Gruha Lakshmi scheme payment delay ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ವಿಳಂಬ ಕುರಿತು ತೀವ್ರ ಚರ್ಚೆ ನಡೆಯಿತು. ಮಾಹಿತಿ ಕೊರತೆಯಿಂದ ಹಣ ಸಂದಾಯವಾಗಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತಪ್ಪೊಪ್ಪಿಕೊಂಡರೆ, ಸರ್ಕಾರ ದಿವಾಳಿಯಾಗಿದೆ ಎಂದು ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದವು.

ವಿಧಾಸಭೆ (ಡಿ.17): ವಿಧಾನಸಭೆಯಲ್ಲಿ ಇಂದು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಕುರಿತು ಭಾರೀ ಚರ್ಚೆ ನಡೆಯಿತು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000 ರೂಪಾಯಿಗಳನ್ನು ಡಿಬಿಟಿ ಮೂಲಕ ತಲುಪಿಸುತ್ತಿದ್ದೇವೆ. ರಾಜ್ಯದ ಈ ಮಾದರಿಯನ್ನು ನೋಡಿ ಬೇರೆ ರಾಜ್ಯಗಳೂ ಇಂತಹ ಯೋಜನೆ ಜಾರಿಗೆ ತಂದಿವೆ. ಈವರೆಗೆ 1.26 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಒಟ್ಟು 46 ಸಾವಿರ ಕೋಟಿ ರೂಪಾಯಿ ನೀಡಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಾಹಿತಿ ನೀಡಿದರು. ಆದರೆ, ಎರಡು ತಿಂಗಳ ಹಣ ಬಾಕಿ ಇರುವ ವಿಚಾರವಾಗಿ ವಿಪಕ್ಷಗಳು ಪ್ರಶ್ನಿಸಿದಾಗ, 'ಸದನಕ್ಕೆ ತಪ್ಪು ಮಾಹಿತಿ ನೀಡುವ ಉದ್ದೇಶ ನನಗಿರಲಿಲ್ಲ. ಮಾಹಿತಿ ಪಡೆಯುವಲ್ಲಿ ವ್ಯತ್ಯಾಸವಾಗಿದೆ, ಹಣ ಇನ್ನೂ ಸಂದಾಯವಾಗಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ' ಎಂದು ಸಚಿವರು ತಪ್ಪೊಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದರು.

'ಸರ್ಕಾರ ದಿವಾಳಿಯಾಗಿದೆ': ಶಾಸಕ ಸುನಿಲ್ ಕುಮಾರ್ ವಾಗ್ದಾಳಿ

ಸಚಿವರ ಸಮರ್ಥನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್, 'ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನೇರವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಳ್ಳಲಿ. ಪದೇ ಪದೇ ತಪ್ಪು ಮಾಹಿತಿ ನೀಡಿ ಜನರನ್ನು ಹಾದಿ ತಪ್ಪಿಸುವುದು ಬೇಡ. ಎರಡು ತಿಂಗಳ ಹಣ ಹಾಕದೆ ಈಗ ಸದನಕ್ಕೆ ಬಂದು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಹಣ ಹಾಕಿದ್ದೇವೆ ಎಂದು ಹೇಳುವ ಬದಲು, ಇಲ್ಲ ಎಂದು ಒಪ್ಪಿಕೊಳ್ಳುವ ಧೈರ್ಯ ತೋರಲಿ' ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಸಚಿವ ಬೈರತಿ ಸುರೇಶ್ ಮಧ್ಯಪ್ರವೇಶಿಸಿ, 'ರಾಜ್ಯದ ಜನರಿಗೆ ಬಿಜೆಪಿ ಒಂದು ರೂಪಾಯಿ ಕೊಡುವ ಕೆಪಾಸಿಟಿ ಇಲ್ಲ' ಎಂದು ಹೇಳಿದ್ದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು.

ಕೇಂದ್ರದ ಬಾಕಿ ಹಣ ನೆನಪಿಸಿದ ಡಿಸಿಎಂ

ಗದ್ದಲದ ನಡುವೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ಎರಡು ತಿಂಗಳ ಹಣ ವಿಳಂಬವಾಗಿರುವುದು ನಿಜ, ಆದರೆ ಇದು ಉದ್ದೇಶಪೂರ್ವಕವಲ್ಲ, ಕೇವಲ ಮಾಹಿತಿ ಕೊರತೆ. ಸುನಿಲ್ ಕುಮಾರ್ ಅವರು ಸರ್ಕಾರ ದಿವಾಳಿಯಾಗಿದೆ ಎನ್ನುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವೇ ರಾಜ್ಯಕ್ಕೆ ಬರಬೇಕಾದ ಕೋಟ್ಯಂತರ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಹಾಗಂದ ಮಾತ್ರಕ್ಕೆ ಕೇಂದ್ರ ಸರ್ಕಾರ ದಿವಾಳಿಯಾಗಿದೆ ಎಂದು ನಾವು ಹೇಳಲು ಸಾಧ್ಯವೇ?' ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಚುನಾವಣೆಗೆ ಹೋಗೋಣ ಎಂದು ಸುನಿಲ್ ಸವಾಲು

ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತು. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವಿಪಕ್ಷ ಶಾಸಕರ ನಡುವೆ ವಾಗ್ವಾದ ನಡೆದಾಗ, ಆವೇಶಕ್ಕೊಳಗಾದ ಸುನಿಲ್ ಕುಮಾರ್, 'ಇಷ್ಟೊಂದು ಗೊಂದಲಗಳಿದ್ದರೆ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ. ಆಗ ಯಾರು ಗೆಲ್ಲುತ್ತಾರೆ ಎಂಬುದು ಜನರೇ ತೀರ್ಮಾನಿಸುತ್ತಾರೆ' ಎಂದು ಸವಾಲು ಹಾಕಿದರು.

ಸಚಿವ ಪ್ರಿಯಾಂಕ್ ಖರ್ಗೆಗೆ ಸ್ಪೀಕರ್ ಖಾದರ್ ತರಾಟೆ

ಬಿಜೆಪಿ ಹಿರಿಯ ಶಾಸಕ ಸಿಸಿ ಪಾಟೀಲ್ ಅವರು ಪ್ರಿಯಾಂಕ್ ಖರ್ಗೆ ಅವರ ಪದೇ ಪದೇ ಮಧ್ಯಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. 'ಸಚಿವರನ್ನು ನಿಮಗಿಂತ (ಸ್ಪೀಕರ್) ಮೇಲಿನ ಸ್ಥಾನದಲ್ಲಿ ಕೂರಿಸಿ' ಎಂದು ಲೇವಡಿ ಮಾಡಿದರು. ಇದಕ್ಕೆ ಪ್ರಿಯಾಂಕ್ ಖರ್ಗೆ 'ನನ್ನ ಮೇಲೆ ಜನರ ಆಶೀರ್ವಾದವಿದೆ' ಎಂದು ಉತ್ತರಿಸಿದಾಗ, ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, 'ಸಚಿವರೇ, ನೀವು ಪದೇ ಪದೇ ಯಾಕೆ ಎದ್ದು ನಿಲ್ಲುತ್ತೀರಿ? ದಯವಿಟ್ಟು ಕುಳಿತುಕೊಳ್ಳಿ' ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ಸೂಚಿಸಿ ಸದನವನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.