ಕರ್ನಾಟಕದಾದ್ಯಂತ ಇರುವ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳನ್ನು 'ಪ್ರಜಾ ಸೇವಾ ಕೇಂದ್ರ' ಎಂದು ಮರುನಾಮಕರಣ ಮಾಡಲಾಗಿದೆ. ಸೇವೆಗಳಲ್ಲಿ ಏಕರೂಪತೆ ತರುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಬೆಂಗಳೂರು (ನ.19): ರಾಜ್ಯದಾದ್ಯಂತ ಸಾರ್ವಜನಿಕರಿಗೆ ವಿವಿಧ ಹೆಸರುಗಳಲ್ಲಿ ಲಭ್ಯವಾಗುತ್ತಿದ್ದ ನಾಗರಿಕ ಸೇವಾ ಕೇಂದ್ರಗಳನ್ನು (Citizen Service Centers) ತಕ್ಷಣದಿಂದ ಜಾರಿಗೆ ಬರುವಂತೆ "ಪ್ರಜಾ ಸೇವಾ ಕೇಂದ್ರ" (Praja Seva Kendra) ಎಂದು ಮರುನಾಮಕರಣ ಮಾಡಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಏಕರೂಪತೆ ಮತ್ತು ಸ್ಪಷ್ಟತೆಯನ್ನು ತರುವ ಉದ್ದೇಶದಿಂದ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿವಿಧ ಹೆಸರುಗಳಿಗೆ ತೆರೆ

ಇದುವರೆಗೆ ಪ್ರಜಾಸೇವಾ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (EDCS) ಅಡಿಯಲ್ಲಿ ನಾಗರಿಕರಿಗೆ ಹಲವು ಹೆಸರುಗಳಲ್ಲಿ ಸೇವೆ ನೀಡಲಾಗುತ್ತಿತ್ತು:

  • ಬೆಂಗಳೂರು ನಗರದಲ್ಲಿ: 'ಬೆಂಗಳೂರು ಒನ್'
  • ಇತರೆ ನಗರ ಮತ್ತು ಪಟ್ಟಣಗಳಲ್ಲಿ: 'ಕರ್ನಾಟಕ ಒನ್'
  • ಗ್ರಾಮೀಣ ಪ್ರದೇಶಗಳಲ್ಲಿ: 'ಗ್ರಾಮ ಒನ್'

ರಾಜ್ಯದ ವಿವಿಧ ಭಾಗಗಳಲ್ಲಿ ಈ ಕೇಂದ್ರಗಳು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಕಾರಣ, ಅವುಗಳ ಕಾರ್ಯನಿರ್ವಹಣೆ ಮತ್ತು ಗುರುತಿಸುವಿಕೆಯಲ್ಲಿ ಏಕರೂಪತೆ ತರಲು ಈಗ ಒಂದೇ ಹೆಸರನ್ನು ನಿಗದಿಪಡಿಸಲಾಗಿದೆ.

ನವೆಂಬರ್ 18, 2026ರಿಂದಲೇ ಹೊಸ ಹೆಸರು ಜಾರಿ

ನವೆಂಬರ್ 18, 2026 ರಿಂದಲೇ ರಾಜ್ಯದ ಎಲ್ಲಾ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳನ್ನು 'ಪ್ರಜಾ ಸೇವಾ ಕೇಂದ್ರ' ಎಂದು ಕರೆಯಲಾಗುವುದು. ಇಂದಿನಿಂದಲೇ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳು, ನಾಮಫಲಕಗಳು, ವೆಬ್ ಪೋರ್ಟಲ್‌ಗಳು, ತಂತ್ರಾಂಶಗಳು (ಸಾಫ್ಟ್‌ವೇರ್), ರಸೀದಿಗಳು (ಸ್ವೀಕೃತಿಗಳು) ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ 'ಪ್ರಜಾ ಸೇವಾ ಕೇಂದ್ರ' ಎಂಬ ಹೆಸರನ್ನೇ ಬಳಸುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಏಕರೂಪದ ಬ್ರಾಂಡಿಂಗ್ ಮತ್ತು ಆದ್ಯತೆಯ ಅನುಷ್ಠಾನ

ರಾಜ್ಯದ ಎಲ್ಲಾ ಪ್ರಜಾ ಸೇವಾ ಕೇಂದ್ರಗಳಿಗೆ ಏಕರೂಪದ ಬ್ರಾಂಡಿಂಗ್ ವ್ಯವಸ್ಥೆಯನ್ನು ರೂಪಿಸಲು ಸರ್ಕಾರ ಸೂಚಿಸಿದೆ. ಇದರಲ್ಲಿ ನಾಮಫಲಕದ ವಿನ್ಯಾಸ, ಲಾಂಛನ ಮತ್ತು ಬಣ್ಣದ ವಿನ್ಯಾಸಗಳನ್ನು ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆಯುವಂತೆ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.

ಅಲ್ಲದೆ, ಕೇಂದ್ರಗಳ ನಿರ್ವಾಹಕರು ಹಾಗೂ ಫ್ರಾಂಚೈಸಿಗಳೊಂದಿಗಿನ ಒಪ್ಪಂದಗಳಲ್ಲಿಯೂ ಹೊಸ ಹೆಸರನ್ನು ಅಳವಡಿಸಿಕೊಂಡು, ಈ ಆದೇಶವನ್ನು ರಾಜ್ಯಾದ್ಯಂತ ಅತ್ಯಂತ ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಆದೇಶ ಹೊರಡಿಸಿದ್ದಾರೆ.