ರಾಜ್ಯ ವಿಧಾನಸಭಾ ಚುನಾವಣೆ ನೆಪದಲ್ಲಿ ಬಿಬಿಎಂಪಿ ಅಧಿಕಾರಿ ಸಿಬ್ಬಂದಿಯು ನಗರದ ಮಳೆಗಾಲದ ಸಿದ್ಧತೆಯನ್ನು ಮರೆತ ಪರಿಣಾಮ ಇದೀಗ ಜನರು ಪ್ರಾಣಕ್ಕೆ ಎರವಾಗುವ ಪರಿಸ್ಥಿತಿ ಬಂದೊದಗಿದೆ.

ವಿಶೇಷ ವರದಿ

ಕಬೆಂಗಳೂರು (ಮೇ.23) : ರಾಜ್ಯ ವಿಧಾನಸಭಾ ಚುನಾವಣೆ ನೆಪದಲ್ಲಿ ಬಿಬಿಎಂಪಿ ಅಧಿಕಾರಿ ಸಿಬ್ಬಂದಿಯು ನಗರದ ಮಳೆಗಾಲದ ಸಿದ್ಧತೆಯನ್ನು ಮರೆತ ಪರಿಣಾಮ ಇದೀಗ ಜನರು ಪ್ರಾಣಕ್ಕೆ ಎರವಾಗುವ ಪರಿಸ್ಥಿತಿ ಬಂದೊದಗಿದೆ.

ರಾಜ್ಯ ವಿಧಾನಸಭೆ ಚುನಾವಣೆ(Karnataka assembly election 2023)ಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ(Voters list)ಪರಿಷ್ಕರಣೆ ಸೇರಿ ಇನ್ನಿತರ ಕಾರ್ಯಗಳು 2022ರ ಡಿಸೆಂಬರ್‌ನಿಂದಲೇ ಆರಂಭಿಸಲಾಯಿತು. ಮೊದಲಿಗೆ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯ ನಡೆಸಿದ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ನಂತರ ಚುನಾವಣೆ ತಯಾರಿ, ಮತದಾನ ಪ್ರಕ್ರಿಯೆಗೆ ಅಗತ್ಯ ಕ್ರಮ, ಮತ ಎಣಿಕೆ ಕಾರ್ಯದಲ್ಲಿಯೇ ಮುಳುಗಿದ್ದರು. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸುವ ಕಾರ್ಯ, ಮಳೆಗಾಲ ಸೇರಿದಂತೆ ಎದುರಾಗಬಹುದಾದ ಸವಾಲುಗಳಿಗೆ ಪೂರ್ವ ಕ್ರಮಗಳನ್ನು ಕೈಗೊಳ್ಳುವುದನ್ನೇ ಮರೆತಿದ್ದರು. ಪ್ರಮುಖವಾಗಿ ಚರಂಡಿಗಳಲ್ಲಿ ಹೂಳು ತೆಗೆಯುವುದು, ರಸ್ತೆ ಬದಿ ಶೇಖರಣೆಯಾದ ತ್ಯಾಜ್ಯ ವಿಲೇವಾರಿ, ಕೆಳ ಸೇತುವೆಗಳಲ್ಲಿ ಶೇಖರಣೆಗೊಳ್ಳುವ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದು ಹೀಗೆ ಅಗತ್ಯ ಹಾಗೂ ನಿರಂತರ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದರು. ಹೀಗಾಗಿ ಇದೀಗ ಮುಂಗಾರು ಪೂರ್ವ ಮಳೆಗೆ ಬೆಂಗಳೂರು ಮುಳುಗುವಂತಾಗಿದ್ದು, ಜನಜೀವನ ಅಸ್ತವ್ಯಸ್ತವಾಗುವಂತಾಗಿದೆ.

Bengaluru- ರಾಜಕಾಲುವೆಯಲ್ಲಿ ಕೊಚ್ಚಿಹೋದ ಜಿ.ಟಿ. ಮಾಲ್‌ ಉದ್ಯೋಗಿ: ಸಾವಿಗೆ ಬಿಬಿಎಂಪಿಯೇ ಹೊಣೆ

ವಾರ್ಷಿಕ ಪ್ರಕ್ರಿಯೆ ಮರೆತ ಅಧಿಕಾರಿಗಳು:

ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ 1,400 ಕಿ.ಮೀ. ಆರ್ಟೀರಿಯಲ್‌ ಹಾಗೂ ಸಬ್‌ ಆರ್ಟೀರಿಯಲ್‌ ರಸ್ತೆ(Arterial and sub-arterial road)ಯೂ ಸೇರಿದಂತೆ 13 ಸಾವಿರ ಕಿ.ಮೀ ಉದ್ದದ ರಸ್ತೆ ಜಾಲವಿದೆ. ಇದರಲ್ಲಿ ಅಷ್ಟೇ ಪ್ರಮಾಣದ ಚರಂಡಿ ಇದೆ. ಇನ್ನು 842 ಕಿ.ಮೀ. ಉದ್ದದ ರಾಜಕಾಲುವೆ(Rjakaluve) ಇವೆ. ಈ ಎಲ್ಲವನ್ನೂ ಮಳೆಗಾಲಕ್ಕೂ ಮುನ್ನವೇ ಸ್ವಚ್ಛಗೊಳಿಸಿ, ಅಲ್ಲಿ ಶೇಖರಣೆಯಾದ ಹೂಳನ್ನು ತೆಗೆಯಬೇಕಿದೆ. ಅದಕ್ಕಾಗಿ ಪ್ರತ್ಯೇಕ ಹಣವನ್ನೂ ಮೀಸಲಿಡಲಾಗುತ್ತದೆ.

ಬಿಬಿಎಂಪಿ ಬಜೆಟ್‌(BBMP Budget)ನಲ್ಲಿ ವಾರ್ಡ್‌ ರಸ್ತೆ, ಚರಂಡಿಗಳ ನಿರ್ವಹಣೆಗಾಗಿಯೇ ವಾರ್ಷಿಕ .30 ಲಕ್ಷ ನಿಗದಿ ಮಾಡಲಾಗುತ್ತದೆ. ಮಳೆಗಾಲಕ್ಕೂ ಮುನ್ನ ಅಂದರೆ ಜನವರಿಯಿಂದಲೇ ಅಲ್ಲಿ ನಿರ್ವಹಣಾ ಕಾರ್ಯಗಳನ್ನು ಆರಂಭಿಸಲಾಗುತ್ತದೆ. ಆದರೆ, ಈ ಬಾರಿ ಚುನಾವಣೆ ಕಾರ್ಯದ ನೆಪವೊಡ್ಡಿ ಯಾವೊಂದು ನಿರ್ವಹಣಾ ಕೆಲಸದ ಬಗ್ಗೆಯೂ ಬಿಬಿಎಂಪಿ ಆಸಕ್ತಿ ತೊರಲಿಲ್ಲ.

ಕಾರ್ಮಿಕರ ಕೊರತೆ:

ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಾದೇಶ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಜತೆಗೆ, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಮಿಕರು ಸ್ವಂತ ಊರುಗಳಿಗೆ ತೆರಳಿದ ಪರಿಣಾಮ ಕಳೆದ ಎರಡು ತಿಂಗಳಿನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ರಾಜಕಾಲುವೆ ಕಾಮಗಾರಿಗಳು ಸಂಪೂರ್ಣವಾಗಿ ನಿಂತಿವೆ. ಇದರಿಂದ ಮಳೆಗಾಲದ ತಯಾರಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ ಎಂಬುದು ಅಧಿಕಾರಿಗಳ ವಾದವಾಗಿದೆ.

ಅವೈಜ್ಞಾನಿಕ ಅಂಡರ್‌ ಪಾಸ್‌

ನಗರದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ 53 ಕೆಳ ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ಅಂಡರ್‌ ಪಾಸ್‌ಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದರೂ, ಮಳೆಗಾಲದಲ್ಲಿ ಕೆಳಸೇತುವೆಗೆ ಕಡೆಗೆ ಹರಿಯುವ ನೀರು ಅಲ್ಲಿಯೇ ಶೇಖರಣೆಗೊಂಡು ವಾಹನ ಸಂಚಾರಕ್ಕೆ ತಡೆಯುಂಟಾಗುತ್ತದೆ. ಅದರಲ್ಲಿ ವಾಹನಗಳು ಮುಳುಗುವಷ್ಟುನೀರು ನಿಂತು ಅವಘಡ ಉಂಟಾಗುವಂತಾಗಿದೆ.

ಈ ಹಿಂದೆ ಕಿನೋ ಚಿತ್ರಮಂದಿರ ಬಳಿಯ ಕೆಳಸೇತುವೆಯಲ್ಲಿ ಇದೇ ಮಾದರಿಯಲ್ಲಿ ನೀರು ನಿಂತು ಅನಾಹುತ ಉಂಟಾಗುತ್ತಿತ್ತು. ಅದಕ್ಕೆ ಪರಿಹಾರ ಎನ್ನುವಂತೆ ಕೆಳಸೇತುವೆಯಲ್ಲಿ ನೀರು ಶೇಖರಣೆಗೊಂಡ ಕೂಡಲೇ ಮೋಟಾರು ಮೂಲಕ ನೀರು ಹೊರಹಾಕಲು ಕ್ರಮ ಕೈಗೊಂಡು ಸಮಸ್ಯೆ ನಿವಾರಿಸಲಾಗಿದೆ. ಅದೇ ಮಾದರಿಯನ್ನು ಇನ್ನಿತರ ಕೆಳಸೇತುವೆಗೆ ಅಳವಡಿಸಲು ಬಿಬಿಎಂಪಿ ವಿಫಲವಾಗಿದೆ. ಅದರ ಪರಿಣಾಮವೇ ಕೆ.ಆರ್‌. ವೃತ್ತದ ಕೆಳಸೇತುವೆಯಲ್ಲಿ ಭಾನುವಾರ ನೀರು ನಿಂತು ಕಾರು ಮುಳುಗಿ ಯುವತಿ ಮೃತಪಟ್ಟಿದ್ದಾರೆ.

ರಾಜಕಾಲುವೆ ಒತ್ತುವರಿ ಸ್ಥಗಿತ

ಬಿಬಿಎಂಪಿ ವ್ಯಾಪ್ತಿಯಲ್ಲಿನ 842 ಕಿ.ಮೀ. ಉದ್ದದ ರಾಜಕಾಲುವೆ ಪೈಕಿ ಈಗಾಗಲೇ 400 ಕಿ.ಮೀ.ಗೂ ಹೆಚ್ಚಿನ ರಾಜಕಾಲುವೆ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ತಡೆಗೋಡೆ ನಿರ್ಮಾಣ ಸೇರಿ ಇನ್ನಿತರ ಕಾರ್ಯಗಳು ಮುಗಿದಿವೆ. ಆದರೂ, ಆ ರಾಜಕಾಲುವೆಗಳಲ್ಲಿ ಪ್ರತಿ ವರ್ಷ ಹೂಳು ತುಂಬದಂತೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕಿದೆ. ಆ ಕಾರ್ಯಕ್ಕೂ ಈ ಬಾರಿ ಬ್ರೇಕ್‌ ಬಿದ್ದಿದ್ದು, ನೀರು ಸರಾಗವಾಗಿ ಹರಿಯದಂತಾಗಿ ರಸ್ತೆ ಮೇಲೆ ಬರುವಂತಾಗಿದೆ.

Bengaluru- ಯುವತಿ ಸಾವಿಗೆ ಕಾರಣವಾದ ಕಾರು ಚಾಲಕ ಅರೆಸ್ಟ್‌: ಬಿಬಿಎಂಪಿ ಅಧಿಕಾರಿಗಳ ಅರೆಸ್ಟ್‌ ಯಾವಾಗ?

ಅಲ್ಲದೆ, ನಗರದಲ್ಲಿ ಇನ್ನು 600ಕ್ಕೂ ಹೆಚ್ಚಿನ ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಬಾಕಿಯಿದೆ. ಪ್ರತಿಬಾರಿ ಮಳೆಯಿಂದ ಪ್ರವಾಹ ಉಂಟಾದಾಗ ರಾಜಕಾಲುವೆ ಒತ್ತುವರಿಯಿಂದಲೇ ಸಮಸ್ಯೆ ಉಂಟಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆಗೆಲ್ಲ ರಾಜಕಾಲುವೆ ಒತ್ತುವರಿ ತೆರವಿನ ಪ್ರಹಸನವೂ ನಡೆಯುತ್ತದೆ. ಆದರೆ, ಯಾವಾಗ ಎಲ್ಲವೂ ತಣ್ಣಗಾಗುತ್ತದೆಯೋ ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನೇ ಸ್ಥಗಿತಗೊಳಿಸಲಾಗುತ್ತದೆ. ಇದು ನಗರದಲ್ಲಿ ಸಣ್ಣ ಮಳೆಗೂ ಪ್ರವಾಹ ಸೃಷ್ಟಿಯಾಗಿ ಅನಾಹುತ ಉಂಟಾಗುವುದಕ್ಕೆ ಕಾರಣವಾಗುತ್ತಿದೆ.