ರಾಗಿ ಮುದ್ದೆ ಬಡಿಸುವ ಸಾಂಪ್ರದಾಯಿಕ ವಿಧಾನವನ್ನು 'ಅಶುಚಿ' ಎಂದು ಟೀಕಿಸಿದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕಾರ್ತಿಕ್ ರೆಡ್ಡಿ ಎಂಬುವವರು 'ಇದು ಟೀಕಿಸಿದವರ ಬೌದ್ಧಿಕ, ಸಾಂಸ್ಕೃತಿಕ ಅನಕ್ಷರತೆ' ಎಂದಿದ್ದಾರೆ.
ಬೆಂಗಳೂರು (ಡಿ.17): ದಕ್ಷಿಣ ಕರ್ನಾಟಕದ ಶಕ್ತಿವರ್ಧಕ ಆಹಾರ, ರೈತ ಬಾಂದವರ ಜೀವನಾಡಿ 'ರಾಗಿ ಮುದ್ದೆ'ಯನ್ನು ಬಡಿಸುವ ವಿಧಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದ ಟೀಕೆಗೆ ಕನ್ನಡಿಗರು ಮತ್ತು ಆಹಾರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಗಿ ಮುದ್ದೆ ಬಡಿಸುವ ವಿಧಾನವನ್ನು 'ಅಶುಚಿ' (Unhygienic) ಎಂದು ಕರೆದಿದ್ದ ವಿಡಿಯೋವೊಂದಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ರೆಡ್ಡಿ ಎಂಬುವವರು ಹಂಚಿಕೊಂಡಿರುವ ಪೋಸ್ಟ್ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಬೌದ್ಧಿಕ ಬಡತನದ ಪರಮಾವಧಿ
ಇತ್ತೀಚೆಗೆ ವೈರಲ್ ಆದ ಐದು ಸೆಕೆಂಡಿನ ವಿಡಿಯೋವೊಂದರಲ್ಲಿ ರಾಗಿ ಮುದ್ದೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬಡಿಸುವ ದೃಶ್ಯವಿತ್ತು. ಇದನ್ನು ಕಂಡ ಕೆಲವರು ಆ ಆಹಾರದ ಹಿನ್ನೆಲೆ ತಿಳಿಯದೆ ಅದನ್ನು ಅಸ್ವಸ್ಥಕಾರಿ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾರ್ತಿಕ್ ರೆಡ್ಡಿ ಅವರು, 'ಕೇವಲ ಐದು ಸೆಕೆಂಡಿನ ವಿಡಿಯೋ ನೋಡಿ ಯಾರೂ ಆಹಾರ ತಜ್ಞರಾಗಬಾರದು. ತಲೆಮಾರುಗಳಿಂದ ನಮ್ಮನ್ನು ಪೋಷಿಸಿದ, ರೈತರ ಮತ್ತು ಶ್ರಮಿಕ ವರ್ಗದ ಶಕ್ತಿಯಾಗಿರುವ ಆಹಾರವಿದು. ಶತಮಾನಗಳಿಂದ ಇದನ್ನು ಹೀಗೆಯೇ ಬಡಿಸಲಾಗುತ್ತಿದೆ' ಎಂದು ತಿರುಗೇಟು ನೀಡಿದ್ದಾರೆ.
ಸಾಂಸ್ಕೃತಿಕ ಅನಕ್ಷರತೆ
ಒಂದು ಆಹಾರದ ಗುಣಮಟ್ಟ ಅಥವಾ ಶುಚಿತ್ವವನ್ನು ಅದರ ಬಡಿಸುವ ವಿಧಾನದ ಮೂಲಕ ಮಾತ್ರ ಅಳೆಯುವುದು ಸರಿಯಲ್ಲ. 'ಶುಚಿತ್ವದ ಮಾನದಂಡಗಳು ಪಾಲನೆಯಾಗಿಲ್ಲ ಎಂದು ಭಾವಿಸಲು ನಿಮಗೆ ಏನು ಕಾರಣ? ಇದು ಸಾಂಸ್ಕೃತಿಕ ಅನಕ್ಷರತೆ ಅಥವಾ ಬುದ್ಧಿವಂತಿಕೆಯ ಕೊರತೆಯನ್ನು ತೋರಿಸುತ್ತದೆ. ಅರ್ಥವಾಗದ ಆಹಾರ ಸಂಸ್ಕೃತಿಯನ್ನು ಲೇವಡಿ ಮಾಡುವುದು ಬೌದ್ಧಿಕ ಬಡತನದ ಸಂಕೇತ' ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ರಾಗಿ ಮುದ್ದೆ ಕೇವಲ ಆಹಾರವಲ್ಲ, ಅದು ಕನ್ನಡಿಗರ ಭಾವನೆ ಮತ್ತು ಆರೋಗ್ಯದ ಸಂಕೇತ. ಆಧುನಿಕತೆಯ ಹೆಸರಿನಲ್ಲಿ ಸ್ಥಳೀಯ ಆಹಾರ ಕ್ರಮಗಳನ್ನು ಹೀಯಾಳಿಸುವ ಪ್ರವೃತ್ತಿಗೆ ಜಾಲತಾಣಗಳಲ್ಲಿ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಕಡಿಮೆ ಬೆಲೆಗೆ ಹೊಟ್ಟೆ ತುಂಬಾ ಊಟ:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಪಕ್ಕದಲ್ಲಿಯೇ ಇರುವ ಗಾಂಧಿ ನಗರದಲ್ಲಿ ಮುದ್ದೆ ಮಾದಪ್ಪ ಮೆಸ್‌ನಲ್ಲಿ ಭರ್ಜರಿಯಾಗಿ ಹೊಟ್ಟೆ ತುಂಬಾ ಮುದ್ದೆ ಊಟವನ್ನು ಕೊಡಲಾಗುತ್ತದೆ. ಅದೂ ಕೂಡ ಮೆಜೆಸ್ಟಿಕ್‌ನಂತಹ ದುಬಾರಿ ಪ್ರದೇಶದಲ್ಲಿ 120 ರೂ.ಗೆ ಹೊಟ್ಟೆ ತುಂಬಾ ಊಟ ಕೊಡುವ ಅತೀ ಕಡಿಮೆ ಹೋಟೆಲ್‌ಗಳಲ್ಲಿ ಇದೂ ಒಂದು. ಮುದ್ದೆ ಮಾದಪ್ಪ ಮೆಸ್ ಅನ್ನು ದಕ್ಷಿಣ ಕರ್ನಾಟಕದ ಬಹುತೇಕ ಜನರು ಅದರಲ್ಲಿಯೂ ಹಳೆ ಮೈಸೂರು ಭಾಗದ ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಹೀಗಾಗಿ, ಮಾದಪ್ಪನ ಮುದ್ದೆ ಊಟವನ್ನು ಉಂಡವರು ಬಯಿಂದ ಬಾಯಿಗೆ ಹರಡಿಸಿ ಹೊಟ್ಟೆ ತುಂಬಾ ಮುದ್ದೆ ಊಟ ಮಾಡಬೇಕಾ ಹಾಗಾದರೆ ಮಾದಪ್ಪನ ಮೆಸ್‌ಗೆ ಹೋಗಿ ಎಂದು ಹೇಳಿದವರ ಬಾಯಿಂದಲೇ ಪ್ರಸಿದ್ಧಿಗೆ ಬಂದಿದೆ.
ಓ..ಬ್… ಎನ್ನಿಸದೇ ಕಳಿಸಲ್ಲ ಮುದ್ದೆ ಮಾದಪ್ಪ ಮೆಸ್
ನಾರ್ತ್ ಇಂಡಿಯಾ, ಉತ್ತರ ಕರ್ನಾಟಕ, ಇಡ್ಲಿ-ವಡೆ, ಅನ್ನ ಸಾಂಬರ್‌ಗಳ ನಡುವೆ ಪಕ್ಕಾ ನಾಟಿ ಶೈಲಿಯ ಬಿಸಿ ಬಿಸಿ ರಾಗಿ ಮುದ್ದೆ ಜೊತೆಗೆ ಉಪ್ಸಾರು, ಬಸ್ಸಾರು, ಮೊಸಪ್ಪು ರೀತಿ ಸಾಂಬರ್‌ಗಳನ್ನು ಬಡಿಸುತ್ತಾರೆ. ಕಹಿಯಾದರೂ ಆರೋಗ್ಯಕ್ಕೆ ಉತ್ತಮವಾದ ಹುಳಿ ಉಪ್ಪಿನಕಾಯಿ ಜೊತೆಗೊಂದು ಹೋಮ್ ಮೇಡ್ ಹಪ್ಪಳವನ್ನೂ, ಅನ್ನ-ಸಾಂಬರ್ ಹಾಗೂ ಮೇಲೊಂದು ಗ್ಲಾಸ್ ಮಜ್ಜಿಗೆಯನ್ನು ಕೊಟ್ಟು ಹೊಟ್ಟೆಯಲ್ಲಿ ಖಾಲಿ ಜಾಗವೇ ಉಳಿಯದಂತೆ ಮಾಡಿ ಓಬ್..., ಎನ್ನಿಸಿ ಕಳಿಸುತ್ತಾರೆ. ದಕ್ಷಿಣ ಕರ್ನಾಟಕದ ಈ ನೆಚ್ಚಿನ ಹೋಟೆಲ್‌ನಲ್ಲಿ ಮುದ್ದೆ ಬಡಿಸುವ ಶೈಲಿಯನ್ನು ಹಲವರು ಆಡಿಕೊಂಡಿದ್ದೂ ಉಂಟು. ಕಾರಣ ಇಲ್ಲಿ ಬಿಸಿ ಬಿಸಿ ಮುದ್ದೆಯ ದೊಡ್ಡ ಉಂಡೆಯನ್ನು ತಟ್ಟೆಯಲ್ಲಿ ಹಾಕಿಕೊಂಡು ಬಂದು ಊಟಕ್ಕೆ ತಟ್ಟೆ ತೊಳೆದು ಕುಳಿತವರ ತಟ್ಟೆಗೆ ಎಷ್ಟು ಬೇಕೋ ಅಷ್ಟು ದೊಡ್ಡ ಮುದ್ದೆಯನ್ನು ಮುರಿದು ಉಂಡೆ ಮಾಡಿ ತಟ್ಟೆಗೆ ಹಾಕುತ್ತಾರೆ. ಇದನ್ನು ಅಶುಚಿ ಎಂದು ಹೇಳಿದವರಿಗೆ ನಮ್ಮ ಸಂಸ್ಕೃತಿಯ ಪಾಠವನ್ನು ಕಾರ್ತಿಕ್ ರೆಡ್ಡಿ ಮಾಡಿದ್ದಾರೆ.


