ಒಂದೆಡೆ ರಾಜ್ಯ ಸರ್ಕಾರದಿಂದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಇನ್ನೊಂದೆಡೆ ಮೆಟ್ರೋಗೆ 2-3 ಪಟ್ಟು ಹಣ ಹೆಚ್ಚಳ... ಇವುಗಳ ನಡುವೆ ಸಿಲುಕಿ ಒದ್ದಾಡುತ್ತಿರುವ ಪುರುಷರ ಸೋಷಿಯಲ್ ಮೀಡಿಯಾದ ಪೋಸ್ಟ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಏನದು?
ಕರ್ನಾಟಕದಲ್ಲಿ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣದ 'ಶಕ್ತಿ' ಸ್ಕೀಮ್ನಿಂದ ಸಹಸ್ರಾರು ಮಹಿಳೆಯರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಡಿಮೆ ಆದಾಯ ಇರುವ ಸ್ತ್ರೀಯರಿಗೆ ಇದೊಂದು ವರದಾನವಾಗಿದೆ. ಆದರೆ ಕೆಲವು ಕಡೆಗಳಲ್ಲಿ ಅನವಶ್ಯಕವಾಗಿ ಉಚಿತವಾಗಿ ಪ್ರಯಾಣಿಸಬಹುದು ಎನ್ನುವ ಏಕೈಕ ಕಾರಣಕ್ಕೆ ಮಹಿಳೆಯರು ಸೃಷ್ಟಿಸಿರೋ ಅವಾಂತರಗಳು ಕೂಡ ಅಷ್ಟಿಷ್ಟಲ್ಲ. ಕೆಲವರಂತೂ ಅತಿರೇಕಕ್ಕೆ ಹೋಗಿ ಮಹಿಳೆಯರ ಕುಲಕ್ಕೇ ಅವಮಾನ ಆಗುವಂಥ ಮೀಮ್ಸ್ ಬರುವ ರೀತಿಯಲ್ಲಿ ವರ್ತಿಸಿದ್ದಾರೆ, ಇನ್ನೂ ವರ್ತಿಸುತ್ತಲೇ ಇದ್ದಾರೆ. ಉಚಿತವಾಗಿ ಕೊಟ್ಟರೆ ಇವರು ವಿಷ ಬೇಕಾದ್ರೂ ಸೇವಿಸ್ತಾರೆ ಎನ್ನುವಂಥ ಅಸಭ್ಯ ಪ್ರತಿಕ್ರಿಯೆಗಳು ಬರುವ ರೀತಿಯಲ್ಲಿ ಕೆಲವು ಮಹಿಳೆಯರು ವರ್ತಿಸುತ್ತಿರುವುದು ಕೂಡ ನೋವಿನ ಸಂಗತಿಯೇ. ಉತ್ತಮ ಆದಾಯ ಇರುವವರೂ ಬಸ್ಗಳ ಈ ಪ್ರಯೋಜನ ಪಡೆಯುತ್ತಿರುವುದು ಒಂದೆಡೆಯಾದರೆ, ಈ ಗ್ಯಾರೆಂಟಿಯಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ ಸ್ಥಿತಿ ಯಾವ ಮಟ್ಟಿಗೆ ಬಂದಿದೆ, ಅಲ್ಲಿಯ ಉದ್ಯೋಗಿಗಳ ಸ್ಥಿತಿ ಏನಾಗಿದೆ, ಸರ್ಕಾರದ ಬೊಕ್ಕಸಕ್ಕೆ ಏನಾಗಿದೆ ಎನ್ನುವುದು ಕೂಡ ಬಹಿರಂಗ ಸತ್ಯವಾಗಿದೆ.
ಅದೇ ಇನ್ನೊಂದೆಡೆ, ಬಸ್ ಪ್ರಯಾಣ ಉಚಿತ ಕೊಟ್ಟು, ಮೆಟ್ರೋ ಪ್ರಯಾಣಿಕರ ಮೇಲೆ ಬರೆ ಹಾಕಿರುವುದು ಕೂಡ ಅತಿದೊಡ್ಡ ದುರಂತವಾಗಿದೆ. ಮೆಟ್ರೋ ಶುರು ಮಾಡಿರುವ ಉದ್ದೇಶವೇ ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೆ. ಆದರೆ ಇದೀಗ ಮೆಟ್ರೋದಲ್ಲಿ ಡಬಲ್ ರೇಟ್ ಆಗಿರುವ ಕಾರಣ, ಅನಿವಾರ್ಯವಾಗಿ ಜನರು ಬೇರೆ ಬೇರೆ ರೀತಿಯಲ್ಲಿ ಪ್ರಯಾಣಿಸುವ ಸ್ಥಿತಿ ಬಂದಿದೆ. ಇದನ್ನೇ ಪ್ರಶ್ನಿಸಿ ಸೋಷಿಯಲ್ ಮೀಡಿಯಾದಲ್ಲಿ ಟೆಕ್ಕಿಯೊಬ್ಬರು ಬರೆದಿರುವ ಬರಹ ಸಕತ್ ವೈರಲ್ ಆಗುತ್ತಿದೆ. ಮುಂದಿನ ವರ್ಷ ಜೂನ್ ತಿಂಗಳಲ್ಲಿ ಆರಂಭಿಸಬಹುದು ಎನ್ನಲಾದ ಮೆಟ್ರೋ ನೀಲಿ ಲೈನ್ ಕುರಿತು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ. ಐಟಿ ಪ್ರದೇಶಗಳೇ ಹೆಚ್ಚಿರುವ ಈ ಲೈನ್ನಲ್ಲಿ, ಮೆಟ್ರೋ ದರ ಡಬಲ್ ಆಗಿರುವ ಕಾರಣದಿಂದಾಗಿ ಮಹಿಳೆಯರು ಪ್ರಯಾಣಿಸುವುದು ಬಲುಕಷ್ಟ ಎನ್ನುವುದು ಅವರ ಅಭಿಪ್ರಾಯ. ಈ ಭಾಗದಲ್ಲಿ ಐಟಿ ಉದ್ಯೋಗಿಗಳಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಆದ್ದರಿಂದ ಈ ಪ್ರಶ್ನೆಯೊಂದನ್ನು ಅವರು ಮುಂದಿಟ್ಟಿದ್ದಾರೆ. ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವ ಶಕ್ತಿ ಯೋಜನೆಯು ಜಾರಿಗೆ ಬಂದ ಎರಡು ವರ್ಷಗಳಲ್ಲಿ 500 ಕೋಟಿ ಟಿಕೆಟ್‌ಗಳನ್ನು ತಲುಪುತ್ತಿದ್ದಂತೆ, ಈ ಯೋಜನೆಯಿಂದ ಯಾರು ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದರ ಕುರಿತು ಅವಿನಾಶ್ ಎನ್ನುವವರು ಹಂಚಿಕೊಂಡಿರುವ ಪೋಸ್ಟ್ ಇದಾಗಿದೆ.
ಇದೀಗ ಚರ್ಚೆಗೆ ಗ್ರಾಸವಾಗಿದೆ. ಅವರು ಹೇಳಿರುವ ಪ್ರಕಾರ, "ಐಟಿ ಉದ್ಯೋಗಗಳಲ್ಲಿ ಕೆಲಸ ಮಾಡುವ ಬಹಳಷ್ಟು ಮಹಿಳೆಯರು ಉಚಿತ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇವರಿಗೆ ಸಂಬಳ ಸಿಕ್ಕಾಪಟ್ಟೆ ಇದ್ದರೂ ಉಚಿತ ಎನ್ನುವ ಕಾರಣಕ್ಕೆ ಬಸ್ನಲ್ಲಿ ಪ್ರಯಾಣಿಸುತ್ತಾರೆ. ನಾನು ನನ್ನ ಸ್ನೇಹಿತನನ್ನು ಕೇಳಿದಾಗ, ಅವರು ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರು ನಡುವೆ ಪ್ರಯಾಣಿಸುವಾಗ ತಿಂಗಳಿಗೆ 1,300 ರೂಪಾಯಿ ಉಳಿಸುತ್ತಿದ್ದಾರಂತೆ. ಹೀಗಿದ್ದರೆ ಇಂಥವರು ಡಬಲ್ ರೇಟ್ ಆಗಿರೋ ಮೆಟ್ರೋಗೆ ಬರುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯೆ ಕೊಟ್ಟಿದ್ದು, ಮೆಟ್ರೋದ ದರ ಈ ಪರಿ ಏರಿಸಿರುವಾಗ, ಬಸ್ ಅಲ್ಲದಿದ್ದರೂ ಕ್ಯಾಬ್ ಮಾಡಿ ಬಂದರೆ ಕಡಿಮೆ ರೇಟ್ ಆಗುತ್ತಿದೆ. ಇನ್ನು ಮೆಟ್ರೋ ಯಾಕೆ ಹತ್ತಬೇಕು ಎಂದು ಪ್ರಶ್ನಿಸಿದ್ದಾರೆ. 2-3 ಮಂದಿ ಕ್ಯಾಬ್ ಮಾಡಿ ಬಂದರೆ ಮನೆಯ ಬಾಗಿಲಿನಿಂದಲೇ ಮೆಟ್ರೋಗಿಂತಲೂ ಕಡಿಮೆ ರೇಟ್ ಕೊಟ್ಟು ಹೋಗಬಹುದಾಗಿದೆ ಎನ್ನುವುದು ಅವರ ಮಾತು.
“ಯಾರಾದರೂ ಹಳದಿ ಮತ್ತು ನೀಲಿ ಮಾರ್ಗಗಳನ್ನು ಬಳಸಿಕೊಂಡು ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಿದರೆ, ಅದು ₹100 ರಿಂದ ₹120 ವೆಚ್ಚವಾಗಬಹುದು. ಪ್ರಯಾಣಕ್ಕಾಗಿ ದಿನಕ್ಕೆ ₹200 ರಿಂದ ₹250 ಖರ್ಚು ಮಾಡುವವರು ಯಾರು?” ಎಂದು ಬಳಕೆದಾರೊಬ್ಬರು ಪ್ರಶ್ನಿಸಿದ್ದಾರೆ. ಆದರೆ ನಿಜವಾಗಿಯೂ ಮೆಟ್ರೊ ರೇಟ್ ಹೆಚ್ಚಾದರೂ, ಬೇರೆ ಮಾರ್ಗವಿಲ್ಲದೇ ಪ್ರಯಾಣಿಕರು ಸರ್ಕಾರವನ್ನು ಶಪಿಸುತ್ತಲೇ ಅನಿವಾರ್ಯವಾಗಿ ಅದರಲ್ಲಿ ಹೋಗುತ್ತಲೇ ಇದ್ದಾರೆ. ದುಡಿಮೆ ಮಾಡುವವರಿಗೆ ಸಮಯ ಅತ್ಯಂತ ಮಹತ್ವದ್ದಾಗಿರುವ ಕಾರಣ, ಮೆಟ್ರೋದ ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಕಡಿಮೆ ಸಂಬಳ ಪಡೆಯುವವರು ಮೆಟ್ರೋಗೆ ಈ ಪರಿಯಲ್ಲಿ ಹಣವನ್ನು ನೀಡಲು ಸಾಧ್ಯವಾಗದೇ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
