ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲರಾದ ಬಿಬಿಎಂಪಿ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 31ರ ಡೆಡ್‌ಲೈನ್ ಮುಗಿದರೂ ಕೆಲಸವಾಗದ ಕಾರಣ, ಇಂದು ಸಂಜೆಯೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚಿ ವರದಿ ನೀಡುವಂತೆ ಖಡಕ್ ಎಚ್ಚರಿಕೆ.
ಬೆಂಗಳೂರು, (ನವೆಂಬರ್ 3): ಗುಂಡಿ ಮುಚ್ಚಲ ವಿಫಲವಾಗಿರುವ ಹಿನ್ನೆಲೆ ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 31ರ ಡೆಡ್‌ಲೈನ್ ಮುಗಿದ ನಂತರವೂ ರಸ್ತೆ ಗುಂಡಿಗಳನ್ನು ಮುಚ್ಚದಿರುವುದನ್ನು ಖಂಡಿಸಿ, ಇಂದು ಸಂಜೆ 4 ಗಂಟೆಗೆ ಎಲ್ಲ ಗುಂಡಿಗಳನ್ನು ಮುಚ್ಚಿ ವರದಿ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಇಂದೇ ಫೈನಲ್, ಡೆಡ್ಲೈನ್ ಪಾಲಿಸದಿದ್ರೆ ಕ್ರಮ:
ಈ 'ಫೈನಲ್ ಡೆಡ್‌ಲೈನ್' ಪಾಲಿಸದಿದ್ದರೆ ಕಠಿಣ ಕ್ರಮ ಎಂದು ಎಚ್ಚರಿಸಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಐದು ನಗರ ಪಾಲಿಕೆ ಆಯುಕ್ತರಿಗೂ, ಇಂಜಿನಿಯರ್‌ಗಳಿಗೂ ಯಾವುದೇ ನೆಪ ಹೇಳದೆ ಕಾರ್ಯಾನುಷ್ಠಾನಕ್ಕೆ ಇಳಿಯುವಂತೆ ಸೂಚಿಸಿದ್ದಾರೆ.
ಸಂಜೆ ವೇಳೆಗೆ ಕಡ್ಡಾಯ ವರದಿ
ಗುಂಡಿ ಮುಚ್ಚಿದ ಕುರಿತು ಸಂಜೆ ವೇಳೆಗೆ ಕಡ್ಡಾಯ ವರದಿ ಸಲ್ಲಿಸಿ ಎಂದು ತಿಳಿಸಿದ್ದಾರೆ. ಸಧ್ಯದಲ್ಲೇ ಸಿಎಂ ಸಿದ್ದರಾಮಯ್ಯ ನಗರದ ರಸ್ತೆಗಳಲ್ಲಿ 'ಸಿಟಿ ರೌಂಡ್ಸ್' ಆರಂಭಿಸಿ, ಕೆಲಸಗಳನ್ನು ಪರಿಶೀಲಿಸಿಲಿಸಲಿದ್ದಾರೆ. ನಗರ ನಿವಾಸಿಗಳ ಜೀವನ ಸುಗಮಗೊಳಿಸಲು ಈ ಕ್ರಮ ಸ್ವಾಗತಾರ್ಹ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
