ಬೆಂಗಳೂರಿನ ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳದವರೆಗಿನ 17 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ನೀಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಅಂದಾಜಿಗಿಂತ 4,600 ಕೋಟಿ ರೂ. ಹೆಚ್ಚು, ಅಂದರೆ 22,267 ಕೋಟಿ ರೂ.ಗೆ ಅದಾನಿ ಸಂಸ್ಥೆ ಬಿಡ್ ಮಾಡಿದ್ದು, ಅಂತಿಮ ನಿರ್ಧಾರ ಸಚಿವ ಸಂಪುಟ ಸಭೆಯಲ್ಲಿ ಆಗಲಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉದ್ದೇಶಿತ 17 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣ ಯೋಜನೆಯ ಗುತ್ತಿಗೆಯನ್ನು ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ (ಎಇಎಲ್‌ಗೆ) ವಹಿಸಲು ಬೆಂಗಳೂರು ಸ್ಮಾರ್ಟ್‌ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ (ಬಿ-ಸ್ಮೈಲ್) ರಾಜ್ಯ ಸರ್ಕಾರಕ್ಕೆ ಕಡತ ರವಾನಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯೋಜನೆ ಅನುಷ್ಠಾನಗೊಳಿಸುತ್ತಿರುವ ಬಿ ಸ್ಮೈಲ್ ಕಳೆದ ವಾರ ಅದಾನಿ ಸಂಸ್ಥೆಗೆ ವಹಿಸುವ ಕುರಿತಾದ ಕಡತವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಅತಿ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿರುವ ಸಂಸ್ಥೆಯ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿರುವುದನ್ನು ಉನ್ನತ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.

ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳವರೆಗಿನ 16.75 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಕರೆದಿದ್ದ ಟೆಂಡರ್‌ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಅದಾನಿ ಸಂಸ್ಥೆ ಬಿಡ್ ಮಾಡಿತ್ತು. ಯೋಜನೆಗೆ 17,698 ಕೋಟಿ ರುಪಾಯಿ ವೆಚ್ಚವಾಗಬಹುದು ಎಂದು ರಾಜ್ಯ ಸರ್ಕಾರ ಅಂದಾಜು ಮಾಡಿತ್ತು. ಆದರೆ, ಟೆಂಡರ್‌ನಲ್ಲಿ 22,267 ಕೋಟಿ ರು.ಗೆ ಅದಾನಿ ಸಂಸ್ಥೆ ಬಿಡ್ ಮಾಡಿದೆ. ಸರ್ಕಾರದ ಅಂದಾಜಿಗಿಂತ 4,600 ಕೋಟಿ ರು. ಹೆಚ್ಚು ಮೊತ್ತಕ್ಕೆ ಅದಾನಿ ಸಂಸ್ಥೆ ಬಿಡ್ ಮಾಡಿದೆ.

ವೈಜ್ಞಾನಿಕ ಸಮೀಕ್ಷೆ ಶುರು

ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅದಾನಿ ಸಂಸ್ಥೆಯಿಂದ ಮಣ್ಣು ಪರೀಕ್ಷೆ, ಭೂಮಿಯ ಮೇಲ್ಮೈ ಸಮೀಕ್ಷೆ, ಕಟ್ಟಡಗಳು ಸೇರಿದಂತೆ ಒಟ್ಟಾರೆ ಸುರಂಗ ನಿರ್ಮಾಣಕ್ಕೆ ಅಗತ್ಯವಿರುವ ವೈಜ್ಞಾನಿಕ ಸಮೀಕ್ಷಾ ಕಾರ್ಯವನ್ನು ನಡೆಸಲಾಗುತ್ತಿದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಸುರಂಗ ರಸ್ತೆಗೆ ಬಿ-ಸ್ಮೈಲ್‌ ಕಳುಹಿಸಿರುವ ಕಡತವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ‘ನಿರ್ಮಾಣ, ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆ’ ಮಾದರಿಯಲ್ಲಿ ಸುರಂಗ ರಸ್ತೆ ನಿರ್ಮಿಸಲಾಗುತ್ತದೆ.

ಇದನ್ನೂ ಓದಿ: ಟೆಕ್ಕಿಯನ್ನು ಬಲಿ ಪಡೆದುಕೊಂಡಿದ್ದ ಅಂಡರ್‌ಪಾಸ್‌ಗೆ 3 ವರ್ಷಗಳ ಬಳಿಕ ದುರಸ್ತಿ ಕಾರ್ಯ

30 ವರ್ಷ ನಿರ್ವಹಣೆ

ಒಂದು ವೇಳೆ ಸುರಂಗ ರಸ್ತೆ ನಿರ್ಮಾಣ ಯೋಜನೆ ಅದಾನಿ ಸಂಸ್ಥೆಗೆ ಗುತ್ತಿಗೆ ನೀಡುವುದು ಅಂತಿಮಗೊಂಡರೆ ಸುರಂಗ ರಸ್ತೆಯನ್ನು ನಿರ್ಮಾಣ ಮಾಡಿ 30 ವರ್ಷಗಳವರೆಗೆ ಅದಾನಿ ಸಂಸ್ಥೆಯೇ ನಿರ್ವಹಣೆ ಮಾಡುತ್ತದೆ. ಯೋಜನೆ ನಿರ್ಮಾಣದ ಶೇ.40ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತದೆ.

ಇದನ್ನೂ ಓದಿ: GBA ವಿರುದ್ಧ 1 ಕಿ.ಮೀ ಚಾಲೆಂಜ್ ಆರಂಭಿಸಿದ ಬೆಂಗಳೂರಿಗರು: ಫುಟ್‌ಪಾತ್‌ಗಾಗಿ ಹುಡುಕಾಟ