ಬೆಂಗಳೂರು ಮತ್ತು ಚೆನ್ನೈ ನಡುವಿನ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಹವಾ ನಿಯಂತ್ರಿತ ಚೇರ್ ಕಾರ್ ಬೋಗಿಯನ್ನು ಜುಲೈ 27, 2025 ರಿಂದ ಸೇರಿಸಲಾಗುವುದು. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಆಸನಗಳು ಲಭ್ಯವಾಗಲಿದ್ದು, ಟಿಕೆಟ್ ಸಮಸ್ಯೆ ನಿವಾರಣೆಯಾಗಲಿದೆ.
ಬೆಂಗಳೂರು (ಜು.25): ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ನಿಲ್ದಾಣ ಮತ್ತು ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವಿನ ಜನಪ್ರಿಯ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಇದೀಗ ಹೆಚ್ಚುವರಿ ಹವಾ ನಿಯಂತ್ರಿತ ಚೇರ್ ಕಾರ್ (AC Chair Car) ಬೋಗಿಯೊಂದನ್ನು ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹೊಸ ಬೋಗಿ ಜುಲೈ 27, 2025 ರಿಂದ ಲಭ್ಯವಿರಲಿದ್ದು, ರೈಲು ಸಂಖ್ಯೆ 12027/12028 ಶತಾಬ್ದಿ ಎಕ್ಸ್‌ಪ್ರೆಸ್‌ಗಳಿಗೆ ಸೇರ್ಪಡೆಯಾಗಲಿದೆ. ಈ ಕ್ರಮದಿಂದ ಪ್ರಯಾಣಿಕರಿಗೆ ಹೆಚ್ಚಿನ ಆಸನಗಳು ಲಭ್ಯವಾಗಲಿದ್ದು, ಹಬ್ಬ, ಹರಿದಿನಗಳು, ದೀರ್ಘ ರಜಾದಿನಗಳು ಸೇರಿದಂತೆ ಕೆಲವು ಬಿಕ್ಕಟ್ಟಿನ ಸಮಯದಲ್ಲಿ ಟಿಕೆಟ್ ದೊರಕದ ಸಮಸ್ಯೆ ಒಂದು ಮಟ್ಟಿಗೆ ನಿವಾರಣೆಯಾಗಲಿದೆ. ಇದುವರೆಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಒಟ್ಟು 17 ಬೋಗಿಗಳು ಇದ್ದವು. ಹೆಚ್ಚುವರಿ ಬೋಗಿಯ ಸೇರ್ಪಡೆಯೊಂದಿಗೆ ಈಗ 18 ಬೋಗಿಗಳ ಸಂಯೋಜನೆಯೊಂದಿಗೆ ಈ ರೈಲುಗಳು ಸಂಚರಿಸಲಿವೆ.
ಹೆಚ್ಚಿದ ಪ್ರಯಾಣದ ಸೌಲಭ್ಯ:
ಬೆಂಗಳೂರು–ಚೆನ್ನೈ ನಡುವೆ ದೈನಂದಿನ ಕೆಲಸಗಳು, ವ್ಯವಹಾರಗಳು, ಆರೋಗ್ಯ ಮತ್ತು ಶಿಕ್ಷಣದ ಕಾರಣದಿಂದ ದಿನವಿಡೀ ಹಲವಾರು ಪ್ರಯಾಣಿಕರು ಈ ಮಾರ್ಗದಲ್ಲಿ ಸಾಗುತ್ತಾರೆ. ಇಂತಹ ಮಹತ್ವದ ದಾರಿಯಲ್ಲಿ ಹೆಚ್ಚುವರಿ ಬೋಗಿ ಸೌಲಭ್ಯ ನೀಡಿರುವುದು ಪ್ರಯಾಣಿಕರಿಗೆ ಹರ್ಷದ ವಿಚಾರವಾಗಿದೆ. ದಕ್ಷಿಣ ರೈಲ್ವೆ ಇಲಾಖೆ ಈ ಬದಲಾವಣೆಯ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಮುಂಗಡ ಬುಕ್ಕಿಂಗ್ ಮೂಲಕ ಆಸನಗಳನ್ನು ಕಾಯ್ದಿರಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಕರೆ ನೀಡಲಾಗಿದೆ.
