ಬೆಂಗಳೂರಿನ ಆರ್.ಟಿ. ನಗರದಲ್ಲಿ ತಡರಾತ್ರಿ ಐಸ್‌ಕ್ರೀಮ್ ಪಾರ್ಲರ್ ತೆರೆದಿದ್ದ ವಿಚಾರವಾಗಿ ಪೊಲೀಸರು ಮತ್ತು ಮ್ಯಾನೇಜರ್ ನಡುವೆ ವಾಗ್ವಾದ ನಡೆದಿದೆ. ರಾಜಕಾರಣಿಗಳ ಹೆಸರು ಹೇಳಿ ಅವಾಜ್ ಹಾಕಿದ ಮ್ಯಾನೇಜರ್‌ನನ್ನು ಠಾಣೆಗೆ ಕರೆದೊಯ್ದ ಪೊಲೀಸರು, ನಂತರ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಬೆಂಗಳೂರು(ಜ.26): ತಡರಾತ್ರಿವರೆಗೂ ಐಸ್‌ಕ್ರೀಮ್ ಪಾರ್ಲರ್ ತೆರೆದಿದ್ದ ವಿಚಾರವಾಗಿ ಪಾರ್ಲರ್ ಮ್ಯಾನೇಜರ್ ಹಾಗೂ ಪೊಲೀಸರ ನಡುವೆ ಕಿರಿಕ್ ನಡೆದ ಘಟನೆ ನಗರದ ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯ ವೇಳೆ ಪೊಲೀಸರ ವರ್ತನೆ ಸಾರ್ವಜನಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ತಡರಾತ್ರಿವರೆಗೂ ಓಪನ್ ಇತ್ತು ಪಾರ್ಲರ್
ರಾತ್ರಿ ಸುಮಾರು 11:30 ಗಂಟೆಯಾದರೂ ಐಸ್‌ಕ್ರೀಮ್ ಪಾರ್ಲರ್ ಇನ್ನೂ ವ್ಯವಹಾರ ನಡೆಸುತ್ತಿತ್ತು. ಈ ವೇಳೆ ಗಸ್ತು ತಿರುಗುತ್ತಿದ್ದ ಆರ್.ಟಿ. ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ನಿಯಮದ ಪ್ರಕಾರ ಇಷ್ಟು ಹೊತ್ತಾದರೂ ಶಾಪ್ ಯಾಕೆ ಮುಚ್ಚಿಲ್ಲ ಎಂದು ಮ್ಯಾನೇಜರ್ ಅನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
ಜೀಪ್ ಬಳಿ ತಳ್ಳಾಟ, ಅನುಚಿತ ವರ್ತನೆ ಆರೋಪ
ಗಸ್ತು ವಾಹನದ ಬಳಿ ಮ್ಯಾನೇಜರ್ ತೆರಳಿದಾಗ ಅಲ್ಲಿನ ಪೊಲೀಸ್ ಸಿಬ್ಬಂದಿ ಆತನನ್ನು ತಳ್ಳಿದ್ದಾರೆ ಎನ್ನಲಾಗಿದೆ. ಒಬ್ಬ ಗನ್‌ಮ್ಯಾನ್ ಸೇರಿದಂತೆ ಒಟ್ಟು ಆರು ಜನ ಪೊಲೀಸರು ಸ್ಥಳದಲ್ಲಿದ್ದು, ಮ್ಯಾನೇಜರ್ ಅನ್ನು ಬಲವಂತವಾಗಿ ಜೀಪ್ ಒಳಗೆ ಹತ್ತುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 'ರಾತ್ರಿಯಾದರೆ ಪೊಲೀಸರು ಯಾಕೆ ಈ ರೀತಿ ವರ್ತಿಸುತ್ತಾರೆ?' ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ರಾಜಕಾರಣಿಗಳ ಹೆಸರು ಹೇಳಿ ಮ್ಯಾನೇಜರ್ ಅವಾಜ್
ಮತ್ತೊಂದೆಡೆ, ಪಾರ್ಲರ್ ಮ್ಯಾನೇಜರ್ ಪೊಲೀಸರ ಮೇಲೆಯೇ ಅವಾಜ್ ಹಾಕಿದ್ದಾನೆ ಎನ್ನಲಾಗಿದೆ. 'ನನಗೆ ದೊಡ್ಡ ದೊಡ್ಡ ರಾಜಕಾರಣಿಗಳು ಗೊತ್ತು, ನೀವೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ' ಎಂದು ಮ್ಯಾನೇಜರ್ ಪೊಲೀಸರಿಗೆ ಸವಾಲು ಹಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವರ್ತನೆಯಿಂದ ಕೆರಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಠಾಣೆಯಲ್ಲಿ ಬುದ್ಧಿ ಹೇಳಿ ಬಿಡುಗಡೆ
ಪರಿಸ್ಥಿತಿ ಕೈಮೀರಿದ್ದಕ್ಕೆ ಗಸ್ತು ಸಿಬ್ಬಂದಿ ಮ್ಯಾನೇಜರ್ ಅನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ತಡರಾತ್ರಿ ಅಂಗಡಿ ತೆರೆಯುವುದು ಮತ್ತು ಕರ್ತವ್ಯ ನಿರತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸುವುದು ಸರಿಯಲ್ಲ ಎಂದು ಠಾಣೆಯಲ್ಲಿ ಬುದ್ಧಿ ಹೇಳಿ, ಎಚ್ಚರಿಕೆ ನೀಡಿ ನಂತರ ಆತನನ್ನು ಬಿಟ್ಟು ಕಳುಹಿಸಲಾಗಿದೆ.


