ ಆದಾಯ ಕಡಿಮೆ ಆಗಬೇಕು, ಬೆಂಗಳೂರಿಗೆ ಕೆಟ್ಟ ಹೆಸರು ಬರಬೇಕು. ಅಂತ ಭಯೋತ್ಪಾದನಾ ಸಂಘಟನೆ ಈ ರೀತಿ ಕೃತ್ಯ ಮಾಡುತ್ತಿದೆ. ಭಯೋತ್ಪಾದನಾ ಕೃತ್ಯ ಮಾಡುವವರಿಗೆ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮೇಶ್ವರಂ ಕೆಫೆಯ ಸ್ಪೋಟದಲ್ಲಿ ಗಾಯಾಳುವಾಗಿರುವ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೇನೆ ಎಂದು ಅಶೋಕ್ ಹೇಳಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಬಿವೈ ವಿಜಯೇಂದ್ರ, 'ಬಿಜೆಪಿ ಇಂತ ಘಟನೆಗಳಲ್ಲಿ ರಾಜಕಾರಣ ಮಾಡಲ್ಲ. ಇದು ಜನರ ಸುರಕ್ಷತಾ ವಿಚಾರ. ನಿಮ್ಮ ಅಲ್ಪ ಸಂಖ್ಯಾತರ ತುಷ್ಟೀಕರಣ ನೀತಿ ಈ ಪರಿಸ್ಥಿತಿಗೆ ತಂದಿದೆ. ಮುಖ್ಯಮಂತ್ರಿ ಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಪದೇ ಪದೇ ಬಾಂಬ್ ಇಟ್ಟಿರುವುದಾಗಿ ಬೆದರಿಕೆಗಳು ಬರುತ್ತಿದ್ದವು. ಎರಡುಮೂರು ಬಾರಿ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಬಂದಿದ್ದವು. ಈಗ ಬಾಂಬ್ ಸ್ಪೋಟ ಆಗಿದೆ. ಬಾಂಬ್ ಬೆದರಿಕೆ ಇಮೇಲ್ ಬಂದಾಗ ಡಿಕೆಶಿ ಮಾತನಾಡಿದ್ದರು. ಹೀಗೆ ಬೆದರಿಕೆ ಹಾಕಿ ಹಾಕಿ ಒಂದಿನ ಬ್ಲಾಸ್ಟ್ ಮಾಡ್ತಾರೆ ಅಂದಿದ್ದರು. ನಾವು ಬೆದರಿಕೆ ಮೇಲ್ ನ ನೆಗ್ಲೆಕ್ಟ್ ಮಾಡಲ್ಲ ಅಂದಿದ್ದರು' ಎಂದು ಹೇಳಿದ್ದಾರೆ.
ಬೆಂಗಳೂರು ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಯಾಕೆ?
ತಾಕತ್ ಇದ್ರೆ ತಕ್ಷಣ ಎನ್ ಐಎಗೆ ವಹಿಸಿ. ಪ್ರತಿ ವಿಚಾರದಲ್ಲಿ ಕೂಡಾ ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡಬೇಡಿ. ಇದು ಇತರ ಅಲ್ಪ ಸಂಖ್ಯಾತರಿಗೂ ಕೆಟ್ಟ ಹೆಸರು ಬರುತ್ತದೆ. ಪದೇ ಪದೇ ಡಿಕೆಶಿ ಇದೇ ರೀತಿ ಹೇಳಿಕೆ ಕೊಡುತ್ತಿದ್ದರೆ, ದೇಶದ್ರೋಹಿ ಗಳ ಲಿಸ್ಟ್ ನಲ್ಲಿ ಡಿಕೆಶಿ ಹೆಸರನ್ನೂ ಸೇರಿಸಬೇಕಾಗುತ್ತದೆ. ನಿಮ್ಮ ಈ ನಡವಳಿಕೆಯಿಂದ ಪದೇ ಪದೇ ಈ ರೀತಿಯ ಘಟನೆಗಳು ಆಗುತ್ತಿವೆ ಎಂದು ಹೇಳಿದ್ದಾರೆ.
ಐಐಎಸ್‌ಸಿ, ಚಿನ್ನಸ್ವಾಮಿ, ಚರ್ಚ್‌ಸ್ಟ್ರೀಟ್ ಈಗ ರಾಮೇಶ್ವರಂ ಕೆಫೆ... ನಮ್ಮ ಸರ್ಕಾರಗಳು ಪಾಠ ಕಲಿಯೋದ್ಯಾವಾಗ?