ಕೆಲ ದಿನಗಳ ಮಳೆಯಿಂದ ತಂಪಾಗಿದ್ದ ಬೆಂಗಳೂರಿನಲ್ಲಿ ಮತ್ತೆ ತಾಪಮಾನ ಏರಿಕೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಮಳೆಯ ಮುನ್ಸೂಚನೆ ಇಲ್ಲದೆ, ಬಿಸಿಲಿನ ಬೇಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಹನ ಸವಾರರು ಸೇರಿದಂತೆ ನಗರದ ಜನರು ಬಿಸಿಲಿನಿಂದ ತತ್ತರಿಸುತ್ತಿದ್ದಾರೆ.

ಬೆಂಗಳೂರು (ಮೇ.12): ಕೆಲ ದಿನಗಳಿಂದ ಸುರಿದ ಮಳೆಯ ತಂಪಿನಲ್ಲಿ ಬೆಂಗಳೂರು ಜನರು ನಿಟ್ಟುಸಿರು ಬಿಟ್ಟಿದ್ದರ. ಬೇಸಿಗೆ ಆರಂಭದಿಂದ ಉರಿಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ತಂಪಾಗಿತ್ತು. ಬೆಳಗ್ಗೆ ಗಾಳಿ, ಸಂಜೆ ತುಂತುರು ಮಳೆ… ಸಿಲಿಕಾನ್ ಸಿಟಿ ಜನರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಈಗ ನಗರದ ಚಿತ್ರಣವೇ ಬದಲಾಗಿದೆ. ಕಳೆದ ಹದಿನೈದು ದಿನಗಳಿಂದ ಸ್ವಲ್ಪ ಇಳಿಕೆಯಾಗಿದ್ದ ತಾಪಮಾನ ಮತ್ತೆ ಏರಿಕೆಯಾಗತೊಡಗಿದೆ. ಬೆಳಗ್ಗೆಯೇ ಉರಿ ಬಿಸಿಲು ಶುರುವಾಗುತ್ತಿದ್ದು, ಮಧ್ಯಾಹ್ನದ ಬಳಿಕ ರಸ್ತೆಗೆ ಇಳಿಯೋದಕ್ಕೂ ಜನ ಹಿಂದೇಟು ಹಾಕುವ ಸ್ಥಿತಿ ಬಂದಿದೆ.

ವಿಶೇಷವಾಗಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುತ್ತಿರುವ ವಾಹನ ಸವಾರರ ಪರಿಸ್ಥಿತಿ ಹೇಳತೀರದು. ಸಿಗ್ನಲ್ ಬಳಿ ಕೆಲ ನಿಮಿಷ ನಿಂತರೂ ಬೆವರು ಸುರಿಯುವಷ್ಟು ಬಿಸಿ ಹೆಚ್ಚಾಗಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸಿ ಒಳಗೆ ಉಸಿರುಗಟ್ಟುವ ಅನುಭವವಾಗುತ್ತಿದೆ. ಹೆಲ್ಮೆಟ್ ತೆಗೆದರೆ ದಂಡದ ಭಯ, ಹಾಗೆ ಹಾಕಿಕೊಂಡರೆ ಬಿಸಿಲಿನ ಝಳಕ್ಕೆ ತಲೆಯೇ ಫ್ರೈ ಆದಂತ ಅನುಭವದ ಬಗ್ಗೆ ಸವಾರರು ಹೇಳುತ್ತಿರುವುದು ತಮಾಷೆಯಲ್ಲ.

ನಗರದಲ್ಲಿ ಸದ್ಯ ಯಾವುದೇ ರೀತಿಯ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಮುಂದಿನ ಎರಡು ದಿನಗಳು ಇದೇ ಬಿಸಿ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಠ 34.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 23.4 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಇನ್ನೂ KIAL ಪ್ರದೇಶದಲ್ಲಿ ಗರಿಷ್ಠ 34.7 ಡಿಗ್ರಿ ಹಾಗೂ 22.7 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೆಚ್‌ಎಎಲ್ ಏರ್ಪೋರ್ಟ್ ಭಾಗದಲ್ಲಿ ಗರಿಷ್ಠ 34.9 ಡಿಗ್ರಿ ಹಾಗೂ 22 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ನಗರದಲ್ಲೇ ಹೆಚ್ಚು ಬಿಸಿಯ ಪ್ರದೇಶಗಳ ಪಟ್ಟಿಗೆ ಸೇರಿದೆ.

ಮುಂದಿನ 48 ಗಂಟೆಗಳ ಕಾಲ ಇದೇ ರೀತಿಯ ಬಿಸಿ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ