ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಟೆಕ್ಕಿ ಶರ್ಮಿಳಾ ಅವರ ಸಾವು ಅಗ್ನಿ ಅವಘಡದಿಂದ ಸಂಭವಿಸಿದೆ ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸ್ ತನಿಖೆಯಿಂದ ಇದು ಅತ್ಯಾ*ಚಾರ ಯತ್ನದ ನಂತರ ನಡೆದ ಬರ್ಬರ ಕೊಲೆ ಎಂಬುದು ಬಯಲಾಗಿದ್ದು, ನೆರೆಮನೆಯ 18 ವರ್ಷದ ಯುವಕನೇ ಈ ಕೃತ್ಯ ಎಸಗಿದ್ದಾನೆ.

ಬೆಂಗಳೂರು (ಜ.26): ಸಿಲಿಕಾನ್ ಸಿಟಿಯ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಮಂಗಳೂರಿನ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ (ಟೆಕ್ಕಿ) ಶರ್ಮಿಳಾ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಆಘಾತಕಾರಿ ತಿರುವು ಸಿಕ್ಕಿದೆ. ಆರಂಭದಲ್ಲಿ ಅಗ್ನಿ ಅವಘಡದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದ್ದ ಈ ಪ್ರಕರಣ, ಈಗ ಅತ್ಯಾ*ಚಾರ ಯತ್ನ ಮತ್ತು ಬರ್ಬರ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದೆ. ಆರೋಪಿ 18 ವರ್ಷದ ವಿದ್ಯಾರ್ಥಿ ಕರ್ನಲ್ ಕುರೈ ತನ್ನ ವಿಕೃತಿಯನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ವಿಕೃತಿ ಮೆರೆದ ನೆರೆಮನೆಯ ಯುವಕ

ಆರೋಪಿ ಕರ್ನಲ್ ಕುರೈ ಮೃತ ಶರ್ಮಿಳಾ ವಾಸವಿದ್ದ ಮನೆಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ. ಕೇವಲ 18 ವರ್ಷದ ಈ ಯುವಕನಿಗೆ ಶರ್ಮಿಳಾ ಮೇಲೆ ಪ್ರೀತಿ ಇರಲಿಲ್ಲ, ಬದಲಿಗೆ ವಿಕೃತ ಕಾಮವಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸುಮಾರು ಒಂದೂವರೆ ತಿಂಗಳಿನಿಂದ ಪ್ರತಿನಿತ್ಯ ಟೆರಸ್ ಮೇಲೆ ನಿಂತು ಶರ್ಮಿಳಾ ಅವರ ಚಲನವಲನಗಳನ್ನು ಗಮನಿಸುತ್ತಿದ್ದ ಈತ, ಆಕೆ ಕೆಲಸಕ್ಕೆ ಹೋಗುವಾಗ ಮತ್ತು ಬರುವಾಗ ಸದ್ದಿಲ್ಲದೆ ಹಿಂಬಾಲಿಸುತ್ತಿದ್ದ.

ಹತ್ಯೆ ನಡೆದದ್ದು ಹೇಗೆ?

ಜನವರಿ 3 ರಂದು ಶರ್ಮಿಳಾ ಮನೆಯಲ್ಲಿ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಆರೋಪಿ, ಸ್ಲೈಡ್ ಡೋರ್ ಮೂಲಕ ಮನೆ ಒಳಗೆ ನುಗ್ಗಿದ್ದನು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದಾಗ ಶರ್ಮಿಳಾ ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿ, ಆಕೆ ಕೂಗಾಡದಂತೆ ಬಾಯಿ ಒತ್ತಿ ಹಿಡಿದು ಕತ್ತು ಹಿಸುಕಿದ್ದಾನೆ. 'ನನ್ನನ್ನು ಬಿಟ್ಟುಬಿಡು' ಎಂದು ಶರ್ಮಿಳಾ ಕೈಹಿಡಿದು ಬೇಡಿಕೊಂಡರೂ ಕಿಂಚಿತ್ತೂ ದಯೆ ತೋರದ ಕಿರಾತಕ, ಪ್ರಾಣ ಹೋಗುವವರೆಗೂ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

ಸಾಕ್ಷ್ಯ ನಾಶಕ್ಕೆ ಬೆಂಕಿ ಹಚ್ಚಿದ ಕಿರಾತಕ

ಶರ್ಮಿಳಾ ಉಸಿರು ನಿಂತ ಮೇಲೆ, ಇದು ಕೊಲೆ ಎಂದು ಯಾರಿಗೂ ತಿಳಿಯಬಾರದೆಂದು ಆರೋಪಿ ವಿಕೃತ ಸಂಚು ರೂಪಿಸಿದ್ದ. ಹಾಸಿಗೆಯ ಮೇಲೆ ಟಿಶ್ಯು ಪೇಪರ್ ಮತ್ತು ಬಟ್ಟೆಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿ, ಅಗ್ನಿ ಅವಘಡದಂತೆ ಬಿಂಬಿಸಲು ಪ್ರಯತ್ನಿಸಿ ಅದೇ ಸ್ಲೈಡ್ ಡೋರ್ ಮೂಲಕ ಪರಾರಿಯಾಗಿದ್ದ. ಶರ್ಮಿಳಾ ಅವರ ಮೊಬೈಲ್ ಫೋನ್ ಅನ್ನೂ ಕಳ್ಳತನ ಮಾಡಿದ್ದ ಈತ, ನಂತರ ಅದರಲ್ಲಿ ತನ್ನ ಸಿಮ್ ಕಾರ್ಡ್ ಹಾಕಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿರುವ ಪೊಲೀಸರು

ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಶರ್ಮಿಳಾ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಅತ್ಯಾ*ಚಾರ ನಡೆದಿದೆಯೇ ಎಂಬ ಬಗ್ಗೆ ಸ್ಪಷ್ಟನೆ ಪಡೆಯಲು ಪೊಲೀಸರು ಕೆಲವು ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್ (FSL) ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಒಬ್ಬ ಟೆಕ್ಕಿ ಯುವತಿಯ ಪ್ರಾಣ ಹೀಗೆ ವಿಕೃತ ಮನಸ್ಸಿನ ಯುವಕನಿಂದ ಬಲಿಯಾದದ್ದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ.