ಮೆಟ್ರೋದಲ್ಲಿ ಊಟ ಮಾಡಿದ್ದಕ್ಕೆ ಮಹಿಳಾ ಪ್ರಯಾಣಿಕರಿಗೆ ₹೫೦೦ ದಂಡ ವಿಧಿಸಲಾಗಿದೆ. ಏಪ್ರಿಲ್ ೨೬ರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮೆಟ್ರೋದಲ್ಲಿ ಆಹಾರ ಸೇವನೆ ನಿಷಿದ್ಧ. ಸ್ವಚ್ಛತೆ ಕಾಪಾಡಲು ಬಿಎಂಆರ್‌ಸಿಎಲ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಿಯಮ ಪಾಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಬೆಂಗಳೂರು (ಏ.28): ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಇಂದು ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ₹500 ದಂಡ ವಿಧಿಸಲಾಗಿದೆ. ಏಪ್ರಿಲ್ 26ರಂದು ಮೆಟ್ರೋದಲ್ಲಿ ಪ್ರಯಾಣಿಸುವಾಗ ಅವರು ಊಟ ಮಾಡುವ ಮೂಲಕ ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದರು. ಈ ಉಲ್ಲಂಘನೆಯನ್ನು ಸಹ ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದರು. ಇದೀಗ ಅವರನ್ನು ಗುರುತಿಸಿ ದಂಡ ವಿಧಿಸಲಾಗಿದೆ.

ಇಂದು ಬೆಳಿಗ್ಗೆ ನೈಸ್ ರಸ್ತೆ ಜಂಕ್ಷನ್‌ನಲ್ಲಿರುವ ಮಾದವರ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದಾಗ ಜಾಗರೂಕ ಭದ್ರತಾ ಸಿಬ್ಬಂದಿ ಅವರಿಗೆ ದಂಡ ವಿಧಿಸಿದ್ದಾರೆ. ಬೆಂಗಳೂರು ಮೆಟ್ರೋ ನಿಯಮಗಳಲ್ಲಿ ವಿವರಿಸಿದಂತೆ ಮೆಟ್ರೋ ಆವರಣದೊಳಗೆ ಮತ್ತು ರೈಲುಗಳಲ್ಲಿ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನೀತಿಯು ಕಸ ಹಾಕುವುದನ್ನು ತಡೆಗಟ್ಟುವುದು, ನೈರ್ಮಲ್ಯವನ್ನು ಕಾಪಾಡುವುದು ಮತ್ತು ಪ್ರಯಾಣಿಸುವ ಪ್ರತಿಯೊಬ್ಬರಿಗೂ ಆನಂದದಾಯಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಎಲ್ಲಾ ಪ್ರಯಾಣಿಕರು ಈ ನಿಯಮಗಳನ್ನು ಪಾಲಿಸಲು ಮತ್ತು ಮೆಟ್ರೋ ವ್ಯವಸ್ಥೆಯ ಸ್ವಚ್ಛತೆಯನ್ನು ಎತ್ತಿಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡಲು BMRCL ಪ್ರೋತ್ಸಾಹಿಸುತ್ತದೆ. ಬೆಂಗಳೂರು ಮೆಟ್ರೋ ಒಂದು ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಸ್ಥಳವಾಗಿದೆ. ಎಲ್ಲಾ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ಅನುಭವ ನೀಡಲು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಮೆಟ್ರೋ ನಿಗಮವು ತಿಳಿಸಿದೆ. ಪ್ರಯಾಣಿಕರು ಮೆಟ್ರೋದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಪರಿಸರವನ್ನು ಕಾಪಾಡಬೇಕು. ಈ ಕಠಿಣ ಕ್ರಮವು ಎಲ್ಲಾ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವುದಕ್ಕೆ ಮಾತ್ರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ತಿಳಿಸಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣದಲ್ಲಿ ನಿಯಮ ಉಲ್ಲಂಘಿಸಿದ 27 ಸಾವಿರ ಪ್ರಯಾಣಿಕರು! ಇವರ ಕಥೆ ಏನಾಯ್ತು?

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹೇಳಿರುವಂತೆ: 'ನಮ್ಮ ಮೆಟ್ರೋ ಎಲ್ಲರಿಗೂ ಸೇರಿದ ಸಾರ್ವಜನಿಕ ಸ್ಥಳವಾಗಿದೆ. ಪ್ರತಿಯೊಬ್ಬ ಪ್ರಯಾಣಿಕರು ಕೂಡ ಇಲ್ಲಿನ ನಿಯಮಗಳನ್ನು ಪಾಲಿಸಿ ಸ್ವಚ್ಛತೆಯನ್ನು ಉಳಿಸಲು ಸಹಕರಿಸಬೇಕು. ಇದು ಎಲ್ಲರ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕೆ ಸಹಾಯಮಾಡುತ್ತದೆ. BMRCL ಸಾರ್ವಜನಿಕರನ್ನು ನಿಯಮ ಪಾಲನೆ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ.

ಗುಟ್ಕಾ ಬ್ಯಾನ್ ಮಾಡಿದ್ದ ನಮ್ಮ ಮೆಟ್ರೋ: ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಕಣ ಕಣದಲ್ಲಿಯೂ ಕೇಸರಿ ಎಂದು ಜಾಹೀರಾತು ಪ್ರದರ್ಶನ ಮಾಡುವ ವಿಮಲ್ ಪಾನ್ ಮಸಾಲಾವನ್ನು ಬಾಯಿಗೆ ಹಾಕಿಕೊಂಡು ಜಗಿಯುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೆಟ್ರೋ ಆವರಣ ಮತ್ತು ಮೆಟ್ರೋ ರೈಲಿನ ಒಳಗೆ ಅಗಿಯಬಹುದಾದ ತಂಬಾಕು ಆಧರಿತ ಉತ್ಪನ್ನಗಳನ್ನು (ಗುಟ್ಕಾ ಅಥವಾ ಪಾನ್ ಮಸಾಲಾದಂತಹ ವಸ್ತುಗಳು) ಸೇವಿಸುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ದಂಡ ವಿಧಿಸುವ ನಿರ್ಧಾರ ಕೈಗೊಂಡಿದೆ. ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು ಗುಟ್ಕಾ ಮತ್ತು ಪಾನ್ ಮಸಾಲಾದಂತಹ ತಂಬಾಕು ಆಧರಿತ ಅಗಿಯಬಹುದಾದ ಉತ್ಪನ್ನಗಳನ್ನು ಜಗಿದು ಉಗುಳುವ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮತ್ತು ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು ತಪ್ಪಿಸುವುದಕ್ಕಾಗಿ, ಜನದಟ್ಟಣೆ ಇಲ್ಲದ ಸಮಯಗಳಲ್ಲಿ ಗಸ್ತು ತಿರುಗುವುದನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಸಮೋಸಾ ತಿಂದು ಸೀಟಿನಡಿ ಕಸ ಎಸೆದ ಮಂದಿ, ನಿಯಮ ಇರೋದು ಯಾರಿಗಪ್ಪಾ!