ಬೆಳಗಾವಿಯ ಅಮನ್ ನಗರದಲ್ಲಿ, ಚಳಿಯಿಂದ ರಕ್ಷಿಸಿಕೊಳ್ಳಲು ಕಿಟಕಿ ಇಲ್ಲದ ಕೋಣೆಯಲ್ಲಿ ಬೆಂಕಿ ಹಾಕಿಕೊಂಡು ಮಲಗಿದ್ದ ಮೂವರು ಯುವಕರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದೇ ಘಟನೆಯಲ್ಲಿ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ (ನ.19): ಚಳಿ ತಡೆಯಲು ಕೋಣೆಯಲ್ಲಿ ಹಾಕಿದ್ದ ಬೆಂಕಿಯಿಂದ ದಟ್ಟಹೊಗೆ ಉಂಟಾದ ಪರಿಣಾಮ ಉಸಿರುಗಟ್ಟಿ ಮೂವರು ಯುವಕರು ಮಲಗಿದ್ದಲಿಯೇ ಮೃತಪಟ್ಟಿರುವ ಘಟನೆ ನಗರದ ಅಮನ್ ನಗರದಲ್ಲಿ ಮಂಗಳವಾರ ಸಂಭವಿಸಿದೆ.
ಮತ್ತೊಬ್ಬ ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ಆಗಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದೆ. ಕಿಟಕಿಯಿಲ್ಲದ ಕೋಣೆಯಲ್ಲಿ ಬಾಗಿಲು ಭದ್ರಪಡಿಸಿ ಮಲಗಿದ್ದಾಗ ದುರಂತ ಸಂಭವಿಸಿದೆ. ರಿಹಾನ್ (22), ಸರಫರಾಜ್ (22), ಮೋಯಿನ್ (23 ) ಮೃತಪಟ್ಟ ಯುವಕರು. ಮತ್ತೊಬ್ಬ ಶಾನವಾಜ್ (19) ಸ್ಥಿತಿ ಗಂಭೀರವಾಗಿದೆ. ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಅಕ್ಕಪಕ್ಕದ ಮನೆಯ ಮಕ್ಕಳೇ ಆಗಿದ್ದಾರೆ.
ಚಳಿಗೆ ಹಾಕಿದ್ದ ಬೆಂಕಿ ಹೊಗೆ, ಉಸಿರುಗಟ್ಟಿ ಮಲಗಿದ್ದಲ್ಲೇ ಸಾವು!
ಮಕ್ಕಳು ಸೋಮವಾರ ಸಂಜೆಯಿಂದಲೂ ಕಾಣದಿದ್ದಾಗ ಮಂಗಳವಾರ ಪಾಲಕರು ಹುಡುಕಾಡಿದ್ದಾರೆ. ಸಂಜೆ ಅನುಮಾನ ಬಂದು ಹುಡುಗರು ಉಳಿದುಕೊಂಡಿದ್ದ ಕೋಣೆಯ ಬಾಗಿಲನ್ನು ತಟ್ಟಿದ್ದಾರೆ. ಬಾಗಿಲು ತೆರೆಯದಿದ್ದಾಗ ಬಾಗಿಲನ್ನು ಒಡೆದು ಹಾಕಿ ಒಳಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾಳಮಾರುತಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಿಟಕಿ ಕೂಡ ಕ್ಲೋಸ್ ಆಗಿತ್ತು!
ಸೋಮವಾರ ನಾಲ್ವರು ಯಾವುದೋ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಮರಳಿದ ಯುವಕರು ಚಳಿ ತೀವ್ರವಾಗಿದ್ದರಿಂದ ರೂಮ್‌ಅನ್ನು ಲಾಕ್ ಮಾಡಿ, ಬಾಂಡ್ಲಿಗೆ ಇದ್ದಿಲನ್ನು ಹಾಕಿ, ಬೆಂಕಿ ಹಾಕಿಕೊಂಡು ಮಲಗಿದ್ದರು. ಇದೇ ವೇಳೆ ಅವರು ಸೊಳ್ಳೆ ನಿರೋಧಕ ಕಾಯಿಲ್‌ಗಳನ್ನು ಹಾಕಿ, ನಿದ್ರೆಗೆ ಜಾರಿದ್ದಾರೆ. ಬೆಂಕಿಯಿಂದ ಬಂದ ಹೊಗೆ ಕೋಣೆಯನ್ನು ತುಂಬಿಕೊಂಡಿದ್ದು ಉಸಿರಾಟದ ಸಮಸ್ಯೆ ಉಂಟಾಗಿದೆ. ಅಲ್ಲದೇ, ಆಮ್ಲಜನಕದ ಕೊರತೆ ಉಂಟಾಗಿದೆ. ಇದರಿಂದಾಗಿ ಮೂವರು ಯುವಕರು ಒದ್ದಾಡಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಯುವಕರು ಮಲಗಿದ ಕೋಣೆಗೆ ಕಿಟಕಿಗಳೇ ಇಲ್ಲ. ಬಾಗಿಲನ್ನು ಕೂಡ ಹಾಕಿಕೊಂಡು ಮಲಗಿದ್ದಾರೆ. ಹೀಗಾಗಿ ಹೊಗೆ ದಟ್ಟವಾಗಿ ಆವರಿಸಿ, ಆಮ್ಲಜನಕದ ಕೊರತೆಯಾಗಿದೆ. ಇದರಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.


