ಬೆಂಗಳೂರಿನಲ್ಲಿ ಹತ್ತನೇ ತರಗತಿ ಬಾಲಕನನ್ನು ಸಾಮಾಜಿಕ ಜಾಲತಾಣ ಸ್ನೇಹಿತರು ವಿವಸ್ತ್ರಗೊಳಿಸಿ, ವಿಡಿಯೋ ಮಾಡಿ ಹತ್ತು ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಬಾಲಕನ ಸ್ನೇಹಿತೆಯ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆಡುಗೋಡಿ ಪೊಲೀಸರು ಐಟಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು (ಮೇ 01): ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯೊಂದಿಗೆ ಜಗಳ ಮಾಡಿದ 10ನೇ ಬಾಲಕನನ್ನು ಬಲವಂತವಾಗಿ ಥಳಿಸಿ ವಿವಸ್ತ್ರಗೊಳಿಸಿ ವಿಡಿಯೋ ಮಾಡಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿ 10 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಹತ್ತನೇ ತರಗತಿ ವಿದ್ಯಾರ್ಥಿಯನ್ನ ವಿವಸ್ತ್ರಗೊಳಿಸಿ ಬ್ಲ್ಯಾಕ್ ಮೇಲ್ ಆರೋಪ ಬೆಂಗಳೂರಿನ ಆಡಿಗೋಡಿ ಪೊಲೀಸ್ ಠಾಣೆಯಲ್ಲಿ ಕೇಳಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಸ್ನೇಹಿತರಿಂದ ಕೃತ್ಯ ಎಸಗಲಾಗಿದೆ. ಹಲ್ಲೆಗೊಳಗಾಗಿರೋ ಬಾಲಕನ ಸ್ನೇಹಿತೆಯ ಕುಮ್ಮಕ್ಕಿನಿಂದ ಕೃತ್ಯ ಎಂದು ಆರೋಪ ಮಾಡಲಾಗಿದೆ. ಈ ಘಟನೆಯ ಬಗ್ಗೆ ಸಂತ್ರಸ್ತ ಬಾಲಕನ ತಾಯಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಘಟನೆಯು ಬೆಳಕಿಗೆ ಬಂದಿದೆ.
ಇನ್ನು ಬಾಲಕನಿಂದ ಇಯರ್ ಪಾಡ್ಸ್ ಮತ್ತು ಮೊಬೈಲ್ ಪಡೆದಿದ್ದ ಆರೋಪಿಗಳು, ನಂತರ ಮೊಬೈಲ್ ವಾಪಸ್ ನೀಡಿದ್ದರು. ಆದರೆ, ಬ್ಲೂಟೂತ್ ಬಡ್ಸ್ ಅನ್ನು ವಾಪಸ್ ನೀಡಿರಲಿಲ್ಲ. ಈ ಬಗ್ಗೆ ಕೇಳಿದಾಗ ಕಳೆದ 3 ತಿಂಗಳಿಂದ ಬಾಲಕನ ಸಂಪರ್ಕಕ್ಕೆ ಸಿಗದೇ ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಕಳೆದ ಏ.05ರಂದು ಹಿಂದೆ ಬಾಲಕನನ್ನ ಸಂಪರ್ಕ ಮಾಡಿದ್ದ ಆರೋಪಿಗಳು, ಭೇಟಿ ಮಾಡುವುದಕ್ಕೆ ಕರೆದಿದ್ದಾರೆ. ಆಗ ಬಾಲಕ ಅವರನ್ನು ಭೇಟಿ ಮಾಡಿದಾಗ ಒಂದು ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಜಾಗಕ್ಕೆ ಕರೆದೊಯ್ದಿದ್ದಾರೆ.
ನಂತರ ಬಾಲಕನನ್ನ ಬೆತ್ತಲೆ ಮಾಡಿ ಹಣ ಡಿಮ್ಯಾಂಡ್ ಮಾಡಿದ್ದಾರೆ. ಈ ವೇಳೆ ಬಾಲಕನಿಂದಲೇ ಮಾತನಾಡಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಸಂತ್ರಸ್ತ ಬಾಲಕನಿಂದ ತಾನು ಹುಡುಗಿಯರ ಅಶ್ಲೀಲ ಚಿತ್ರ ತೆಗೆದು ಹಣ ಡಿಮ್ಯಾಂಡ್ ಮಾಡುತ್ತೇನೆ. ಹೀಗೆ, ಹುಡುಗಿಯರ ಅಶ್ಲೀಲ ವಿಡಿಯೋಗಳನ್ನು ಮಾಡಿದ್ದು, ಒಂದು ಹುಡುಗಿಯ ಬಳಿ 50 ಸಾವಿರ ರೂ. ಹಣವನ್ನು ಪಡೆದಿಕೊಂಡಿದ್ದೇನೆ ಎಂದು ಸುಳ್ಳು ಮಾತಾನಾಡಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಇದಾದ ನಂತರ ನೀನು ನಮಗೆ ಈಗ 10,000 ರೂ. ಹಣವನ್ನು ಕೊಡು. ಇಲ್ಲವಾದರೆ ಈ ನಿನ್ನ ನಗ್ನ ವಿಡಿಯೋ ಮತ್ತು ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡಿ ಹಣ ಪಡೆದಿದ್ದಾಗಿ ಹೇಳಿದ ವಿಡಿಯೋ ವೈರಲ್ ಬೆದರಿಕೆ ಹಾಕಿದ್ದಾರೆ ಎಂದು ಬಾಲಕನ ತಾಯಿ ದೂರಿನಲ್ಲಿ ಆರೋಪ ಮಾಡಿದ್ದಾರೆ.
ಕಳೆದ 20 ದಿನಗಳಿಂದ ಭಯದಲ್ಲಿಯೇ ದೂರು ಕೊಡದೇ ಸುಮ್ಮನಿದ್ದ ಬಾಲಕನ ಕುಟುಂಬಸ್ಥರು, ನಂತರ ಇದಕ್ಕೆ ಕಾರಣ ಬಾಲಕನ ಸ್ನೇಹಿತೆಯೇ ಎಂದು ತಿಳಿದುಕೊಂಡಿದ್ದಾರೆ. ಹಲ್ಲೆಗೊಳಗಾದ ಬಾಲಕನಿಗೆ ಹುಡುಗಿಯೊಬ್ಬಳ ಸಂಪರ್ಕವಿತ್ತು. ಆಕೆಯೂ ಸಾಮಾಜಿಕ ಜಾಲತಾಣದಲ್ಲಿ ಈತನಿಗೆ ಪರಿಚಯವಾಗಿದ್ದಳು. ಆದರೆ, ಕೆಲ ದಿನಗಳಿಂದ ಸಂಪರ್ಕ ಖಡಿತವಾಗಿ ಜಗಳವಾಗಿತ್ತು. ಬಾಲಕನಿಗೆ ಬುದ್ದಿ ಕಲಿಸುವ ಸಲುವಾಗಿ ಹುಡುಗಿ ವಿಡಿಯೋ ಮಾಡಿಸಿದ್ದಾಋಎ ಎಂದು ಆರೋಪ ಮಾಡಿದ್ದಾರೆ.
ಇದೀಗ ವಿಡಿಯೋ ಮಾಡಿಕೊಂಡಿರೋ ಆರೋಪಿ ಕೂಡ ಆಕೆಗೆ ವಿಡಿಯೋ ಕಳಿಸೋದಾಗಿ ಹೇಳಿದ್ದಾನಂತೆ. ಆಡುಗೋಡಿ ಠಾಣೆಯಲ್ಲಿ ಹುಡುಗಿ ಸೇರಿದಂತೆ ವಿಡಿಯೋ ಮಾಡಿದವರ ವಿರುದ್ಧ ಐಟಿ ಆ್ಯಕ್ಟ್, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಪ್ರಕರಣ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಹೀನಕೃತ್ಯದ ಈ ಪ್ರಕರಣದ ಬಳಿಕ ಬಾಲಕನ ತಾಯಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಪೊಲೀಸರು ವಿಡಿಯೋ ಮಾಡಿದ ಯುವಕರ ವಿರುದ್ಧ ಹಾಗೂ ಸಹಕಾರ ನೀಡಿದ ಹುಡುಗಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ಬಂಧನವಾಗುವ ನಿರೀಕ್ಷೆಯಿದೆ. ಈ ಘಟನೆ ಪೋಷಕರಿಗೆ, ಶಾಲಾ ಆಡಳಿತಮಂಡಳಿಗೆ ಮತ್ತು ಸಮಾಜದ ಪ್ರತಿಯೊಬ್ಬ ಸದಸ್ಯನಿಗೂ ಎಚ್ಚರಿಕೆಯ ಗಂಟೆಯಾಗಬೇಕಾಗಿದೆ. ಮಕ್ಕಳ ಆತ್ಮವಿಶ್ವಾಸ ಮತ್ತು ಭದ್ರತೆಗೆ ಧಕ್ಕೆಯುಂಟುಮಾಡುವ ಇಂತಹ ಘಟನೆಗಳು ಮರುಕಳಿಸಿದರೆ, ಸುಮ್ಮನಿರದೇ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.


