ಕ್ಷೇತ್ರದ ಸರ್ವಾಂಗೀಣಾಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ ಜನರ ಮೂಲಭೂತ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. 

ರಿಪ್ಪನ್‍ಪೇಟೆ (ಮೇ.16): ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಾಗಿ 56 ಸಾವಿರ ಕೋಟಿ ರು. ಹಣ ವ್ಯಯವಾಗುತ್ತಿದ್ದರೂ ಅಭಿವೃದ್ಧಿ ಕಾರ್ಯಗಳು ಆನುದಾನದ ಕೊರತೆಯಿಂದ ಕುಂಠಿತಗೊಂಡಿಲ್ಲ. ಕ್ಷೇತ್ರದ ಸರ್ವಾಂಗೀಣಾಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ ಜನರ ಮೂಲಭೂತ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ರಿಪ್ಪನ್‍ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬಾಳೂರು ಬೋರ್ಡ್‌ಗಲ್‌ನಿಂದ ಕಾಳೇಶ್ವರ ಸಂಪರ್ಕ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ಬಾಳೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಗ್ರಂಥಾಲಯದ ಅರಿವಿನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಯ ನಂತರ ಗ್ರಾಮ ಪಂಚಾಯಿತ್ ಅಡಳಿತ ಮಂಡಳಿಯವರು ಗ್ರಂಥಾಲಯ ಕಟ್ಟಡಕ್ಕೆ ಅನುದಾನ ಕೊಡಿಸುವಂತೆ ಮನವಿ ಸಲ್ಲಿಸಿದರು. ಅದರಂತೆ ಸರ್ಕಾರದಿಂದ 5 ಲಕ್ಷ ರು ಅನುದಾನವನ್ನು ಬಿಡುಗಡೆಗೊಳಿಸಲಾಗಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಇಂದು ಲೋಕಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇದರೊಂದಿಗೆ ಅರಿವಿನ ಕೇಂದ್ರಕ್ಕೆ ಸಾರ್ವಜನಿಕರ ಸಹಕಾರ ಪಡೆದು ಅಗತ್ಯವಿರುವಂತಹ ಲೇಖಕರ, ಸಾಹಿತಿಗಳ ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು.

ನಮಗೂ ಶಕ್ತಿ ಯೋಜನೆ ಸೌಲಭ್ಯ ಕಲ್ಪಿಸಿ: ಸಾಗರ-ತೀರ್ಥಹಳ್ಳಿ ಮತ್ತು ಹೊಸನಗರ-ಶಿವಮೊಗ್ಗ ಮಾರ್ಗದಲ್ಲಿ ರಾಜ್ಯ ಸರ್ಕಾರಿ ಬಸ್‍ಗಳನ್ನು ಬಿಡುವ ಮೂಲಕ ಸರ್ಕಾರದ ಶಕ್ತಿ ಯೋಜನೆಯ ಸೌಲಭ್ಯ ಕಲ್ಪಿಸಿ ಎಂದು ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಶೀಘ್ರದಲ್ಲಿ ಸಾಗರ ಆನಂದಪುರ- ರಿಪ್ಪನ್‍ಪೇಟೆ ತೀರ್ಥಹಳ್ಳಿ ಮಾರ್ಗ ಹೊರನಾಡು ಶೃಂಗೇರಿ ಧರ್ಮಸ್ಥಳ ಸುಬ್ರಮಣ್ಯ ಮತ್ತು ಸಾಗರ ಮಣಿಪಾಲ ಚಿಕ್ಕಮಂಗಳೂರು ಮಾರ್ಗವಾಗಿ ಸರ್ಕಾರಿ ಬಸ್ ಓಡಿಸಲಾಗುವುದೆಂದು ಭರವಸೆ ನೀಡಿದರು. ಬಾಳೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಅಚಾರ್ ಆಧ್ಯಕ್ಷತೆ ವಹಿಸಿದ್ದರು.

ಗ್ರಾಮೀಣರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಿ: ಶಾಸಕ ಪ್ರದೀಪ್ ಈಶ್ವರ್

ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರುಮೌಳಿಗೌಡರು, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪಗೌಡ, ಗ್ಯಾರಂಟಿ ಯೋಜನೆಯ ತಾಲೂಕು ಆಧ್ಯಕ್ಷ ಚಿದಂಬರ್, ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಬಾಳೂರು ಗ್ರಾಪಂ ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ರಾಜುಗೌಡ, ದಿವಾಕರ, ಶಿವಮ್ಮ, ಲೀಲಾವತಿ, ಪಾರ್ವತಮ್ಮ, ರೇಖಾ, ಶಶಿಕಲಾ, ಬಾಳೂರು ಘಟಕದ ಕಾಂಗ್ರೆಸ್ ಅಧ್ಯಕ್ಷ ಸಂತೋಷ, ಸಣ್ಣಕ್ಕಿ ಮಂಜು, ಶಿವು ವಡಾಹೊಸಳ್ಳಿ, ಉಮಾಕರ್ ತಮ್ಮಡಿಕೊಪ್ಪ, ರಿಪ್ಪನ್‍ಪೇಟೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ, ಗಣಪತಿಗವಟೂರು, ಪ್ರಕಾಶಪಾಲೇಕರ್, ಮಹಾಲಕ್ಷ್ಮಿ, ಸಾರಾಭಿ, ಆಶೀಫ್ ಭಾಷಾ, ಆರ್.ವಿ.ನಿರೂಫ್ ಕುಮಾರ್, ರವೀಂದ್ರಕೆರೆಹಳ್ಳಿ ಮತ್ತಿತರರಿದ್ದರು.