ಬೆಂಗಳೂರಿನ ಮಲ್ಲೇಶ್ವರದ ಕೆನರಾ ಬ್ಯಾಂಕ್‌ನ ಸೀನಿಯರ್ ಮ್ಯಾನೇಜರ್, 21 ಗ್ರಾಹಕರಿಗೆ ನಂಬಿಕೆ ದ್ರೋಹ ಬಗೆದು ಅವರ ಹೆಸರಿನಲ್ಲಿ 3 ಕೋಟಿ ರೂ.ಗೂ ಅಧಿಕ ಸಾಲ ಪಡೆದು ವಂಚಿಸಿದ್ದಾನೆ. ಗ್ರಾಹಕರ ಸಹಿಗಳನ್ನು ದುರುಪಯೋಗಪಡಿಸಿಕೊಂಡು, ಯಾವುದೇ ಚಿನ್ನ ಅಡವಿಡದೆ ಹಣ ಪಡೆದು ಆರೋಪಿ ಪರಾರಿಯಾಗಿದ್ದಾರೆ.

ಬೆಂಗಳೂರು (ಡಿ.29): ರಾಷ್ಟ್ರೀಕೃತ ಬ್ಯಾಂಕ್ ಅಂದಮೇಲೆ ಅಲ್ಲಿ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇರುತ್ತದೆ. ಆದರೆ, ಅದೇ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಗ್ರಾಹಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಬರೋಬ್ಬರಿ 3 ಕೋಟಿ ರೂ. ವಂಚಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬೆಳಕಿಗೆ ಬಂದಿದೆ.

ನಂಬಿಸಿ ಕುತ್ತಿಗೆ ಕುಯ್ದ ಮ್ಯಾನೇಜರ್:

ಮಲ್ಲೇಶ್ವರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಘು ಎಂಬಾತನೇ ಈ ಬೃಹತ್ ವಂಚನೆಯ ಕಿಂಗ್‌ಪಿನ್. ಈತ ಸುಮಾರು 21 ಮಂದಿ ಗ್ರಾಹಕರ ಹೆಸರಿನಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲವನ್ನು ಪಡೆದು ಇದೀಗ ಎಸ್ಕೇಪ್ ಆಗಿದ್ದಾನೆ.

ವಂಚನೆಯ ಸ್ಕೆಚ್ ಹೇಗಿತ್ತು?

ಮ್ಯಾನೇಜರ್ ರಘು ಗ್ರಾಹಕರನ್ನು ಬಹಳ ಚಾಣಾಕ್ಷತನದಿಂದ ಸಂಪರ್ಕಿಸುತ್ತಿದ್ದ. 'ನನ್ನ ಮನೆಯಲ್ಲಿ ತುಂಬಾ ಕಷ್ಟವಿದೆ, ಫ್ಯಾಮಿಲಿ ಸಮಸ್ಯೆಯಾಗಿದೆ. ದಯವಿಟ್ಟು ನಿಮ್ಮ ಹೆಸರಿನಲ್ಲಿ ಸಾಲ ಪಡೆಯಲು ಸಹಕರಿಸಿ' ಎಂದು ಗೋಗರೆಯುತ್ತಿದ್ದನು. 'ನನ್ನ ಬಳಿ ಚಿನ್ನವಿದೆ, ಅದನ್ನು ಅಡವಿಟ್ಟು ಸಾಲ ಪಡೆಯುತ್ತೇನೆ. ಆದರೆ ನನ್ನದೇ ಬ್ಯಾಂಕ್ ಆಗಿರುವುದರಿಂದ ನನ್ನ ಹೆಸರಲ್ಲಿ ಪಡೆಯಲು ತಾಂತ್ರಿಕ ತೊಂದರೆಯಿದೆ, ಹೀಗಾಗಿ ನಿಮ್ಮ ಹೆಸರಲ್ಲಿ ಲೋನ್ ಮಾಡಿಕೊಡಿ' ಎಂದು ನಂಬಿಸುತ್ತಿದ್ದನು.

ಬ್ಯಾಂಕ್ ಮ್ಯಾನೇಜರ್ ಎಂಬ ಗೌರವದಿಂದ ಹಾಗೂ ಆತನ ನಟನೆಯನ್ನು ನಂಬಿದ ಗ್ರಾಹಕರು ಸಹಿಗಳನ್ನು ಹಾಕಿಕೊಟ್ಟಿದ್ದಾರೆ. ಆದರೆ, ರಘು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಯಾವುದೇ ಚಿನ್ನವನ್ನು ಇಡದೆಯೇ ಕೇವಲ ಗ್ರಾಹಕರ ಸಹಿಗಳನ್ನು ಬಳಸಿ ಹಣವನ್ನು ಗುಳುಂ ಮಾಡಿದ್ದಾನೆ.

ಠಾಣೆ ಮೆಟ್ಟಿಲೇರಿದ ಪ್ರಕರಣ:

ದಿನ ಕಳೆದಂತೆ ಸಾಲದ ಕಂತು ಪಾವತಿಯಾಗದಿದ್ದಾಗ ಮತ್ತು ಬ್ಯಾಂಕ್ ಆಡಿಟ್ ಸಂದರ್ಭದಲ್ಲಿ ಮ್ಯಾನೇಜರ್ ಮಾಡಿರುವ ಈ ನಕಲಿ ವ್ಯವಹಾರಗಳು ಬಯಲಿಗೆ ಬಂದಿವೆ. ತಾನು ಸಿಕ್ಕಿಬೀಳುವುದು ಖಚಿತವಾಗುತ್ತಿದ್ದಂತೆ ಮ್ಯಾನೇಜರ್ ರಘು ನಾಪತ್ತೆಯಾಗಿದ್ದಾನೆ. ವಂಚನೆಗೆ ಒಳಗಾದ ಗ್ರಾಹಕರು ಇದೀಗ ಕಂಗಾಲಾಗಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಮ್ಯಾನೇಜರ್ ಪತ್ತೆಗೆ ಬಲೆ ಬೀಸಿದ್ದಾರೆ. ಬ್ಯಾಂಕ್ ಅಧಿಕಾರಿಗಳೇ ಈ ರೀತಿ ವಂಚನೆಗೆ ಇಳಿದರೆ ಗ್ರಾಹಕರು ಯಾರನ್ನು ನಂಬಬೇಕು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.