Asianet Suvarna News Asianet Suvarna News

ಲಸಿಕೆ ನೀಡಿಕೆಯಲ್ಲಿ ಬೆಂಗ್ಳೂರು ದೇಶಕ್ಕೆ ನಂ.1

*  ಬೃಹತ್‌ ಲಸಿಕಾ ಅಭಿಯಾನಕ್ಕೆ ಭಾರೀ ಸ್ಪಂದನೆ
*  ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 4.79 ಲಕ್ಷ ಮಂದಿಗೆ ಲಸಿಕೆ
*  3.76 ಲಕ್ಷ ಕೋವಿಶೀಲ್ಡ್‌, 29 ಸಾವಿರ ಮಂದಿಗೆ ಕೋವ್ಯಾಕ್ಸಿನ್‌ ವಿತರಣೆ
 

Bengaluru is No. 1 in Covid Vaccination in India grg
Author
Bengaluru, First Published Sep 18, 2021, 7:15 AM IST

ಬೆಂಗಳೂರು(ಸೆ.18): ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್‌ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾ ವಾಪ್ತಿಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನ 4.79 ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ 1886 ಸರ್ಕಾರಿ ಲಸಿಕಾ ಕೇಂದ್ರಗಳು ಮತ್ತು 301 ಖಾಸಗಿ ಲಸಿಕಾ ಕೇಂದ್ರಗಳು ಸೇರಿದಂತೆ ಒಟ್ಟು 2187 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಒಂದೇ ದಿನ 4,08,259 ಮಂದಿಗೆ ಲಸಿಕೆ ಹಾಕಲಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 70,936 ಮಂದಿಗೆ ಲಸಿಕೆ ನೀಡಲಾಗಿದೆ.

ಲಸಿಕಾಕರಣದಲ್ಲಿ ದೇಶದ ನಗರಗಳ ಪೈಕಿ ಬಿಬಿಎಂಪಿ ಪ್ರಥಮ ಸ್ಥಾನದಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ 84,280 ಮಂದಿ ಲಸಿಕೆ ನೀಡಿರುವ ದಕ್ಷಿಣ ವಲಯ ಅತೀ ಹೆಚ್ಚು ಲಸಿಕಾಕರಣ ಮಾಡಿದ ವಲಯವಾಗಿ ಪ್ರಥಮ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ 75,874 ಮಂದಿ ಲಸಿಕೆ ಪಡೆದಿರುವ ಪಶ್ಚಿಮ ವಲಯವಿದೆ. ಕೊನೆಯ ಸ್ಥಾನದಲ್ಲಿ 22834 ಮಂದಿಗೆ ಲಸಿಕೆ ನೀಡಿರುವ ಯಲಹಂಕ ವಲಯವಿದೆ.

ಎಂಟು ವಲಯಗಳ 2187 ಲಸಿಕಾ ಕೇಂದ್ರಗಳಲ್ಲಿ 3,76,906 ಕೋವಿಶೀಲ್ಡ್‌ ಮತ್ತು 29,603 ಕೋವ್ಯಾಕ್ಸಿನ್‌ ಡೋಸ್‌ಗಳನ್ನು ನೀಡಲಾಗಿದೆ. ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 3,69,469 ಮಂದಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳಲ್ಲಿ 37,397 ಮಂದಿ ಲಸಿಕೆ ಪಡೆದಿದ್ದು, ಸ್ಪುಟ್ನಿಕ್‌ ಲಸಿಕೆಯನ್ನು 357 ಮಂದಿಗೆ ಕೊಡಲಾಗಿದೆ.

ಲಸಿಕಾ ಅಭಿಯಾನ ಅಮೆರಿಕ, ಜಪಾನ್ ಸೇರಿ 18 ದೇಶಗಳನ್ನು ಹಿಂದಿಕ್ಕಿದ ಭಾರತ!

ರಾತ್ರಿ 10ರ ತನಕ ಅಭಿಯಾನ:

ಶುಕ್ರವಾರ ಬೆಳಗ್ಗೆ 7ರಿಂದ ರಾತ್ರಿ 10 ಗಂಟೆವರೆಗೆ ಲಸಿಕಾ ಕಾರ್ಯ ಮುಂದುವರೆದಿತ್ತು. ಲಸಿಕಾ ಅಭಿಯಾನದ ಗುರಿ ತಲುಪಲು ಶನಿವಾರವೂ ಕೂಡಾ ಅಭಿಯಾನ ಮುಂದುವರೆಯಲಿದೆ. ಕಳೆದ ಅಭಿಯಾನದಲ್ಲಿ ಸಾಧಿಸಿದ ಪ್ರಗತಿಗಿಂತ ಈಬಾರಿ ಶೇ.2.5 ರಷ್ಟುಹೆಚ್ಚು ಪ್ರಗತಿ ಸಾಧಿಸಲಾಗಿದೆ. ಅಲ್ಲದೇ ಮೊದಲನೇ ಹಾಗೂ ಎರಡನೇ ಡೋಸ್‌ ಲಸಿಕೆ ಪಡೆಯದವರು ಲಸಿಕಾ ಸ್ಥಳಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಯಲಹಂಕ ಮತ್ತು ಮಲ್ಕೇಶ್ವರಂನಲ್ಲಿ ಸ್ಥಾಪಿಸಿರುವ ಬೃಹತ್‌ ಲಸಿಕಾ ಶಿಬಿರಗಳಲ್ಲಿಯೂ ಸಹ ಅಭಿಯಾನ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಿರುವ ಲಸಿಕಾ ಕೇಂದ್ರಗಳ ಮಾಹಿತಿ ಪಡೆಯಲು ವೆಬ್‌ಸೈಟ್‌: https://bit.ly/cvcdetails ಭೇಟಿ ನೀಡಬಹುದು. ಇಲ್ಲವೇ ಸಹಾಯವಾಣಿ: 1533 ಸಂಖ್ಯೆಗೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಬಿಬಿಎಂಪಿ ತಿಳಿಸಿದೆ.

ವಲಯವಾರು ಲಸಿಕೆ:

ದಕ್ಷಿಣ ವಲಯದಲ್ಲಿ 45,426 ಪುರುಷರು, 38,843 ಮಹಿಳೆಯರು ಮತ್ತು 11 ಮಂದಿ ಇತರರು ಲಸಿಕೆ ಪಡೆದಿದ್ದಾರೆ. ಪಶ್ಚಿಮ ವಲಯದಲ್ಲಿ 40,562 ಪುರುಷರು, 35,291 ಮಹಿಳೆಯರು, 20 ಇತರರು ಹಾಗೂ ಪೂರ್ವ ವಲಯದಲ್ಲಿ 36,692 ಪುರುಷರು, 31,823 ಮಹಿಳೆಯರು, 21 ಇತರರು ಲಸಿಕೆ ಪಡೆದುಕೊಂಡಿದ್ದಾರೆ.

ಬೊಮ್ಮನಹಳ್ಳಿ ವಲಯದಲ್ಲಿ 27,218 ಪುರುಷರು, 23,139 ಮಹಿಳೆಯರು, 15 ಇತರರು ಹಾಗೂ ಮಹದೇವಪುರ ವಲಯದಲ್ಲಿ 27,219 ಪುರುಷರು, 16,995 ಮಹಿಳೆಯರು, 12 ಇತರರು ಲಸಿಕೆ ಪಡೆದಿದ್ದಾರೆ. ರಾಜರಾಜೇಶ್ವರಿ ನಗರ ವಲಯದಲ್ಲಿ 17,432 ಪುರುಷರು, 17,783 ಮಹಿಳೆಯರು, 9 ಇತರರು ಲಸಿಕೆ ಪೆದುಕೊಂಡಿದ್ದಾರೆ. ದಾಸರಹಳ್ಳಿ ವಲಯದಲ್ಲಿ 13,544 ಪುರುಷರು, 11,966 ಮಹಿಳೆಯರು, 8 ಇತರರು ಮತ್ತು ಯಲಹಂಕ ವಲಯದಲ್ಲಿ 12,896 ಪುರುಷರು, 9,938 ಮಹಿಳೆಯರು ಹಾಗೂ 3 ಮಂದಿ ಇತರರು ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗೆ 2,20,989 ಪುರುಷರು ಹಾಗೂ 1,85,778 ಮಹಿಳೆಯರು ಮತ್ತು 99 ಮಂದಿ ಇತರರು ಸೇರಿದಂತೆ 4,06,866 ಮಂದಿ ಬೃಹತ್‌ ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ.
 

Follow Us:
Download App:
  • android
  • ios