Bengaluru- ರಾಜಕಾಲುವೆಯಲ್ಲಿ ಕೊಚ್ಚಿಹೋದ ಜಿ.ಟಿ. ಮಾಲ್ ಉದ್ಯೋಗಿ: ಸಾವಿಗೆ ಬಿಬಿಎಂಪಿಯೇ ಹೊಣೆ
ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಹಾಮಳೆಗೆ ರಾಜಕಾಲುವೆಗೆ ಬಿದ್ದು ಜಿ.ಟಿ. ಮಾಲ್ ಉದ್ಯೋಗಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ.
ಬೆಂಗಳೂರು (ಮೇ 22): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆಗೆ ಕಾರು ಮುಳುಗಿ ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ವಿಜಯನಗರದ ಬಳಿಯ ಕೆ.ಪಿ. ಅಗ್ರಹಾರದಲ್ಲಿ ಕಾಮಗಾರಿ ನಡೆಯುತ್ತಿದ್ದ ರಾಜಕಾಲುವೆಯಲ್ಲಿ ಬಿದ್ದು ಜಿ.ಟಿ. ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕೊಚ್ಚಿ ಹೋಗಿದ್ದಾರೆ. ಕೊಚ್ಚಿಹೋದ ಯುವಕನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ನಡೆಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.
ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆಗಳಾದ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂಎಎಸ್‌ಎಸ್‌ಬಿ, ಬಿಎಂಟಿಸಿ ಹಾಗೂ ಬಿಎಂಆರ್‌ಸಿಎಲ್ (ಮೆಟ್ರೋ) ಕಾಮಗಾರಿಗಳು ಹಾಗೂ ಕಾರ್ಯ ನಿರ್ವಹಣೆಯಲ್ಲಿ ಉಂಟಾದ ಲೋದ ಹಾಗೂ ನಿರ್ಲಕ್ಷ್ಯದಿಂದಾಗಿ ಪ್ರತಿವರ್ಷ ನೂರಾರು ಸಾರ್ವಜನಿಕರು ಸಾವನ್ನಪ್ಪುತ್ತಿದ್ದಾರೆ. ಆದರೂ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದೇ ಇಲ್ಲ. ಬಿಬಿಎಂಪಿ ನಿರ್ವಹಣೆ ಕೊರತೆಯಿಮದಾಗಿ ಕೆ.ಆರ್. ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ನೀರು ನಿಂತುಕೊಂಡು ಪ್ರವಾಹ ಉಂಟಾಗಿದ್ದು, ಕಾರು ಮುಳುಗಿ ಯುವತಿ ಸಾವನ್ನಪ್ಪಿದ್ದಾಳೆ. ಮತ್ತೊಂದೆಡೆ, ಕೆ.ಪಿ. ಅಗ್ರಹಾರದಲ್ಲಿ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡ ರಾಜಕಾಲುವೆಗೆ ಬಿದ್ದು ಯುವಕನೊಬ್ಬ ಕೊಚ್ಚಿಹೋಗಿದ್ದಾನೆ.
Bengaluru: ಡ್ರೈವರ್ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು
ಕೆ.ಪಿ. ಅಗ್ರಹಾರದಲ್ಲಿ ಕೊಚ್ಚಿಹೋಗಿ ಬ್ಯಾಟರಾಯನಪುರದಲ್ಲಿ ಪತ್ತೆ: ಕೆ.ಪಿ. ಅಗ್ರಹಾರದ ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ ಯುವಕನನ್ನು ಲೋಕೇಶ್ (27) ಎಂದು ಗುರುತಿಸಲಾಗಿದೆ. ಕಾಲುವೆಗೆ ಬಿದ್ದ ಯುವಕನ ಮೃತದೇಹ ಬ್ಯಾಟರಾಯನಪುರದ ರಾಜಕಾಲುವೆ ಬಳಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದು, ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಇನ್ನು ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಯುವಕ ಕಾಲುವೆಗೆ ಬಿದ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಘಟನೆ ಕುರಿತು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಮನೆಗೆ ಆಸರೆಯಾಗಿದ್ದ ಮಗ ಇನ್ನಿಲ್ಲ: ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಲೋಕೇಶ್ ಪ್ರಕರಣವನ್ನು ಕೆಪಿ ಅಗ್ರಹಾರ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನಡಿ ದಾಖಲು ಮಾಡಲಾಗಿದೆ. ಮೃತ ಲೋಕೇಶ್ ಪ್ರತಿಷ್ಠಿತ ಜಿಟಿ ಮಾಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದನು. ಮೂರು ಜನ ಮಕ್ಕಳಲ್ಲಿ ಎರಡನೇಯವನಾಗಿದ್ದನು. ಲೋಕೇಶ್ ತಾಯಿ ಚೆಲುವಮ್ಮರಿಂದ ರಾಜಕಾಲುವೆ ಬಳಿ ನಡೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಿಸಲಾಗಿತ್ತು. ಕಾಲುವೆಯಲ್ಲಿ ಮೃತದೇಹ ಸಿಕ್ಕ ನಂತರ ಅವರ ಕುಟುಂಬ ಸದಸ್ಯರನ್ನು ಕರೆಸಿಕೊಂಡು ಕನ್ಫರ್ಮ್ ಮಾಡಿಕೊಳ್ಳಲಾಗಿದೆ.
BENGALURU- ಯುವತಿ ಸಾವಿಗೆ ಕಾರಣವಾದ ಕಾರು ಚಾಲಕ ಅರೆಸ್ಟ್: ಬಿಬಿಎಂಪಿ ಅಧಿಕಾರಿಗಳ ಅರೆಸ್ಟ್ ಯಾವಾಗ?
ಪ್ರತ್ಯಕ್ಷದರ್ಶಿ ವೆಂಕಟೇಶ್ ಹೇಳಿದ್ದೇನು? ರಾಜಕಾಲುವೆಯಲ್ಲಿ ಯುವಕ ಕೊಚ್ಚಿ ಹೋದ ಘಟನೆಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿ ವೆಂಕಟೇಶ್ ಅವರು, ನಿನ್ನೆ (ಭಾನುವಾರ) ಸಂಜೆ ಭಾರಿ ಮಳೆಯಿಂದ ರಾಜಕಾಲುವೆ ತುಂಬಿ ಹರಿಯುತ್ತಿತ್ತು. 4.30ರ ಸಮಯದಲ್ಲಿ ಯುವಕ ಲೋಕೇಶ್ ರಾಜಕಾಲುವೆಗೆ ಬಿದ್ದಿದ್ದಾನೆ. ನನಗೆ ಪಕ್ಕದ ಮನೆಯವರು ವಿಷಯ ಗೋತ್ತಾಯ್ತು. ಬಿಬಿಎಂಪಿ ಕಾಮಗಾರಿ ವಿಳಂಭದಿಂದ ಈ ಅವಘಡ ಸಂಭವಿಸಿದೆ. ಮಕ್ಕಳು, ಈ ರಾಜಕಾಲುವೆ ಮೇಲೆನೇ ಆಟ ಆಡ್ತಾರೆ. ಆದ್ರೆ ಮಳೆ ಬಂದಾಗ ರಾಜಕಾಲುವೆ ಗೋತ್ತೆ ಆಗಲ್ಲ. ಅಷ್ಟರ ಮಟ್ಟಿಗೆ ರಾಜಕಾಲುವೆ ತುಂಬಿ ನೀರು ಹರಿಯುತ್ತದೆ. ಹೀಗಾಗಿ ರಾಜಕಾಲುವೆ ಕಾಣಿಸದೇ ಯುವಕ ಕಾಲು ಜಾರಿ ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.