ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದ ಬಗ್ಗೆ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಘಟನೆಯನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದು ಮತ್ತು ಹಿಂದಿನ ಸರ್ಕಾರಗಳ ಘಟನೆಗಳನ್ನು ಉಲ್ಲೇಖಿಸಿ ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ.
ಬೆಂಗಳೂರು (ಜೂ.7): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಇದರ ಬೆನ್ನಲ್ಲಿಯೇ ರಾಜಕೀಯ ನಾಯಕರ ಅಮಾನವೀಯ ಹೇಳಿಕೆಗಳೂ ಕೂಡ ವೈರಲ್ ಆಗುತ್ತಿದೆ. ಶನಿವಾರ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲ ಕೃಷ್ಣ, ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಅಮಾನವೀಯ ಎನ್ನುವಂಥ ಹೇಳಿಕೆ ನೀಡಿದ್ದಾರೆ.
ಕಾಲ್ತುಳಿತದ ಬೆನ್ನಲ್ಲಿಯೇ ಪ್ರತಿಪಕ್ಷ ನಾಯಕರು ಸರ್ಕಾರದ ಮೇಲೆ ವಾಕ್‌ಪ್ರಹಾರ ಮಾಡಿದ್ದಾರೆ. ಈ ವೇಳೆ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಚಿನ್ನಸ್ವಾಮಿ ಕಾಲ್ತುಳಿತವನ್ನು ಪಹಲ್ಗಾಮ್‌ನಲ್ಲಾದ ಭಯೋತ್ಪಾದಕ ಘಟನೆಗೆ ಹೋಲಿಸಿ ಬೇಳೂರು ಗೋಪಾಲಕೃಷ್ಣ ಮಾತನಾಡಿದ್ದಾರೆ. ಪಹಲ್ಗಾಮ್‌ನಲ್ಲಾಗಿದ್ದು ಭಯೋತ್ಪಾದಕ ಘಟನೆಯಾಗಿದ್ದರೆ, ಚಿನ್ನಸ್ವಾಮಿಯಲ್ಲಿ ಆಗಿರುವುದು ಸರ್ಕಾರದ ದಿವ್ಯ ನಿರ್ಲಕ್ಷ್ಯ ಎನ್ನುವುದು ಈಗಾಗಲೇ ಗೊತ್ತಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಬೇಳೂರು, 'ಇದೊಂದು ಆಕಸ್ಮಿಕ ಘಟನೆ, ತುಂಬಾ ಬೇಸರವಾಗಿದೆ. ಸರ್ಕಾರದ ಮಟ್ಟದಲ್ಲೂ ಯೋಚನೆ ಮಾಡಬೇಕಾಗಿದೆ. ಆದರೆ, ಸಾವನ್ನೇ ಇಟ್ಕೊಂಡು ರಾಜೀನಾಮೆ ಪ್ರಹಸನ ಮಾಡೋದು ಬೇಡ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಬರುವ ನಿರೀಕ್ಷೆ ಇದ್ದಿರಲಿಲ್ಲ. ಆದರೆ, ರಾಜೀನಾಮೆ ಯಾರೆಲ್ಲಾ ನೀಡಬೇಕಿತ್ತೋ ಅವರಿಂದ ಕೊಡಿಸಿದ್ದಾರೆ.
ಇಂತಹ ಘಟನೆ ಹಿಂದೆ ನಡೆಯಲಿಲ್ವಾ? ಮೊನ್ನೆ ಕಾಶ್ಮೀರದಲ್ಲಿ ನಡೆದಿತ್ತು ಅಲ್ವೆ? 26 ಜನ ಸತ್ತರು ಅಲ್ಲವೇ , ಮೋದಿ ರಾಜೀನಾಮೆ ಕೊಟ್ಟರೇ? ಅವರೇನು ಮಾಡಿದರು. ಪಾಕಿಸ್ತಾನದ ಜೊತೆ ಯುದ್ದ ಮಾಡೋಕೆ ಹೋದರು. ಅದೇ ರೀತಿ ನಾವು ಕ್ರಮ ಎನ್ನುವಂತೆ ಅಮಾನತು ಮಾಡಿದ್ದೇವೆ.
ಡಾ.ರಾಜ್‌ಕುಮಾರ್ ಸತ್ತಾಗ ಕುಮಾರಸ್ವಾಮಿ ಅವರು ಗುಂಡೇಟು ಹೊಡೆದರು. ಶೂಟ್ ಮಾಡಿದರು, ಆಗ ಕುಮಾರಸ್ವಾಮಿ ರಾಜೀನಾಮೆ ನೀಡಿದ್ರಾ? ಹಾವೇರಿಯಲ್ಲಿ ರೈತರು ಸತ್ತರು, ಆಗ ಯಡಿಯೂರಪ್ಪ ರಾಜೀನಾಮೆ ನೀಡಿದ್ರಾ? ಇವೆಲ್ಲ ಆಕಸ್ಮಿಕ ಘಟನೆ, ನೋವಲ್ಲಿ ಇದ್ದೇವೆ. ಗೊಂದಲ ಸೃಷ್ಟಿ ಮಾಡಬಾರದು ಎಂದು ಹೇಳಿದ್ದಾರೆ.
10 ಲಕ್ಷ ಸಾಕಾಗೋದಿಲ್ಲ, ಕನಿಷ್ಟ ಪಕ್ಷ 50 ಲಕ್ಷ ಕೊಡಬೇಕು. ನಾನೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸತ್ತವರ ಕುಟುಂಬಸ್ಥರನ್ನ ಇಟ್ಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಮೋದಿ ರಾಜೀನಾಮೆ ಕೊಟ್ಟರೆ ನಾವೂ ರಾಜೀನಾಮೆ ಕೊಡಿಸುತ್ತೇವೆ. ಈ ತಾಕತ್ತು ಇದ್ಯಾ? ಕುಂಭಮೇಳದಲ್ಲಿ ಎಷ್ಟು ಜನ ಸತ್ತರು ಅನ್ನೋದು ಗೊತ್ತಿದೆಯಲ್ವಾ? ಬೆಂಕಿ ಹಚ್ಚೋ ಕೆಲಸ ಮಾಡಬಾರದು ಎಂದಿದ್ದಾರೆ.
ಸಂಭ್ರಮ ಮಾಡೋಕೆ ಹೋಗಿದ್ದು ತಪ್ಪಾ? ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳೋದೇನು ಬಂತು. ಮೊದಲು ಇಂತಹ ಹೇಳಿಕೆ ಕೋಡೋದು ನಿಲ್ಲಿಸಬೇಕು/ ನಾವು ಸಾಗರದಲ್ಲಿ ಸಂಭ್ರಮಮಾಡಿದ್ದು ತಪ್ಪಾ? 26 ಜನರಿಗೆ ಗುಂಡು ಹಾಕಿದಾಗ ಎಲ್ಲಿ ಹೋಗಿದ್ರಿ? ಮೋದಿ, ಅಮಿತ್ ಶಾ ರಾಜೀನಾಮೆ ಕೊಡಿಸಿದ್ರೆ ನಾವೂ ಸಿಎಂ , ಡಿಸಿಎಂ ರಾಜೀನಾಮೆ ಕೊಡಿಸುತ್ತೇವೆ. ಘಟನೆಗೆ ಕ್ರಮ ಎನ್ನುವಂತೆ ಕಮಿಷನರ್ ಸಸ್ಪೆಂಡ್ ಮಾಡಿದ್ದೇವೆ. ಅಶೋಕ್ ಅವರು ಬೆಂಕಿ ಹಚ್ಚೋಕೆ ಕರೆಕ್ಟ್ ಇದ್ದಾರೆ. ಬೆಂಕಿ ಹಚ್ಚೋಕೆ ಮಾಡುತ್ತಿದ್ದಾರೆ. ಗೃಹ ಸಚಿವರು ಸೇರಿ ಎಲ್ಲರೂ ಸರಿಯಾಗಿ ನಿಭಾಯಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕು. ಅವರ ಸಂಧರ್ಭದಲ್ಲಿ ನಾನೇ ಇದ್ದೇ. ನಾಲ್ಕು ಜನರಿಗೆ ಗುಂಡು ಹಾಕಿದರು. ಆಗ ಅವರು ರಾಜೀನಾಮೆ ನೀಡಿದ್ದರೇ? ಅವರಿಗೆ ಚಟ , ಅದಕ್ಕೆ ಮಾತಾಡಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಮಾಡುತ್ತಿದ್ದಾರೆ, ಅದಕ್ಕೆ ಖಂಡಿಸುತ್ತೇವೆ ಎಂದು ಬೇಳೂರು ಹೇಳಿದ್ದಾರೆ.