ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ₹350 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಗೋಮಾಳ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ರಾಜಕೀಯ ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎಂದು ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್. ಆರ್. ಆರೋಪಿಸಿದ್ದಾರೆ. ಚನ್ನನರಸಿಂಹಯ್ಯ, ಚಿಕ್ಕ ಹನುಮಂತರಾಯಪ್ಪ, ಗಂಗರಾಜು ಭಾಗಿ
ಬೆಂಗಳೂರು (ಜು. 01): ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ₹350 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಗೋಮಾಳ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ನಡೆಯುತ್ತಿರುವ ರಾಜಕೀಯ ಪ್ರಭಾವಿಗಳ ಹುನ್ನಾರ ಬೆಳಕಿಗೆ ಬಂದಿದೆ. ಈ ಕುರಿತು ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್. ಆರ್. ಅವರು ಗಂಭೀರ ಆರೋಪ ಹೊರಿಸಿದ್ದಾರೆ.
ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಹಾಗೂ ಯಲಚಗುಪ್ಪೆ–ರಾಂಪುರ ಗ್ರಾಮಗಳ ಸರ್ವೆ ನಂ: 19, 20, 21, 27 ಮತ್ತು 4ರ ವ್ಯಾಪ್ತಿಯಲ್ಲಿ 120.37 ಎಕರೆ ಸರ್ಕಾರಿ ಭೂಮಿ ಇದೆ. ಈ ಭೂಮಿಯಿಂದ 59.07 ಎಕರೆ ಬೇರೆ ಬೇರೆ ಸರ್ಕಾರಿ ಯೋಜನೆಗಳಿಗೆ ಬಳಸಲಾಗಿದೆ. ಉಳಿದಿರುವ 61.30 ಎಕರೆ ಬಹು ಅಮೂಲ್ಯ ಗೋಮಾಳ ಭೂಮಿಯ ಮಾರುಕಟ್ಟೆ ಮೌಲ್ಯ ₹350 ಕೋಟಿ ರೂ. ಗಳಷ್ಟು ಆಗಿದೆ. ಈ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು, ಪ್ರಭಾವಿ ರಾಜಕೀಯ ಮುಖಂಡನ ಬೆಂಬಲದೊಂದಿಗೆ ಚನ್ನನರಸಿಂಹಯ್ಯ, ಚಿಕ್ಕ ಹನುಮಂತರಾಯಪ್ಪ ಮತ್ತು ಗಂಗರಾಜು ಎಂಬವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಹಣಿ ದಾಖಲೆಗಳನ್ನು ತಹಶೀಲ್ದಾರ್ ಕಛೇರಿ ಹಾಗೂ ವಿಶೇಷ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕೂರಿಸುವ ಯತ್ನ ನಡೆದಿದೆ.
ಇದೇ ಚಟುವಟಿಕೆಯಲ್ಲಿ, ಚನ್ನೇನಹಳ್ಳಿ ಸರ್ವೆ ನಂ: 21 ರಲ್ಲಿರುವ 4 ಎಕರೆ ಭೂಮಿಯನ್ನು ಲಕ್ಷಾಂತರ ರೂ. ಲಂಚ ಪಡೆದು ನಕಲಿ ದಾಖಲೆಗಳ ಆಧಾರದಲ್ಲಿ ಚನ್ನನರಸಿಂಹಯ್ಯ ಬಿನ್ ಗಂಗಪ್ಪ ಎಂಬಾತನ ಹೆಸರಿಗೆ ಪಹಣಿ ಮಾಡಿಕೊಡಲಾಗಿದೆ. ಈ ಭೂಮಿಯ ಮೌಲ್ಯ ಮಾತ್ರವೇ ₹24 ಕೋಟಿಗೂ ಅಧಿಕವಾಗಿದೆ. ಮಾಜಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್.ಆರ್ ಅವರು ಈ ಬಗ್ಗೆ ಉಪ ವಿಭಾಗಾಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಅವರು ಸಂಬಂಧಿತ ಎಲ್ಲಾ ಪ್ರಸ್ತಾವನೆಗಳನ್ನು ರದ್ದುಪಡಿಸುವ ಭರವಸೆ ನೀಡಿದ್ದಾರೆ.
ತಕ್ಷಣ ಕ್ರಮ ತೆಗೆದುಕೊಳ್ಳಿ!
ಈ ಹಿನ್ನೆಲೆ ಬಗ್ಗೆ ಸರ್ಕಾರದ ಗಮನ ಸೆಳೆಯಲು, ಕಂದಾಯ ಸಚಿವ ಶ್ರೀ ಕೃಷ್ಣ ಭೈರೇಗೌಡ ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ದಾಖಲೆಗಳ ಸಮೇತ ತುರ್ತು ದೂರು ನೀಡಿದ್ದಾರೆ. ಪ್ರಭಾವಿ ನಾಯಕರ ಭೂಮಿ ಕಬಳಿಕೆಗೆ ಕೈಜೋಡಿಸಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ₹350 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಸ್ವತ್ತುಗಳನ್ನು ರಕ್ಷಣೆ ಮಾಡುವ ಜೊತೆಗೆ, ಈಗಾಗಲೇ ಅನ್ಯರಿಗೆ ಪಹಣಿ ಮಾಡಿಕೊಟ್ಟಿರುವ 4 ಎಕರೆ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್. ಆರ್. ಆಗ್ರಹಿಸಿದ್ದಾರೆ.
