ಬೆಂಗಳೂರಿನಲ್ಲಿ ಅಕ್ರಮ ಪಾರ್ಕಿಂಗ್ ತಡೆಯಲು ಜಿಬಿಎ ಮತ್ತು ಸಂಚಾರಿ ಪೊಲೀಸರು ಜಾರಿಗೆ ತಂದಿದ್ದ ಟೋಯಿಂಗ್ ವ್ಯವಸ್ಥೆಯು ಸಮನ್ವಯದ ಕೊರತೆ ಮತ್ತು ಪೂರ್ವಸಿದ್ಧತೆ ಇಲ್ಲದ ಕಾರಣ ಆರಂಭವಾದ ಒಂದು ತಿಂಗಳಲ್ಲೇ ಸ್ಥಗಿತಗೊಂಡಿದೆ. ಏಕಾಏಕಿ ಸ್ಥಗಿತಗೊಳ್ಳಲು ಕಾರಣವೇನು ತಿಳಿಯಿರಿ

ಬೆಂಗಳೂರು (ಮೇ.7): ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಪಾರ್ಕಿಂಗ್‌ಗೆ ಬ್ರೇಕ್ ಹಾಕಲು ಜಿಬಿಎ (Greater Bengaluru Authority) ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಆರಂಭಿಸಿದ್ದ ಟೋಯಿಂಗ್ ವ್ಯವಸ್ಥೆ ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಜಾರಿಗೆ ತಂದಿದ್ದ ಈ ಯೋಜನೆ ಆರಂಭವಾದ ಒಂದೇ ತಿಂಗಳಿಗೆ 'ಟುಸ್' ಆಗಿದೆ.

ಜಿಬಿಎ ಸಂಚಾರಿ ಪೊಲೀಸರ ನಡುವೆ ಸಮನ್ವಯದ ಕೊರತೆ

ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದಿದ್ದ ಈ ಯೋಜನೆ ಇದೀಗ ಆರಂಭಗೊಂಡ ಒಂದೇ ತಿಂಗಳಿಗೆ ಗ್ರಹಣ ಹಿಡಿದಿದೆ. ಜಿಬಿಎ ಮತ್ತು ಸಂಚಾರಿ ಪೊಲೀಸರ ನಡುವಿನ ಸಮನ್ವಯದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಟೋಯಿಂಗ್ ಕಾರ್ಯಾಚರಣೆ ಅರ್ಧದಲ್ಲೇ ನಿಂತುಹೋಗಿದೆ.

ಹಣ ಜಮೆ ಮಾಡಲು ಬ್ಯಾಂಕ್ ಖಾತೆಯೇ ಇಲ್ಲ!

ಅಚ್ಚರಿಯ ವಿಷಯವೆಂದರೆ, ಟೋಯಿಂಗ್ ವೇಳೆ ವಾಹನ ಸವಾರರಿಂದ ಸಂಗ್ರಹಿಸುವ ದಂಡದ ಹಣವನ್ನು ಜಮೆ ಮಾಡಲು ಜಿಬಿಎ ಈವರೆಗೆ ಅಧಿಕೃತ ಬ್ಯಾಂಕ್ ಖಾತೆಯನ್ನೇ ತೆರೆದಿಲ್ಲ. ಇದರೊಂದಿಗೆ ಕಾರ್ಯಾಚರಣೆಗೆ ಅಗತ್ಯವಾದ ಸಿಬ್ಬಂದಿಗಳ ಕೊರತೆ ಕೂಡ ಯೋಜನೆ ಸ್ಥಗಿತಗೊಳ್ಳಲು ಕಾರಣವಾಗಿದೆ.

ವಾಹನಗಳನ್ನ ಸುರಕ್ಷಿತವಾಗಿ ನಿಲ್ಲಿಸಲು ಜಾಗವೇ ಇಲ್ಲ!

ಜಿಬಿಎ ವ್ಯಾಪ್ತಿಯ ಪ್ರತಿ ನಗರಪಾಲಿಕೆಗೆ ತಲಾ ಎರಡು ಟೋಯಿಂಗ್ ವಾಹನಗಳನ್ನು ನೀಡಲಾಗಿತ್ತು. ಇವುಗಳ ನಿರ್ವಹಣಾ ವೆಚ್ಚವನ್ನು ಜಿಬಿಎ ಭರಿಸುತ್ತಿತ್ತು. ಆದರೆ, ಟೋಯಿಂಗ್ ಮಾಡಿದ ವಾಹನಗಳನ್ನು ಸುರಕ್ಷಿತವಾಗಿ ನಿಲ್ಲಿಸಲು ನಗರದಲ್ಲಿ ಸೂಕ್ತ ಜಾಗದ ವ್ಯವಸ್ಥೆ ಮಾಡದ ಕಾರಣ ಯೋಜನೆಗೆ ಹಿನ್ನಡೆಯಾಗಿದೆ.

ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಇನ್ನಷ್ಟು ಹೆಚ್ಚು ಭೀತಿ

ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ 1,000 ರೂ. ಟೋಯಿಂಗ್ ಶುಲ್ಕ ಮತ್ತು 1,000 ರೂ. ದಂಡ ಸೇರಿ ಒಟ್ಟು 2,000 ರೂ. ವರೆಗೆ ದಂಡ ವಿಧಿಸಲಾಗುತ್ತಿತ್ತು. ಈಗ ಯೋಜನೆ ಸ್ಥಗಿತಗೊಂಡಿರುವುದು ನಿಯಮ ಉಲ್ಲಂಘಿಸುವವರಿಗೆ ಖುಷಿ ತಂದಿದ್ದರೂ, ಟ್ರಾಫಿಕ್ ಕಿರಿಕಿರಿ ಹೆಚ್ಚಾಗುವ ಭೀತಿ ಎದುರಾಗಿದೆ.

ಮರುಜಾರಿಗೆ ಸಾರ್ವಜನಿಕರ ಆಗ್ರಹ

ನಗರದ ಸಂಚಾರ ವ್ಯವಸ್ಥೆ ಸುಧಾರಿಸಲು ಮತ್ತು ಪಾದಚಾರಿಗಳ ಸುರಕ್ಷತೆಗಾಗಿ ಟೋಯಿಂಗ್ ಯೋಜನೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ಲೋಪದೋಷಗಳನ್ನು ಸರಿಪಡಿಸಿ ಯೋಜನೆಯನ್ನು ಮರುಜಾರಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.